Yuva Nidhi: 'ಯುವನಿಧಿ'ಗೆ ಜನವರಿಯಲ್ಲಿ ಚಾಲನೆ: ಅರ್ಹತೆ, ಬೇಕಾದ ದಾಖಲೆಗಳ ಸಂಪೂರ್ಣ ಮಾಹಿತಿ
ಬೆಂಗಳೂರು, ಡಿಸೆಂಬರ್ 11: ಕಾಂಗ್ರೆಸ್ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನರಿಗೆ ಪಂಚ ಗ್ಯಾರಂಟಿಗಳನ್ನು ನೀಡಿತ್ತು. ಮಹಿಳೆಯರು, ಯುವ ಜನತೆಯನ್ನು ಗುರಿಯಾಗಿಸಿಕೊಂಡು ರಾಜ್ಯದ ಜನರಿಗೆ ಅನುಕೂಲವಾಗುವ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಪೂರೈಸಿದೆ.
ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ, ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಇನ್ನೂರು ಯುನಿಟ್ ಉಚಿತ ವಿದ್ಯುತ್ ಹಾಗೂ ಅನ್ನ ಭಾಗ್ಯ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡಿದೆ. ಇನ್ನು ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿಯ ಪ್ರಾರಂಭಕ್ಕೂ ಮೂಹರ್ತ ನಿಗದಿಯಾಗಿದೆ.

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆ ಆರಂಭಕ್ಕೆ ಜನವರಿಯಿಂದ ಚಾಲನೆ ಸಿಗಲಿದೆ. ಯುವನಿಧಿ ಯೋಜನೆಯನ್ನು ಹೊಸ ವರ್ಷದ ಉಡುಗೊರೆಯಾಗಿ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ. 2024ರ ಜನವರಿಯಿಂದಲೇ ಯುವನಿಧಿ ಯೋಜನೆ ಜಾರಿಯಾಗಲಿದ್ದು, ಚಾಲನೆಯ ದಿನಾಂಕ ಘೋಷಣೆಯಷ್ಟೇ ಬಾಕಿ ಇದೆ. ನಿಗದಿತ ದಿನಾಂಕವನ್ನು ಕೂಡ ರಾಜ್ಯ ಸರ್ಕಾರ ಸದ್ಯದಲ್ಲೇ ಪ್ರಕಟಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ 143 ಕಾರ್ಯಕ್ರಮಗಳಲ್ಲಿ 83 ಯೋಜನೆಗಳು ಜಾರಿಯಾಗಿವೆ. ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆ ಜಾರಿಯಾಗಿದ್ದು, ರಾಜ್ಯದ ಜನರು ಇದರ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದೀಗ ಐದನೇ ಯುವನಿಧಿ ಜನವರಿಯಲ್ಲಿ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚಿಗೆ ತಿಳಿಸಿದ್ದರು.
ಯುವನಿಧಿ ಯೋಜನೆಗೆ ಯಾರು ಅರ್ಹರು..?
ಯುವನಿಧಿ ಯೋಜನೆಯನ್ನು ವಿದ್ಯಾವಂತ ನಿರುದ್ಯೋಗಿಗಳಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. 2022- 23ನೇ ಸಾಲಿನಲ್ಲಿಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲಾ ಪದವೀಧರರು ಈ ಯುವನಿಧಿ ಯೋಜನೆ ಪಡೆಯಲು ಅರ್ಹರಾಗಿದ್ದಾರೆ. ಪದವೀಧರರಿಗೆ 3,000 ರೂಪಾಯಿ ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸರ್ಕಾರದಿಂದ ಸಿಗಲಿದೆ. ಈ ಭತ್ಯೆಯು ಅಭ್ಯರ್ಥಿಗೆ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ವರೆಗೆ ಸರ್ಕಾರ ನೀಡಲಿದೆ.

ಯುವನಿಧಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು..?
ಯುವನಿಧಿಗೆ ಅರ್ಜಿ ಸಲ್ಲಿಸಲು ಮೊದಲು ಅಭ್ಯರ್ಥಿ ಕರ್ನಾಟಕದವರಾಗಿರಬೇಕು. ಕರ್ನಾಟಕದ ನಿವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ, ಹತ್ತನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ(ಅನ್ವಯಿಸಿದಲ್ಲಿ), ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣಪತ್ರ ದಾಖಲೆಯನ್ನೊಳಗೊಂಡ ಸ್ವಯಂ ಘೋಷಣಾ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.
ಯುವನಿಧಿಗೆ ಷರತ್ತುಗಳೇನು..?
ರಾಜ್ಯ ಸರ್ಕಾರದಿಂದ ನೀಡುವ ಈ ಯುವನಿಧಿ ಯೋಜನೆ ಪದವಿ ಅಥವಾ ಡಿಪ್ಲೊಮಾ ಮುಗಿಸಿ ಆರು ತಿಂಗಳಾದರೂ ಉದ್ಯೋಗ ಸಿಗದೆ ಇರುವವರಿಗೆ ನಿಗಲಿದೆ. ಈ ಯೋಜನೆ ಒಬ್ಬ ಅಭ್ಯರ್ಥಿಗೆ ಎರಡು ವರ್ಷ ಮಾತ್ರ ಸಿಗಲಿದ್ದು, ಎರಡು ವರ್ಷದಲ್ಲಿ ಅಭ್ಯರ್ಥಿಗೆ ಉದ್ಯೋಗ ಸಿಕ್ಕರೆ ಸರ್ಕಾರದಿಂದ ಬರುವ ಭತ್ಯೆ ಸ್ಥಗಿತಗೊಳ್ಳಿದೆ. ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿಅ ರ್ಜಿ ಸಲ್ಲಿಸಬೇಕು. ಪ್ರತಿ ತಿಂಗಳು ಡಿಬಿಟಿ ಮೂಲಕ ಸರ್ಕಾರದಿಂದ ಹಣ ಪಾವತಿ ಮಾಡಲಾಗುತ್ತದೆ. ಆದರೆ ಒಂದು ವಿಚಾರದ ಬಗ್ಗೆ ಗಮನವಿರಲಿ ಉದ್ಯೋಗ ದೊರೆತ ನಂತರ ಅಭ್ಯರ್ಥಿ ಸರ್ಕಾರಕ್ಕೆ ತಿಳಿಸದೇ ಇದ್ದರೆ ಭಾರೀ ಮೊತ್ತದ ದಂಡವನ್ನು ಸರ್ಕಾರ ವಿಧಿಸಲಿದೆ.












Click it and Unblock the Notifications