ಸ್ಪೀಕರ್ ಕಾಗೇರಿಯನ್ನು ಸಚಿವರಾಗಿ ಮಾಡಿ; ಯಡಿಯೂರಪ್ಪ ಮನವಿ
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಮುಂದಿನ ಸರ್ಕಾರದಲ್ಲಿ ಸಚಿವರಾಗಿ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿ. ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಬೆಂಗಳೂರು, ಫೆಬ್ರವರಿ 24; ಕರ್ನಾಟಕದ 15ನೇ ವಿಧಾನಸಭೆಯ ಕೊನೆಯ ದಿನದ ಕಲಾಪ ಶುಕ್ರವಾರ ನಡೆಯುತ್ತಿದೆ. ತಮ್ಮ ಕೊನೆಯ ಅಧಿವೇಶದಲ್ಲಿ ಮಾಜಿ ಮುಖ್ಯಮಂತ್ರಿ, ಶಿಕಾರಿಪುರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಎಸ್. ಯಡಿಯೂರಪ್ಪ ಪಾಲ್ಗೊಂಡಿದ್ದಾರೆ. ಸದನದಲ್ಲಿ ಅವರು ಕೊನೆಯ ಭಾಷಣ ಮಾಡಿದ್ದು, ಹಲವಾರು ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಶುಕ್ರವಾರದ ಕಲಾಪದಲ್ಲಿ ಮಾತನಾಡಿದ ಯಡಿಯೂರಪ, ಶಿರಸಿ ಕ್ಷೇತ್ರದ ಬಿಜೆಪಿ ಶಾಸಕ ಹಾಲಿ ಕರ್ನಾಟಕ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಮುಂದಿನ ಸರ್ಕಾರದಲ್ಲಿ ಸಚಿವರಾಗಿ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದರು. ಸ್ಪೀಕರ್ ಮತ್ತು ಮುಖ್ಯಮಂತ್ರಿಗಳು ಸದನದಲ್ಲಿ ಇರುವಾಗಲೇ ಯಡಿಯೂರಪ್ಪ ಈ ಮನವಿಯನ್ನು ಸಲ್ಲಿಸಿದರು.

ಬಿ. ಎಸ್ .ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯವೈಖರಿಯನ್ನು ಹೊಗಳಿದರು. ಸಭಾಧ್ಯಕ್ಷರಾಗಿ ಸದನ ನಡೆಸಿದ ರೀತಿ ಎಲ್ಲರೂ ಮೆಚ್ಚುವಂತಹದ್ದು ಮುಂದಿನ ಅಧಿವೇಶನದಲ್ಲಿ ಸ್ಪೀಕರ್ ಪೀಠದಲ್ಲಿ ಕೂರದೇ ಸಚಿವರಾಗಿ. ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಯಡಿಯೂರಪ್ಪ ತಮ್ಮ ಸದನದಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಹೇಳಿದರು.

ಸದನ ನಡೆಸುತ್ತಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿ. ಎಸ್ .ಯಡಿಯೂರಪ್ಪ ಅವರ ಮಾತಿಗೆ ಧನ್ಯವಾದಗಳನ್ನು ಅರ್ಪಿಸಿದರು. 2019ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸ್ಪೀಕರ್ ಯಾರು? ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಆಗ ಶಿರಸಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಸ್ಪೀಕರ್ ಆಗಿ ಘೋಷಣೆ ಮಾಡಲಾಯಿತು. ಉತ್ತಮವಾಗಿ ಅವರು ಕಲಾಪವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಚಯ; ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಒಡನಾಟ ಹೊಂದಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಶಾಸಕರಾದ ಅವರು 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು.
ನಾಲ್ವರು ಮಾಜಿ ಮುಖ್ಯಮಂತ್ರಿಗಳಿರುವ ಸದನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಅಂಕೋಲಾ ಕ್ಷೇತ್ರದಿಂದ ಮೂರು ಬಾರಿ, ಶಿರಸಿ ಕ್ಷೇತ್ರದಿಂದ ಮೂರು ಬಾರಿ ಸೇರಿ ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾದ ಕಾಗೇರಿ ಮೃದು ಮಾತಿನ, ಸೌಮ್ಯಾ ಸ್ವಭಾವದವರು. ಆದರೆ ಅವರು ಪ್ರತಿಪಕ್ಷದವರನ್ನು ಸರಿಯಾಗಿ ದಬಾಯಿಸಿಯೇ ಕಲಾಪ ಅಚ್ಚುಕಟ್ಟಾಗಿ ನಡೆಸಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿಯ ಕಟ್ಟಾಳು. ಶಿರಸಿ ಭಾಗದ ಪ್ರಭಾವಿ ನಾಯಕ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬರೂರು ಗ್ರಾಮದಲ್ಲಿ ಜುಲೈ 10, 1961ರಂದು ಜನಿಸಿದರು. ತಂದೆ ಅನಂತ ಹೆಗಡೆ, ತಾಯಿ ಸರ್ವೇಶ್ವರಿ ಹೆಗಡೆ. ಪತ್ನಿ ಭಾರತಿ, ಮೂವರು ಹೆಣ್ಣು ಮಕ್ಕಳು. ಬಿ.ಕಾಂ ಪದವೀಧರರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಕೃಷಿಕರಾಗಿದ್ದವರು. ಬಳಿಕ ರಾಜಕೀಯಕ್ಕೆ ಬಂದರು. 2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಆದರೆ ಈ ಬಾರಿ ಸರ್ಕಾರ ಬಂದಾಗ ಸ್ಪೀಕರ್ ಸ್ಥಾನ ಒಲಿದು ಬಂದಿತು.
1990 ರಿಂದ 1994ರ ತನಕ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.












Click it and Unblock the Notifications