ಯುವ ನಿಧಿ ಯೋಜನೆ: ಅಧಿಕೃತ ಆದೇಶ ಹೊರಡಿಸಿದ ಸರ್ಕಾರ: ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ
ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿದೆ. ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ಸಾವಿರ ರುಪಾಯಿ ನೀಡುವ ಯುವ ನಿಧಿ ಯೋಜನೆ ಕೂಡ ಇದರಲ್ಲಿ ಪ್ರಮುಖವಾಗಿದೆ.
ಈಗ ಯುವ ನಿಧಿ ಯೋಜನೆ ಕುರಿತಂತೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದ್ದು ಯುವ ನಿಧಿ ಪಡೆಯಲು ಇರಬೇಕಾದ ಅರ್ಹತೆಗಳು, ಮಾನದಂಡಗಳನ್ನು ವಿವರವಾಗಿ ತಿಳಿಸಿದೆ. 2022-23 ರ ಸಾಲಿನಲ್ಲಿ ಪದವಿ ಪಡೆದವರು ಮಾತ್ರ ಈ ಯುವನಿಧಿ ಯೋಜನೆಯಡಿ ಫಲನಾನುಭವಿಗಳಾಗಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.

2023ರ ವರ್ಷದಲ್ಲಿ ಪದವಿಯಲ್ಲಿ ತೇರ್ಗಡೆಯಾಗಿ 180 ದಿನಗಳಾದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳು (ವೃತ್ತಿಪರರ ಕೋರ್ಸ್‌ಗಳು ಸೇರಿ) ಪ್ರತಿ ತಿಂಗಳು 3000 ರುಪಾಯಿ ಪಡೆಯಬಹುದಾಗಿದೆ. ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500 ರುಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳವರೆಗೆ ಪಡೆಯಬಹುದಾಗಿದೆ.
ಷರತ್ತು ಮತ್ತು ನಿಬಂಧನೆಗಳು
1) ಪದವಿ / ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ.
2) ಈ ಸೌಲಭ್ಯ ಎರಡು ವರ್ಷಗಳವರೆಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ, ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಭತ್ಯೆಯನ್ನು ನೇರ ಫಲಾನುಭವಿ ಯೋಜನೆ (DBT) ಅಡಿಯಲ್ಲಿ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಣೆ ಮಾಡಲು ವಿಫಲವಾದರೆ ದಂಡ ವಿಧಿಸಲಾಗುವುದು.
ಯೋಜನೆಯ ಲಾಭ ಪಡೆಯಲು ಇವರು ಅರ್ಹರಲ್ಲ
1) ಪದವಿ ಮುಗಿಸಿದ ಬಳಿಕ ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುವ ವಿದ್ಯಾರ್ಥಿಗಳಿಗೆ ಈ ನಿರುದ್ಯೋಗ ಭತ್ಯೆ ಲಭಿಸುವುದಿಲ್ಲ.
2) ಶಿಶಿಕ್ಷು (ಅಪ್ರೆಂಟಿಸ್) ವೇತನ ಪಡೆಯುತ್ತಿರುವವರೆಗೂ ಈ ನಿರುದ್ಯೋಗ ಭತ್ಯೆ ಸಿಗುವುದಿಲ್ಲ.
3) ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಹರಲ್ಲ.
4) ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರಿಗೆ ನಿರುದ್ಯೋಗ ಭತ್ಯೆ ಸಿಗುವುದಿಲ್ಲ.












Click it and Unblock the Notifications