ಭಟ್ಕಳದಲ್ಲಿ ಲಾಡ್ಜ್ ಗೆ ಕರೆಸಿಕೊಂಡು ಯುವಕನನ್ನು ಕೊಚ್ಚಿ ಕೊಂದ ತಂಡ
ಕಾರವಾರ, ಅಕ್ಟೋಬರ್ 20: ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಶ್ಯಾನಭಾಗ್ ರೆಸಿಡೆನ್ಸಿಯಲ್ಲಿ (ಅಕ್ಷಯ ಲಾಡ್ಜ್) ಯುವಕನೊಬ್ಬನನ್ನು ಗುಂಪೊಂದು ಶನಿವಾರ ರಾತ್ರಿ ಬರ್ಬರವಾಗಿ ಕೊಲೆ ಮಾಡಿದೆ. ಭಟ್ಕಳ ಪುರವರ್ಗದ ಅಫಾನ್ ಜಬಾಲಿ (26) ಹತ್ಯೆಯಾದ ಯುವಕ. ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಪರಿಚಯದವರೊಬ್ಬರ ಮದುವೆಗೆಂದು ರಜಾ ಪಡೆದು, ಶನಿವಾರ ಬೆಳಗ್ಗೆ ಮುಂಬೈನಿಂದ ಭಟ್ಕಳಕ್ಕೆ ಬಂದಿದ್ದ.
ಶ್ಯಾನಭಾಗ ರೆಸಿಡೆನ್ಸಿಯಲ್ಲಿ ಮಂಗಳೂರು ಮೂಲದ ಕೆಲವು ಯುವಕರನ್ನೂ ಒಳಗೊಂಡು ಒಟ್ಟು ನಾಲ್ವರು ತಂಗಿದ್ದರು. ಈ ವೇಳೆ ಕರೆ ಮಾಡಿ, ಅಫಾನ್ ನನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಈ ವೇಳೆ ಯಾವುದೋ ವಿಷಯಕ್ಕೆ ಮಾತಿಗೆ ಮಾತು ಬೆಳೆದಿದೆ. ಚರ್ಚೆ ವಿಕೋಪಕ್ಕೆ ಹೋಗಿ, ಅಫಾನ್ ನ ಮುಖಕ್ಕೆ ಬಟ್ಟೆ ಮುಚ್ಚಲಾಗಿದೆ. ಕುತ್ತಿಗೆಗೆ ಟವೆಲ್ ನಿಂದ ಬಿಗಿದು, ಕಾಲು- ಕೈಗಳನ್ನು ಬಟ್ಟೆಯಿಂದ ಕಟ್ಟಿ, ಹರಿತವಾದ ಆಯುಧಗಳಿಂದ ದೇಹದ ಮೇಲೆ ಹಲ್ಲೆ ಮಾಡಿದ್ದಾರೆ.

ಆ ಬಳಿಕ ರಕ್ತದ ಮಡುವಿನಲ್ಲೇ ಅಫಾನ್ ನನ್ನು ಬಿಟ್ಟು ಓಡಿ ಹೋಗಿದ್ದಾರೆ. ಈ ನಾಲ್ವರು ಹತ್ಯಾಕೋರರ ಪೈಕಿ ಒಬ್ಬನು ಅಫಾನ್ ನ ಮನೆಯ ಸಮೀಪದವನಾದ ಇಕ್ಬಾಲ್ ಎಂಬಾತ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಉಳಿದವರು ಪರಾರಿಯಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications