ಸ್ವಾಮಿ ಡೀಲ್: ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧ ದೂರು ಸಿಬಿಐಗೆ ವರ್ಗಾವಣೆ !
ಬೆಂಗಳೂರು, ನ. 18: ಆರ್ಎಸ್‌ಎಸ್ ಲೀಡರ್ ಸೋಗಿನಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಂದ ಹಣ ಪಡೆದು ವಂಚಿಸಿರುವ ಯುವರಾಜ ಸ್ವಾಮಿಗೆ ಲಂಚ ಕೊಟ್ಟವರಿಗೂ ಸಂಕಷ್ಟ ಎದುರಾಗಿದೆ. ಯುವರಾಜ ಸ್ವಾಮಿಗೆ ಅಕ್ರಮ ಹಣ ನೀಡಿದ ಆರೋಪದಡಿ ಮೂವರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಎಫ್ಐಆರ್ ದಾಖಲಿಸಿತ್ತು. ಸಂವಿಧಾನಾತ್ಮಕ ಹುದ್ದೆ ಪಡೆಯಲು ಯುವರಾಜ ಸ್ವಾಮಿಗೆ ಕೋಟಿ ಕೋಟಿ ಹಣ ನೀಡಿದ ಆರೋಪಕ್ಕೆ ಗುರಿಯಾಗಿರುವ ಹೈಕೋರ್ಟ್ ಇಬ್ಬರು ನಿವತ್ತ ನ್ಯಾಯಧೀಶರ ವಿರುದ್ಧ ಸಿಬಿಐ ತನಿಖೆ ನಡೆಯುವ ಸಾಧ್ಯತೆಯಿದೆ.
ಸಂವಿಧಾನಾತ್ಮಕ ರಾಜ್ಯಪಾಲ ಹುದ್ದೆ ಪಡೆಯುವ ಸಲುವಾಗಿ ವಂಚಕ ಯುವರಾಜ ಸ್ವಾಮಿಗೆ ಎಂಟು ಕೋಟಿ ರೂ. ಲಂಚ ನೀಡಿರುವ ಆರೋಪ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾ. ಇಂದ್ರಕಲಾ ಮತ್ತು ನ್ಯಾ. ಎನಿತ್ ಕುಮಾರ್ ಎಂ.ಸಿ. ಇಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುವರಾಜ ಸ್ವಾಮಿ ಎಂಬ ಡೀಲ್ ಮಾಸ್ಟರ್ ಗೆ ಕೋಟ್ಯಂತರ ರೂ. ಲಂಚ ನೀಡಿದ ಆರೋಪ ಸಿಸಿಬಿ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಯುವರಾಜ ಸ್ವಾಮಿಗೆ ಲಂಚ ನೀಡಿರುವ ಅಧಿಕಾರಿಗಳು ಮತ್ತು ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿತ್ತು. ಯುವರಾಜ ಸ್ವಾಮಿಗೆ ಲಂಚ ನೀಡಿದ ಆರೋಪ ಸಂಬಂಧ ಮೂವರು ಆರೋಪಿತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಮೂರು ಪ್ರತ್ಯೇಕ ಎಫ್ಐಆರ್ ದಾಖಲಿಸಿದೆ. ನಿವೃತ್ತ ನ್ಯಾ. ಎನಿತ್ ಕುಮಾರ್ ಮತ್ತು ಇಂದ್ರಕಲಾ ವಿರುದ್ಧದ ದೂರುಗಳನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿದೆ. ಸಂವಿಧಾನಾತ್ಮಕ ಹುದ್ದೆಗಳನ್ನು ಡೀಲ್ ಮಾಡಲು ಭ್ರಷ್ಟಾಚಾರ ಎಸಗಿರುವ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧ ಸಿಬಿಐ ತನಿಖೆ ನಡೆಸುವ ಸಾಧ್ಯತೆಯಿದೆ.
ಕೊಟ್ಟವರೇ ಈಗ ಕೋಡಂಗಿಗಳು:
ನಿವೃತ್ತ ಎಸ್ಪಿ ಪಾಪಯ್ಯ ಎಂಬುವರ ಮೂಲಕ ನಿವೃತ್ತ ನ್ಯಾ. ಇಂದ್ರಕಲಾ ಅವರನ್ನು ಪರಿಚಯಿಸಿಕೊಂಡಿದ್ದ ಯುವರಾಜ ಸ್ವಾಮಿ, ನೀವು ಭವಿಷ್ಯದಲ್ಲಿ ರಾಜ್ಯಪಾಲರಾಗುತ್ತೀರಿ ಎಂದು ಭವಿಷ್ಯ ನುಡಿದಿದ್ದನಂತೆ. ಇದನ್ನೇ ನಂಬಿದ್ದ ನಿವೃತ್ತ ನ್ಯಾಯಮೂರ್ತಿಗಳು ರಾಜ್ಯಪಾಲ ಹುದ್ದೆ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಇಂದ್ರಕಲಾ ಮತ್ತು ಅವರ ಅಪ್ತ ಬಳಗದಿಂದ ಸುಮಾರು ಎಂಟು ಕೋಟಿ ರೂ. ಹಣವನನ್ನು ಯುವರಾಜ ಸ್ವಾಮಿ ಪೀಕಿದ್ದಾನೆ.
ಇಂದ್ರಕಲಾ ಅವರೇ ಸ್ವತಃ 3.77 ಕೋಟಿ ರೂ. ಹಣವನ್ನು ಯುವರಾಜ ಸ್ವಾಮಿಗೆ ನೀಡಿದ್ದರು. ಬಿಜೆಪಿ ಪಾರ್ಟಿ ಫಂಡ್ ಹೆಸರಿನಲ್ಲಿ ನಿವೃತ್ತ ನ್ಯಾ. ಇಂದ್ರಕಲಾ ಮತ್ತು ಅವರ ಆಪ್ತ ಬಳಗದಿಂದ 8.27ಕೋಟಿ ರೂ. ಹಣವನ್ನು ವಸೂಲಿ ಮಾಡಿದ್ದ. ಆದರೆ ಯಾವುದೇ ಹುದ್ದೆಯನ್ನು ಕೊಡಿಸಿರಲಿಲ್ಲ. ಇಂದ್ರಕಲಾ ಆಪ್ತ ವಿನಯ್ ಸೇರಿದಂತೆ ಅನೇಕರ ಖಾತೆಯಿಂದ ಯುವರಾಜ ಸ್ವಾಮಿ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಬಗ್ಗೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ ತಿದ್ದುಪಡಿ ಪ್ರಕಾರ ಲಂಚ ತೆಗೆದುಕೊಳ್ಳುವುದು ಅಪರಾಧವೋ? ಲಂಚ ಕೊಡುವುದು ಇಲ್ಲಿ ಅಪರಾಧವೇ. ಇನ್ನ ರಾಜ್ಯಪಾಲರ ಹುದ್ದೆ ಗಿಟ್ಟಿಸುವ ಹೆಸರಿನಲ್ಲಿ ವಹಿವಾಟು ಆಗಿರುವ ಕಾರಣ ಜನಾಧಿಕಾರ ಸಂಘರ್ಷ ಪರಿಷತ್ ಎಸಿಬಿಗೆ ನೀಡಿದ್ದ ದೂರನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಎಂಟು ಕೋಟಿ ರೂ. ಆದಾಯದ ಮೂಲದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಉತ್ತರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತೆಗೆದುಕೊಂಡಿದ್ದಕ್ಕಿಂತಲೂ ಕೊಟ್ಟಿದ್ದೂ ಕೂಡ ದೊಟ್ಟ ಪ್ರಮಾದ ಎಂಬಂತಾಗಿದೆ.

ನಿವೃತ್ತ ನ್ಯಾ. ಎನಿತ್ ಕುಮಾರ್‌ಗೂ ಮೋಸ:
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನಿತ್ ಕುಮಾರ್ ಅವರಿಗೆ ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವ ಆಸೆ ಹುಟ್ಟಿಸಿ ಯುವರಾಜ್ ಸ್ವಾಮಿ 30 ಲಕ್ಷ ರೂ. ಪೀಕಿದ್ದಾನೆ. ಹಣ ಕೊಟ್ಟು ಮೋಸ ಹೋದ ಬಗ್ಗೆ ಎನಿತ್ ಕುಮಾರ್ ದೂರು ದಾಖಲಿಸಿಲ್ಲ. ಈ ಎಲ್ಲಾ ಸಂಗತಿ ಸಿಸಿಬಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಎನಿತ್ ಕುಮಾರ್ ವಿರುದ್ಧವೂ ಎಸಿಬಿಗೆ ದೂರು ನೀಡಲಾಗಿತ್ತು. ಆದರೆ, ದೂರು ಎಸಿಬಿ ವ್ಯಾಪ್ತಿಗೆ ಬಾರದ ಕಾರಣ ಸಿಬಿಐಗೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ದೂರುದಾರರಿಗೆ ಹಿಂಬರಹ ನೀಡಲಾಗಿದೆ. ಇದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಲಂಚ ತೆಗೆದುಕೊಂಡವನಿಗಿಂತಲೂ ಕೊಟ್ಟವರೇ ಸಂಕಷ್ಟದಲ್ಲ ಸಿಲುಕಿದ್ದಾರೆ.
ಇದೇ ಪ್ರಕರಣದಲ್ಲಿ ಆಯಕಟ್ಟಿನ ಹುದ್ದೆಗಳಿಗಾಗಿ ಯುವರಾಜ್ ಸ್ವಾಮಿಗೆ ಕೋಟಿ - ಕೋಟಿ ನೀಡಿದ್ದ ಪ್ರಕರಣ ಸಂಬಂಧ ಗೋವಿಂದಯ್ಯ, ನರಸಿಂಹಸ್ವಾಮಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಇದೇ ಹೊಸ್ತಿನಲ್ಲಿ ಇಬ್ಬರು ನಿವತ್ತ ನ್ಯಾಯಾಧೀಶರ ವಿರುದ್ಧ ನೀಡಿದ್ದ ದೂರನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಯುವರಾಜ್ ಸ್ವಾಮಿ ವಂಚನೆ ಪ್ರಕರಣಗಳಲ್ಲಿ ಸಿಸಿಬಿ ಪೊಲೀಸರಿಂದ ದಾಳಿಗೆ ಒಳಗಾಗಿದ್ದ. ಆ ಬಳಿಕ ಯುವರಾಜ ಸ್ವಾಮಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸುಧೀಂದ್ರರೆಡ್ಡಿ ಎಂಬ ಉದ್ಯಮಿ ನೀಡಿದ ದೂರಿನ ಮೇಲೆ ಯುವರಾಜ ಸ್ವಾಮಿಯನ್ನು ಬಂಧಿಸಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ತನಿಖೆ ನಡಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ತನಿಖೆಯಲ್ಲಿ ಡೀಲಿಂಗ್ ವೃತ್ತಾಂತ ಬೆಳಕಿಗೆ ಬಂದಿತ್ತು.