YSV Datta : ಕಡೂರು ರಾಜಕೀಯ; ಜೆಡಿಎಸ್‌ನಿಂದಲೇ ವೈ. ಎಸ್. ವಿ. ದತ್ತಾ
ಬೆಂಗಳೂರು, ಏಪ್ರಿಲ್ 13; ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾಗೆ ಟಿಕೆಟ್ ಸಿಕ್ಕಿರಲಿಲ್ಲ. ಕ್ಷೇತ್ರದ ರಾಜಕೀಯದಲ್ಲಿ ಗುರುವಾರ ಮಹತ್ವದ ಬದಲಾವಣೆಯಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದ ಅವರು ಜೆಡಿಎಸ್‌ಗೆ ವಾಪಸ್ ಆಗಲಿದ್ದಾರೆ. ಕಡೂರಿನಿಂದ ವೈ. ಎಸ್. ವಿ. ದತ್ತಾ ಜೆಡಿಎಸ್ ಅಭ್ಯರ್ಥಿಯಾಗಿ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಗುರುವಾರ ಯಗಟಿಯಲ್ಲಿರುವ ವೈ. ಎಸ್. ವಿ. ದತ್ತಾ ನಿವಾಸಕ್ಕೆ ಮಾಜಿ ಸಚಿವ ಎಚ್. ಡಿ. ರೇವಣ್ಣ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದರು. ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿದರು. ಈ ಸಭೆಯ ಬಳಿಕ ಜೆಡಿಎಸ್ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುವ ಕುರಿತು ಘೋಷಣೆ ಮಾಡಲಾಗಿದೆ.

ಸಭೆಯ ಬಳಿಕ ಮಾತನಾಡಿದ ಎಚ್. ಡಿ. ರೇವಣ್ಣ, "ದತ್ತ ಜೆಡಿಎಸ್ ಸೇರ್ಪಡೆ ಏನಿಲ್ಲ, ಇದು ಅವರ ಕಳೆದ 50 ವರ್ಷದ ಮನೆ, ಅವರಿಗೆ ಅವರ ಮನೆಗೆ ಬರೋದಕ್ಕೆ ಏನು?. ದತ್ತ ಅವರಿಗೆ ಜೆಡಿಎಸ್ ತಂದೆ-ತಾಯಿ ಮನೆ ಥರ. ಪಕ್ಷಕ್ಕೆ ಸೇರುವ ಕಾರ್ಯಕ್ರಮ ಏನೂ ಇರುವುದಿಲ್ಲ. ಅವರ ಮನೆಗೆ ಅವರು ಬಂದಿದ್ದಾರೆ. ದೇವೇಗೌಡರು ಹೇಳಿದ ಮೇಲೆ ಎಲ್ಲಾ ಮುಗಿಯಿತು" ಎಂದರು.
ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿತ್ತು; ಅಚ್ಚರಿಯ ವಿಚಾರ ಎಂದರೆ ಜೆಡಿಎಸ್ ಪಕ್ಷ ಸಿ. ಎಂ. ಧಜಂಜಯ ಈ ಬಾರಿ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ವೈ. ಎಸ್. ವಿ. ದತ್ತಾ ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಲೆಕ್ಕಾಚಾರವಿತ್ತು.
ಕಾಂಗ್ರೆಸ್ ಟಿಕೆಟ್ ಸಿಗುವ ಭರವಸೆ ಮೇಲೆಯೇ ವೈ. ಎಸ್. ವಿ. ದತ್ತಾ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಕೆ. ಎಸ್. ಆನಂದ್ ಕಡೂರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ವೈ. ಎಸ್. ವಿ. ದತ್ತಾ ಅಸಮಾಧಾನಗೊಂಡಿದ್ದರು. ಅಭಿಮಾನಿಗಳ ಒತ್ತಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡಿದ್ದರು.

ಕರ್ನಾಟಕ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು, ವೃತ್ತಿಯಲ್ಲಿ ವಕೀಲರಾಗಿರುವ ಸಿ. ಎಂ. ಧಜಂಜಯ ವೈ. ಎಸ್. ವಿ. ದತ್ತಾ ಪರವಾಗಿ ನಿಂತಿದ್ದರು. ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಾಗ ದತ್ತಾ ಕಡೂರು ಜೆಡಿಎಸ್ ಅಭ್ಯರ್ಥಿ ಆಗುವುದಾದರೆ ನಾನೇ ಕ್ಷೇತ್ರ ಬಿಟ್ಟು ಕೊಡುವೆ ಎಂದು ಹೇಳಿದ್ದರು.
ಮೂಲತಃ ಸಿ. ಎಂ. ಧಜಂಜಯ ಬೆಂಗಳೂರು ನಗರದ ಚನ್ನಸಂದ್ರದವರು. ಅವರು ಈ ಬಾರಿಯ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಟಿಕೆಟ್‌ಗಾಗಿ ಕೆಪಿಸಿಸಿ ಕಚೇರಿಗೆ ಅರ್ಜಿಯನ್ನು ಹಾಕಿದ್ದರು. ಆದರೆ ಕಾಂಗ್ರೆಸ್ ಪಟ್ಟಿ ಘೋಷಣೆಯಾಗುವ ಮೊದಲೇ ದಳಪತಿಗಳು ಅವರನ್ನು ಪಕ್ಷಕ್ಕೆ ಕರೆತಂದು ಕಡೂರು ಕ್ಷೇತ್ರದ ಟಿಕೆಟ್ ನೀಡಿದ್ದರು.
ಕಡೂರು ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರ. ಆದರೆ ಹಾಸನದ ರಾಜಕೀಯದ ಪ್ರಭಾವ ಇಲ್ಲಿ ಕೆಲಸ ಮಾಡುತ್ತದೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಮತಬ್ಯಾಂಕ್ ಹೊಂದಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರ ಪ್ರಭಾವ ಕಡೂರಿನಲ್ಲಿ ಕೆಲಸ ಮಾಡುತ್ತದೆ ಎಂದರೆ ತಪ್ಪಿಲ್ಲ.
ವೈ. ಎಸ್. ವಿ. ದತ್ತಾ 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಡೂರಿನಲ್ಲಿ ಗೆದ್ದು ಶಾಸಕರಾಗಿದ್ದರು. ಆದರೆ 2018ರ ಚುನಾವಣೆಯಲ್ಲಿ 46,860 ಮತಗಳನ್ನು ಪಡೆದು ಬಿಜೆಪಿಯ ಕೆ. ಎಸ್. ಪ್ರಕಾಶ್ ವಿರುದ್ಧ ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ ಜೆಡಿಎಸ್ ಬಿಟ್ಟಿದ್ದರು.












Click it and Unblock the Notifications