ಕುಮಟಾ; ಬಾಂಬ್ ಮಾದರಿ ವಸ್ತು ಪತ್ತೆ, ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ
ಕುಮಟಾ, ಅಕ್ಟೋಬರ್ 27; ಕುಮಟಾ ಪಟ್ಟಣದ ಡಾ. ಎ. ವಿ. ಬಾಳಿಗಾ ಕಾಲೇಜು ಬಳಿಯ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಬಾಂಬ್ ಮಾದರಿಯ ವಸ್ತುವೊಂದು ಪತ್ತೆಯಾಗಿದ್ದು, ಈ ಸುದ್ದಿ ಪಟ್ಟಣದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ 100- 150 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದ್ದು, ಈ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬಾಂಬ್ ಪತ್ತೆಯಾದ ಪ್ರದೇಶದ ಸಮೀಪದಲ್ಲೇ ರೈಲು ನಿಲ್ದಾಣ ಇರುವ ಹಿನ್ನಲೆ ಕುಮಟಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತೀವ್ರ ಶೋಧ ಕೈಗೊಂಡು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಸಂಜೆ ವೇಳೆ ವಾಯುವಿಹಾರಕ್ಕೆ ಬಂದ ಕೆಲವರು ಕಾಲೇಜು ಹಿಂಭಾಗದಲ್ಲಿ ಅನುಮಾನಾಸ್ಪದವಾಗಿ ಬಿದ್ದಿದ್ದ ಬಾಂಬ್ ರೂಪದಲ್ಲಿರುವ ವಸ್ತುವನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಎಚ್ಚೆತ್ತ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾಲೇಜು ಸುತ್ತಲೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಸಂಶಯಾಸ್ಪದ ವಸ್ತು ನೋಡಲು ಐಇಡಿ ಬಾಂಬ್ ಮಾದರಿಯಲ್ಲಿ ಕಾಣುತ್ತಿದ್ದು, ಬಾಂಬ್‌ಗೆ ಅಳವಡಿಸಿದಂತೆ ವಯರ್‌ಗಳು ಇರುವುದು ಕಂಡುಬಂದಿದೆ.
ಕಾಲೇಜು ಹಿಂಭಾಗದಲ್ಲಿ ಬಾಂಬ್‌ನಂತಹ ವಸ್ತುಗಳು ಹೇಗೆ ಬಂತು? ಎನ್ನುವುದು ಯಕ್ಷ ಪ್ರಶ್ನೆಯಾಗಿದ್ದು, ಸ್ಥಳೀಯರು ಸಮೀಪದಲ್ಲಿ ಓಡಾಡಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸಂಶಯಾಸ್ಪದ ವಸ್ತುವಿನ ಬಳಿ ಯಾರೂ ತೆರಳದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಭದ್ರಿನಾಥ್ ಭೇಟಿ ನೀಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳ, ಶ್ವಾನದಳ ಸಹ ಸ್ಥಳದಲ್ಲಿ ಬಿಡುಬಿಟ್ಟಿದ್ದು ಕಾರವಾರದಿಂದ ಆ್ಯಂಟಿ ಸಬೋಟೇಜ್ ಚೆಕ್ ಟೀಂ (ASC) ಸಹ ಆಗಮಿಸಿದೆ. ಸದ್ಯ ಪತ್ತೆಯಾಗಿರುವ ಸಂಶಯಾಸ್ಪದ ವಸ್ತು ಅಸಲಿಗೆ ಬಾಂಬ್ ಇರಬಹುದೇ ಎನ್ನುವುದು ಇನ್ನೂ ಸಹ ಖಚಿತವಾಗಿಲ್ಲವಾಗಿದ್ದು, ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಕುಮಟಾಕ್ಕೆ ಆಗಮಿಸುತ್ತಿದೆ.
ಬಾಂಬ್ ಮಾದರಿ ವಸ್ತು ಪತ್ತೆ ವಿಚಾರ ಕುಮಟಾ ಪಟ್ಟಣದಾದ್ಯಂತ ಕಾಡ್ಗಿಚ್ಚಿನಂತೆ ಹರಡಿದ್ದು, ಕಾಲೇಜು ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಸದ್ಯ ಬಾಂಬ್ ಪತ್ತೆಯಾದ ಪ್ರದೇಶದ ಸುತ್ತಮುತ್ತಲೂ ಖಾಕಿ ಕಣ್ಗಾವಲಿರಿಸಿದ್ದು, ಸುತ್ತಲಿನ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿರುವವರ ವಿಚಾರಣೆಗೆ ಮುಂದಾಗಿದೆ.

ಬಾಂಬ್ ಪತ್ತೆಯಾದ ಪಾಲಿಟೆಕ್ನಿಕ್ ಕಾಲೇಜು ಸಮೀಪದಲ್ಲೇ ರೈಲು ನಿಲ್ದಾಣವೂ ಇರುವ ಹಿನ್ನಲೆ ಮತ್ತಷ್ಟು ಆತಂಕ ಎದುರಾಗಿದ್ದು ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.
Recommended Video
ಈ ಕುರಿತು 'ಒನ್ ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, "ವಸ್ತು ಬಾಂಬ್ ಮಾದರಿಯಲ್ಲಿರುವುದರಿಂದ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ಬಂದ ಬಳಿಕ, ಒಂದು ವೇಳೆ ಪರಿಶೀಲನೆಯಲ್ಲಿ ಅದು ಬಾಂಬ್ ಎಂದು ಖಚಿತವಾದಲ್ಲಿ ಅದರ ನಿಷ್ಕ್ರಿಯಕ್ಕೆ ಸಂಬಂಧಿಸಿ ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.












Click it and Unblock the Notifications