ಕಾರವಾರ ಶಾಸಕಿ ರೂಪಾಲಿ ನಾಯ್ಕ ವಿರುದ್ಧ 40% ಕಮಿಷನ್ ಆರೋಪ: ಆಣೆ ಪ್ರಮಾಣಕ್ಕೆ ಕರೆದ ಗುತ್ತಿಗೆದಾರ
ಭ್ರಷ್ಟಾಚಾರ ಆರೋಪ ಮಾಡಿರುವ ಮಾಧವ ನಾಯಕ ವಿರುದ್ಧ ಕಿಡಿಕಾರಿರುವ ಶಾಸಕಿ ರೂಪಾಲಿ ನಾಯ್ಕ "ದಾಖಲೆ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲಿ. ಈಗಾಗಲೇ ಅವರ ವಿರುದ್ಧ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ" ಎಂದಿದ್ದಾರೆ.
ಕಾರವಾರ, ಮಾರ್ಚ್ 8: ರಾಜ್ಯದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬರುತ್ತಿದ್ದಂತೆ 40% ಕಮಿಷನ್ ಆರೋಪ ಕೂಡ ಮತ್ತೆ ಚರ್ಚೆಗೆ ಬಂದಿದೆ. ಇತ್ತ ಕಾರವಾರದಲ್ಲಿಯೂ ಬಿಜೆಪಿ ಶಾಸಕಿ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಜಿಲ್ಲಾ ಗುತ್ತಿಗೆದಾರ ಸಂಘದವರು ಇದೀಗ ಮಾಡಿರುವ ಆರೋಪಗಳೆಲ್ಲವೂ ದಾಖಲೆ ಇಟ್ಟೇ ಮಾಡಿರುವುದಾಗಿ ಆಣೆ ಪ್ರಮಾಣ ಮಾಡಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರುಗಳಿಂದ ಆರೋಪ ಪ್ರತ್ಯಾರೋಪಗಳು ಜೋರಾಗಿದೆ. ಅದರಲ್ಲಿಯೂ ಕಳೆದ ಕೆಲ ದಿನಗಳ ಹಿಂದೆ ಚೆನ್ನಗಿರಿಯ ಬಿಜೆಪಿ ಶಾಸಕನ ಪುತ್ರನ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಕೋಟಿ ಕೋಟಿ ಕಂತೆ ನೋಟುಗಳನ್ನು ಹೊರತೆಗೆದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದಿರುವುದು ಭ್ರಷ್ಟಾಚಾರ ಆರೋಪಗಳಿಗೆ ಪುಷ್ಟಿ ಸಿಕ್ಕಂತಾಗಿದ್ದು 40% ಪರ್ಷಂಟ್ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ.

ಕಾರವಾರದಲ್ಲೇ ಮೊದಲು ಕೇಳಿ ಬಂದಿದ್ದ 40% ಭ್ರಷ್ಟಾಚಾರದ ವಿರುದ್ಧ ಮತ್ತೊಮ್ಮೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಾಧವ ನಾಯಕ ಗುಡುಗಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೊದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದಿದ್ದಾರೆ.
ಜೊತೆಗೆ ದಾಖಲೆ ಇಟ್ಟುಕೊಂಡೆ ಆರೋಪ ಮಾಡಿದ್ದು, ನಾನು ಯಾವುದೇ ಸುಳ್ಳು ಆರೋಪ ಮಾಡಿಲ್ಲ ಎಂದು ಮಾಧವ ನಾಯಕ ಗಣಪತಿ ಮೂರ್ತಿ ಮೇಲೆ ಆಣೆ ಮಾಡಿ ಪ್ರಮಾಣಿಕರಿಸಿದ್ದಾರೆ. ಅಲ್ಲದೇ ಶಾಸಕಿಗೆ ತಾವು ಕಮಿಷನ್ ಪಡೆದಿಲ್ಲ. ಯಾವುದೇ ಸುಳ್ಳು ಹೇಳಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡಲಿ ಸಾಬಿತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಇನ್ನು ಶಾಸಕರು ತಮ್ಮ ವಿರುದ್ಧ ಮಾತಾಡಬಾರದು ಎಂದು ಇಂಜೆಕ್ಷನ್ ಆರ್ಡರ್ ತಂದು ನನ್ನ ಬಾಯಿ ಮುಚ್ಚಿಸಿದ್ದಾರೆ. ಆದರೆ ಪ್ಯಾಕೇಜ್ ಮಾಡಿ ಗುತ್ತಿಗೆ ನೀಡುವ ಕಾರಣ ಸ್ಥಳೀಯ ಗುತ್ತಿಗೆದಾರರು ಕೆಲಸ ಕಳೆದುಕೊಂಡಿದ್ದಾರೆ. ಶಾಸಕರು ವೈಯಕ್ತಿಕವಾಗಿ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ. ಅವರ ವಿರುದ್ಧ ಮಾಡಿರುವ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಿದ್ದೇನೆ ಎಂದು ಮಾಧವ ನಾಯಕ ತಿಳಿಸಿದ್ದಾರೆ.
ಗುತ್ತಿಗೆದಾರರ ಆರೋಪಕ್ಕೆ ಶಾಸಕಿ ರೂಪಾಲಿ ತಿರುಗೇಟು
ಇನ್ನು ಭ್ರಷ್ಟಾಚಾರ ಆರೋಪ ಮಾಡಿರುವ ಮಾಧವ ನಾಯಕ ವಿರುದ್ಧ ಕಿಡಿಕಾರಿರುವ ಶಾಸಕಿ ರೂಪಾಲಿ ನಾಯ್ಕ "ದಾಖಲೆ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲಿ. ಈಗ ಪ್ಯಾಕೇಜ್ ಕಾಮಗಾರಿ ಟೆಂಡರ್ ಆಗಿರುವುದು ಸೈಲ್ ಆಪ್ತರಿಗೆ ಸಂಬಂಧಿಸಿದ ಕಂಪನಿಗೆ ಸೇರಿದೆ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಲು ಮಾಧವ ನಾಯಕ ಪ್ರಯತ್ನಿಸುತಿದ್ದಾರೆ. ಈಗಾಗಲೇ ಅವರ ವಿರುದ್ಧ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಶಾಸಕಿ ರೂಪಾಲಿ ನಾಯ್ಕ ತಿರುಗೇಟು ನೀಡಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಜಟಾಪಟಿ ನಡುವೆ ಅಂಕೋಲಾ ತಾಲೂಕಿನ ತಹಶೀಲ್ದಾರರ ಕಚೇರಿ ಮುಂದೆ ಹಾಲಕ್ಕಿ ಸುಗ್ಗಿ ಕುಣಿತದ ವೇಳೆ ಪರಸ್ಪರ ಎದುರಾಗಿದ್ದಾರೆ. ಆದರೆ ಇಬ್ಬರೂ ಮುಖ ನೋಡಿಕೊಳ್ಳಲಿಲ್ಲ. ಸುಗ್ಗಿ ಕುಣಿತದ ವೀಕ್ಷಣೆಯ ವೇಳೆ ಒಂದು ಕಡೆ ಸೈಲ್ ಮತ್ತು ಬೆಂಬಲಿಗರು ನಿಂತರೆ, ಇನ್ನೊಂದು ಕಡೆ ರೂಪಾಲಿ ಮತ್ತವರ ಬೆಂಬಲಿಗರು ನಿಂತಿದ್ದರು. ಸುಮಾರು ಅರ್ಧ ಗಂಟೆ ಕುಣಿತ ವೀಕ್ಷಿಸಿದ ಶಾಸಕಿ ಕಚೇರಿ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಹೊರಬಂದ ಬಳಿಕ ಸೈಲ್ ಮತ್ತವರ ಬೆಂಬಲಿಗರು ತೆರಳಿ ಪೂಜೆ ಸಲ್ಲಿಸಿದರು.
ಒಟ್ಟಾರೆ ಚುನಾವಣೆ ಬೆನ್ನಲ್ಲೇ ಭ್ರಷ್ಟಾಚಾರ ಆರೋಪ ಪ್ರತ್ಯಾರೋಪಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೇ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಬ್ರಹ್ಮಾಂಡ ಭ್ರಷ್ಟಾಚಾರದ ಜೊತೆಗೆ ಕಾರವಾರದಲ್ಲಿಯೂ 40% ಆರೋಪ ಆಣೆ ಪ್ರಮಾಣ ತಲುಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತಿದ್ದು ಮುಂದೆ ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications