ಯುವ ನಿಧಿ ಗ್ಯಾರಂಟಿ: ಎಲ್ಲಾ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆ ನೀಡಲು ಎಐಡಿವೈಓ ಆಗ್ರಹ
ಬೆಂಗಳೂರು, ಮೇ. 23: ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿ ಭರ್ಜರಿಯಾಗಿ ಅಧಿಕಾರಕ್ಕೆ ಏರಿರುವ ಕಾಂಗ್ರೆಸ್‌ಗೆ ಈ ಭರವಸೆಗಳನ್ನು ಈಡೇರಿಸುವ ಸವಾಲಿದೆ. ಇವುಗಳನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳುತ್ತಿದ್ದರೂ ಇದಕ್ಕೆ ವಿಧಿಸಿರುವ ಷರತ್ತುಗಳಿಗೆ ಹಲವು ಆಕ್ಷೇಪಗಳು ಕೇಳಿ ಬಂದಿವೆ. ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ಎಲ್ಲಾ ನಿರುದ್ಯೋಗಿಗಳಿಗೂ ನೀಡಬೇಕು ಎಂದು ಎಐಡಿವೈಓ ಆಗ್ರಹಿಸಿದೆ.
ಮೇ 20 ರಂದು ಪ್ರಮಾಣವಚನ ಸ್ವೀಕರಿಸಿದ ಕಾಂಗ್ರೆಸ್ ಸರ್ಕಾರವು ತಾನು ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮೊದಲ ಮಂತ್ರಿಮಂಡಲದ ಸಭೆಯಲ್ಲಿಯೇ ತೀರ್ಮಾನಿಸಿ ಷರತ್ತುಬದ್ಧ ಆದೇಶ ಹೊರಡಿಸಿದೆ. ಈ ಮೂಲಕ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಮ್ಮೆಯಿಂದ ಘೋಷಿಸಿದ್ದಾರೆ ಎಂದು ಸಂಘಟನೆ ತಿಳಿಸಿದೆ.

"ಆದರೆ, ಪದವಿ ಮತ್ತು ಡಿಪ್ಲೋಮಾ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ಪ್ರಕಾರ, 2022-23ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆಯನ್ನು, ಅದೂ ಎರಡು ವರ್ಷಗಳ ಅವಧಿಗೆ ಮಾತ್ರ ನೀಡಲಾಗುವುದು ಎಂಬ ಷರತ್ತು ವಿಧಿಸಲಾಗಿದೆ. ಹಾಗಾದರೆ ಈ ಅವಧಿಗೆ ಮುನ್ನ ಪದವಿ, ಡಿಪ್ಲೋಮಾ, ಇನ್ನಿತರ ವೃತ್ತಿಪರ ಕೋರ್ಸ್‌ಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಹಗಲಿರಳು ಶ್ರಮಿಸುತ್ತ, ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಯುವಜನರು ನಿರುದ್ಯೋಗಿಗಳಲ್ಲವೇ..?" ಎಂದು ಯವಜನ ಸಂಘಟನೆ ಪ್ರಶ್ನಿಸಿದೆ.
"ಸ್ವಾವಲಂಬಿಗಳಾಗಿ ಬದುಕಲು ತಕ್ಕದಾದ ಒಂದು ಉದ್ಯೋಗಕ್ಕಾಗಿ ಹತ್ತು-ಹದಿನೈದು ವರ್ಷಗಳಿಂದ ಮನೆಬಿಟ್ಟು ನಗರಗಳಿಗೆ ಬಂದು ಸ್ವಂತ ಕರ್ಚಿನಲ್ಲಿ ಬಾಡಿಗೆ ಕೊಠಡಿಗಳಲ್ಲಿದ್ದುಕೊಂಡು ಊಟ ನಿದ್ರೆ ಬಿಟ್ಟು ಖಾಸಗಿ ಗ್ರಂಥಾಲಯಗಳಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿಕೊಂಡು ಓದುತ್ತಿರುವವರು ನಿರುದ್ಯೋಗಿಗಳಲ್ಲವೇ.. ? ಅಥವಾ ಅವರಿಗೆ ಈಗಾಗಲೇ ಸರ್ಕಾರ ಉದ್ಯೋಗ ನೀಡಿಬಿಟ್ಟಿದೆಯೇ..?! ನಿಜವಾಗಿಯೂ ನಿರುದ್ಯೋಗದ ಬಿಸಿ ತಟ್ಟುತ್ತಿರುವುದು ಈ ರೀತಿ ಹತ್ತಾರು ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರಿಗೆ" ಎಂದು ಉಲ್ಲೇಖಿಸಿದೆ.

"ಇವರನ್ನು ನಿರುದ್ಯೋಗಿಗಳೆಂದು ಗುರುತಿಸಿ ನಿರುದ್ಯೋಗ ಭತ್ಯೆ ನೀಡಬೇಕಾಗಿರುವುದು ಅತ್ಯವಶ್ಯಕ. ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ನೀಡಿದ್ದ ಭರವಸೆಯನ್ನು ನಂಬಿಕೊಂಡು, ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಈಗಲಾದರೂ ಒಂದು ರಾಜಕೀಯ ಪಕ್ಷ ಅಧಿಕೃತವಾಗಿ ಒಪ್ಪಿಕೊಂಡಿದೆ ಎಂಬ ಆಶಾಭಾವನೆಯೊಂದಿಗೆ ರಾಜ್ಯದ ಬಹುತೇಕ ಯುವಜನರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಇಂತಹ ಯುವಸಮುದಾಯದ ನಿರೀಕ್ಷೆಯನ್ನು ಹುಸಿಗೊಳಿಸಿ ಕೇವಲ 2022-23ನೇ ಸಾಲಿನಲ್ಲಿ ತೇರ್ಗಡೆಯಾದವರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂಬುದು ಎಷ್ಟು ಸರಿ..?" ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಪ್ರಶ್ನಿಸಿದೆ.
ಈ ಎಲ್ಲ ಯುವಕರು ತಮ್ಮ ಮೊದಲ ಆದ್ಯತೆಯಾಗಿ ಕೇಳುತ್ತಿರುವುದು ಉದ್ಯೋಗವನ್ನೇ ಹೊರತು ನಿರುದ್ಯೋಗ ಭತ್ಯೆಯನ್ನಲ್ಲ. ಆದರೆ ಅವರ ಯೋಗ್ಯತೆಗೆ ತಕ್ಕದಾದ ಉದ್ಯೋಗವನ್ನು ಒದಗಿಸಲಾಗದ ಸರ್ಕಾರ, ಅವರು ಆತ್ಮ ಗೌರವದಿಂದ ಬದುಕಲು ಬೇಕಾದ ನಿರುದ್ಯೋಗ ಭತ್ಯೆಯನ್ನು ಕೊಡಬೇಕಾಗಿರುವುದು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿನ ಚುನಾಯಿತ ಸರ್ಕಾರವೊಂದರ ಕನಿಷ್ಠ ಜವಾಬ್ದಾರಿ. ಅಲ್ಲದೇ ನಿರುದ್ಯೋಗ ಭತ್ಯೆ ಎಂಬುದು ನಿರುದ್ಯೋಗಿ ಯುವಜನರ ಹಕ್ಕೇ ಹೊರತು ಸರ್ಕಾರದ ಕೃಪಾ ಭಿಕ್ಷೆಯಲ್ಲ ಎಂದು ಕಿಡಿಕಾರಿದೆ.
"ಇದನ್ನು ಈಡೇರಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಈ ರೀತಿ 'ನಿರುದ್ಯೋಗಿ' ಎಂಬ ಪದವನ್ನು ತನ್ನ ಮನಸೋ ಇಚ್ಛೆ ವ್ಯಾಖ್ಯಾನಿಸಿಕೊಂಡು ಅವರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡುತ್ತೇವೆ ಎನ್ನುವುದು ನಾಡಿನ ಯುವ ಸಮುದಾಯಕ್ಕೆ ಮಾಡುವ ಅನ್ಯಾಯವಾಗುತ್ತದೆ. ಆದ್ದರಿಂದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರವೇ ನಿಗದಿಪಡಿಸಿರುವ ವಯೋಮಿತಿಯಲ್ಲಿರುವ ಎಲ್ಲಾ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆಯನ್ನು ಅವರಿಗೆ ಉದ್ಯೋಗ ದೊರಕುವವರೆಗೂ ನೀಡಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ರಾಜ್ಯ ಸಮಿತಿಯು ಒಕ್ಕೊರಲಿನಿಂದ ಆಗ್ರಹಿಸಿದೆ.












Click it and Unblock the Notifications