Yuvanidhi Scheme: ಯೋಜನೆ ಫಲಾನುಭವಿಯಾಗಲು ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ? ಷರತ್ತು, ಏನು ದಾಖಲೆ ಬೇಕು? ಇಲ್ಲಿ ತಿಳಿಯಿರಿ
ಬೆಂಗಳೂರು, ಜನವರಿ 12: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದನೇ ಗ್ಯಾರೆಂಟಿ ಯೋಜನೆ ಯುವನಿಧಿಗೆ (Yuvanidhi Scheme) ಇಂದು (ಜ.12) ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡುತ್ತಿದ್ದಾರೆ. ಈಗಾಗಲೇ ಸಾವಿರಾರು ಅಭ್ಯರ್ಥಿಗಳು ಯೋಜನೆಯ ಫಲಾನುಭವಿ ಆಗಲು ಅರ್ಜಿ ಸಲ್ಲಿಸಿದ್ದಾರೆ.
ಹೊಸ ವರ್ಷದ ವೇಳೆ ಯುವಕರಿಗೆ, ಪದವಿ ಮುಗಿದ ಉದ್ಯೋಗ ಸಿಗದ ನಿರುದ್ಯೋಗಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

ನಿರುದ್ಯೋಗಿ ಪದವೀಧರರಿಗೆ ಸರ್ಕಾರ ಈ ಯೋಜನೆಯಡಿ ಮಾಸಿಕ 3000 ರೂಪಾಯಿ ನೆರವನ್ನು ಎರಡು ವರ್ಷದ ಅವಧಿಗೆ ನೀಡಲಿದೆ.
ಹಾಗಾದರೆ ಈ 'ಯುವನಿಧಿ ಯೋಜನೆ'ಗೆ ನೀವು ಕೂಡ ಫಲಾನುಭವಿ ಆಗಲು ಏನು ಮಾಡಬೇಕು. ಯಾರೆಲ್ಲ ಅರ್ಹರು?, ಆನ್‌ಲೈನ್‌ನಲ್ಲಿ ಎಲ್ಲಿ ಅರ್ಜಿ ಸಲ್ಲಿಸಬೇಕು?, ಏನೆಲ್ಲ ದಾಖಲೆಗಳು ಬೇಕು?, ಷರತ್ತುಗಳು ಏನು? ಎಂಬೆಲ್ಲ ಮಾಹಿತಿ ತಿಳಿಯಲು ಮುಂದೆ ಓದಿ.
ಯುವನಿಧಿಗೆ ಅರ್ಹರು ಯಾರು?
ಸ್ವಾಮಿ ವಿವೇಕಾನಂದ ಜಯತಿ ದಿನದಂದು ಸರ್ಕಾರ ಜಾರಿ ಮಾಡಿರುವ ಈ 'ಯುವನಿಧಿ ಯೋಜನೆ'ಗೆ ನಿರುದ್ಯೋಗಿ ಪದವೀಧರರ ಅರ್ಹರು. 2022-23ರಲ್ಲಿ ಯಾವುದೇ ಪದವಿ ಪೂರ್ಣ ಗೊಳಿಸಿ ಆರು ತಿಂಗಳಾದರೂ (180 ದಿನ) ಉದ್ಯೋಗ ಸಿಗದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇವರಿಗೆ ಸರ್ಕಾರ ಮಾಸಿಕ 3000 ರೂಪಾಯಿ ಆರ್ಥಿಕ ನೆರವು ನೀಡಲಿದೆ.

ಇನ್ನೂ ಡಿಪ್ಲೋಮಾ ಪದವೀಧರರಿಗೆ ಮಾಸಿಕ 1500 ರೂಪಾಯಿ ನೆರವು ಒದಗಿಸಲಿದೆ. ಈ ಯುವನಿಧಿ ಸಹಾಯಧನವು ಫಲಾನುಭವಿಗಳಿಗೆ ಯೋಜನೆ ಅರ್ಹತೆ ಆಗಿ ಕೆಲವೇ ತಿಂಗಳಲ್ಲಿ ಉದ್ಯೋಗ ಸಿಕ್ಕರೆ ಅಲ್ಲಿವರೆಗೂ ಮುಂದುವರಿಯುತ್ತದೆ. ಇಲ್ಲವೇ ಎರಡು ವರ್ಷಗಳ ವರೆಗೆ ಮುಂದುವರೆಸಲು ಸರ್ಕಾರ ತೀರ್ಮಾನಿಸಿದೆ.
ಅರ್ಜಿ ಸಲ್ಲಿಕೆಗೆ ಏನೆಲ್ಲ ದಾಖಲೆಗಳು ಬೇಕು?
* ಅರ್ಜಿ ಸಲ್ಲಿಸುವ ನಿರುದ್ಯೋಗಿ ಪದವಿಧರರ ಕರ್ನಾಟಕದವನಾಗಿರಬೇಕು
* ಕರ್ನಾಟಕದ ನಿವಾಸಿ ಆಗಿರುವ ಬಗ್ಗೆ ಸೂಕ್ತ ದಾಖಲೆ ಬೇಕು
* 2nd PUC ಮತ್ತು ಪದವಿ ಉತ್ತೀರ್ಣದ ಅಂಕಪಟ್ಟಿ
* ಆಧಾರ ಕಾರ್ಡ್ ಜತೆಗೆ ಅಗತ್ಯವಿದ್ದರೆ ಜಾತಿ ಪ್ರಮಾಣ ಪತ್ರ ಬೇಕು
* ಬ್ಯಾಂಕ್ ಖಾತೆ ವಿವರ
* ಆದಾಯ ಪ್ರಮಾಣ ಪತ್ರ ಬೇಕು.
'ಯುವನಿಧಿ' ಷರತ್ತುಗಳನ್ನು ತಿಳಿದುಕೊಳ್ಳಿ
* ಯಾವುದೇ ಪದವಿ/ ಡಿಪ್ಲೋಮಾ ಪಾಸಾಗಿ 180 ದಿನವಾದರೂ ಉದ್ಯೋಗ ಸಿಗದವರು ಮಾತ್ರ ಅರ್ಜಿ ಸಲ್ಲಿಸಬೇಕು.
* ಕನ್ನಡಿಗರಿಗೆ ಮಾತ್ರ ಯೋಜನೆ ಲಾಭ ಪಡೆಯಲು ಸಾಧ್ಯ
* ಯುವನಿಧಿ ಸೌಲಭ್ಯ ಎರಡು ವರ್ಷದ ವರೆಗೆ ಮಾತ್ರ ಲಭ್ಯ
* ಶಿಶಿಕ್ಷ (ಅಪ್ರೆಂಟಿಸ್) ವೇತನ ಪಡೆಯುವವರಿಗೆ ಈ ಆರ್ಥಿಕ ನೆರವು ಸಿಗುವುದಿಲ್ಲ
* ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಮಾಡುವ ಅಭ್ಯರ್ಥಿಗಳಿಗೆ ಯೋಜನೆ ನೆರವು ಸಿಗಲ್ಲ.
* ಸರ್ಕಾರಿ ಯೋಜನೆಯಡಿ ಸಾಲ ಪಡೆದು ಸ್ವಂತ ಉದ್ಯಮ ನಡೆಸುವವರಿಗೆ ಈ ಯೋಜನೆ ಸಹಾಯಕ್ಕೆ ಅರ್ಹರಾಗುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ? ವಿಧಾನದ ಮಾಹಿತಿ
* ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
* ಅಭ್ಯರ್ಥಿಗಳು ಈ ವೆಬ್‌ಸೈಟ್ ಗೆ https://sevasindhugs.karnataka.gov.in/ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
* ವೆಬ್‌ಸೈಟ್‌ನಲ್ಲಿ ಯುವನಿಧಿ ಕಾಲಂಗೆ ತೆರಳಿ ಐಡಿ ಪಾಸವರ್ಡ್ ಕೊಟ್ಟು, ಅಗತ್ಯ ದಾಖಲೆ ನಮೂದಿಸಬೇಕು.
* ಇಲ್ಲವೇ ನಿಮ್ಮ ಹತ್ತಿರ ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಯೋಜನೆಗೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
* ತಮ್ಮ ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಣೆ ಇರಬೇಕು. ಅರ್ಜಿ ಸಲ್ಲಿಕೆ ಬಳಿಕ ತಪ್ಪು ಮಾಹಿತಿ, ತಪ್ಪು ಘೋಷಣೆ ಕಂಡು ಬಂದಲ್ಲಿ ಅಂತವರಿಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಅರ್ಜಿ ಸಲ್ಲಿಸಿದ 61 ಸಾವಿರ ಮಂದಿ
ಈಗಾಗಲೇ ರಾಜ್ಯ ಸರ್ಕಾರ ಗೃಹ ಜ್ಯೋತಿ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಯುವನಿಧಿಗೆ ಇಂದು ಅಧಿಕೃತ ಚಾಲನೆ ನೀಡಿದೆ. ಈಗಾಗಲೇ ಯುವನಿಧಿಗೆ ಅರ್ಜಿ ಆಹ್ವಾನಿಸಲಾಗಿತ್ತು. 2022-23ರಲ್ಲಿ ಒಟ್ಟು 5.30ಲಕ್ಷ ಮಂದಿ ವೃತ್ತಿಪರ ಕೋರ್ಸ್ (ಪದವಿ)/ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಅದರಲ್ಲಿ ಯೋಜನೆಗಾಗಿ ಈವರೆಗೆ ಒಟ್ಟು 61,700 ಮಂದಿ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications