ಜಮೀರ್ ಸೇರಿ 3 ಕಾಂಗ್ರೆಸ್ ಶಾಸಕರು ಅನರ್ಹತೆ ಭೀತಿಯಿಂದ ಬಚಾವ್
ಬೆಂಗಳೂರು, ಮೇ 18: ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಡ್ಡಮತದಾನ ಮಾಡಿ ಅನರ್ಹತೆಯ ತೂಗುಗತ್ತಿ ಏಳು ಜನ ಶಾಸಕರಿಗೆ ಕೊನೆಗೂ ರಿಲೀಫ್ ಸಿಕ್ಕಿದೆ.
ಸ್ಪೀಕರ್ ಹುದ್ದೆಯಿಂದ ಕೆಳಗಿಳಿಯುವ ಕೆಲವೇ ನಿಮಿಷಗಳ ಮೊದಲು ಸ್ಪೀಕರ್ ಕೆ.ಬಿ. ಕೋಳಿವಾಡ ಏಳು ಜನ ಶಾಸಕರ ವಿರುದ್ಧದ ಅನರ್ಹತೆಯ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಶಾಸಕರಾದ ಜಮೀರ್ ಅಹಮದ್ ಖಾನ್, ರಮೇಶ್ ಬಂಡಿಸಿದ್ದೇಗೌಡ, ಎನ್ ಚೆಲುವರಾಯಸ್ವಾಮಿ, ಎಚ್‌ಸಿ ಬಾಲಕೃಷ್ಣ, ಅಹಮದ್ ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್, ಅಖಂಡ ಶ್ರೀನಿವಾಸಮೂರ್ತಿ ಇವರು 2017ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರಾದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದ್ದರು.

ಈ ಕಾರಣಕ್ಕಾಗಿ ಇವರನ್ನು ಅನರ್ಹಗೊಳಿಸುವಂತೆ ಜೆಡಿಎಸ್ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆಸ್ಪೀಕರ್ ಈವರೆಗೂ ಅರ್ಜಿಯನ್ನು ವಿಲೇವಾರಿ ಮಾಡದೆ ಹಾಗೆಯೇ ಇಟ್ಟುಕೊಂಡಿದ್ದರು.ಅನರ್ಹತೆ ಎದುರಿಸುತ್ತಿದ್ದ ಏಳು ಶಾಸಕರ ಪೈಕಿ ಜಮೀರ್ ಅಹಮದ್ ಖಾನ್, ಭೀಮಾ ನಾಯಕ್ ಹಾಗೂ ಅಖಂಡ ಶ್ರೀನಿವಾಸ ಮೂರ್ತಿ ಮೂವರು ಮಾತ್ರ ಗೆದ್ದಿದ್ದರು.
ಹಾಗಾಗಿ ನಾಳೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ವಿಶ್ವಾಸಮತ ಕೋರುತ್ತಿರುವ ಹಿನ್ನಲೆಯಲ್ಲಿ ಹಂಗಾಮಿ ಸ್ಪೀಕರ್ ಭೋಪಯ್ಯ ಅಧಿಕಾರವಹಿಸಿಕೊಂಡರೆ ಈ ಮೂರು ಮಂದಿ ಶಾಸಕರನ್ನು ಅನರ್ಹಗೊಳಿಸಬಹುದೆಂಬ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಜನರ ಶಾಸಕರ ಅನರ್ಹ ಅರ್ಜಿಯನ್ನು ಕೆಬಿ ಕೋಳಿವಾಡ್ ಕೊನೆಯ ಸಮಯದಲ್ಲಿ ವಜಾಗೊಳಿಸಿರುವುದರಿಂದ ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ಬಚಾವಾಗಿದ್ದಾರೆ.











Click it and Unblock the Notifications