ಉತ್ಸವ ಮೂರ್ತಿಯಾಗಿದ್ದ BSY ವಿಸರ್ಜನಾ ಮೂರ್ತಿಯಾದರೆ?
ಬಿಜೆಪಿಯಲ್ಲಿನ ಟಿಕೆಟ್ ಕಲಹದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಗ್ಗೆ ಪ್ರಸ್ತಾಪಿಸಿದೆ.
ಬೆಂಗಳೂರು, ಮಾರ್ಚ್ 15; ಕರ್ನಾಟಕ ವಿಧಾನಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ನೀಡಿರುವ ಹೇಳಿಕೆ ಈಗ ಚರ್ಚೆಯ ವಿಚಾರ. ಈಗ ಬಿಜೆಪಿ ಮಾತ್ರವಲ್ಲ ಪ್ರತಿಪಕ್ಷ ಕಾಂಗ್ರೆಸ್ ಸಹ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುತ್ತಿದೆ. 'ಲಿಂಗಾಯತರ ಮತಕ್ಕಾಗಿ ಉತ್ಸವ ಮೂರ್ತಿಯಾಗಿದ್ದ BSY ಇಷ್ಟು ಬೇಗ ವಿಸರ್ಜನಾ ಮೂರ್ತಿಯಾದರೆ' ಎಂದು ಕಾಂಗ್ರೆಸ್ ಪ್ರಶ್ನೆ ಮಾಡುವ ಮೂಲಕ ವಿವಾದದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದೆ.
ಬುಧವಾರ ಕರ್ನಾಟಕ ಕಾಂಗ್ರೆಸ್ ಈ ಕುರಿತು ಸರಣಿ ಟ್ವೀಟ್ ಮಾಡಿದೆ. #BJPvsBJP ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿಕೊಂಡು ಕರ್ನಾಟಕ ಬಿಜೆಪಿ, ಪಕ್ಷದ ವಿವಿಧ ನಾಯಕರನ್ನು ಟ್ಯಾಗ್ ಮಾಡಿ ಹಲವು ಪ್ರಶ್ನೆಗಳನ್ನು ಕೇಳಿದೆ. 'ಲಿಂಗಾಯತರ ಮತಕ್ಕಾಗಿ ಉತ್ಸವ ಮೂರ್ತಿಯಾಗಿದ್ದ BSY ಇಷ್ಟು ಬೇಗ ವಿಸರ್ಜನಾ ಮೂರ್ತಿಯಾದರೆ?' ಎಂದು ಕಾಂಗ್ರೆಸ್ ಪಕ್ಷ ಪ್ರಶ್ನೆ ಮಾಡಿದ್ದು, ಯಡಿಯೂರಪ್ಪರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆಯೆ? ಎಂದು ಕೇಳಿದೆ.

ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, 'ಬಿಜೆಪಿಯ ಕಲಹ ಸಂಕಲ್ಪ ಯಾತ್ರೆ ಜೋರಾಗಿ ನಡೆಯುತ್ತಿದೆ. ಬಿಜೆಪಿ ಈಗ ಸಂತೋಷ ಕೂಟದ ಹಿಡಿತದಲ್ಲಿದೆ, ಬಿಜೆಪಿಗೆ BSY ನಗಣ್ಯ ಎಂಬ ಸಂದೇಶ ಕೊಟ್ಟ ಸಿ. ಟಿ. ರವಿಗೆ ಮಾತಿನ ಗುದ್ದು ಕೊಟ್ಟ ಬಿ. ವೈ. ವಿಜಯೇಂದ್ರ. ಬಿಜೆಪಿ ಎಂಬ ಕಲಹದ ಮನೆಯಲ್ಲಿ ಯಾರು ಯಾರಿಗೆ ಶತ್ರುಗಳು ಎಂದು ಸ್ವತಃ ಬಿಜೆಪಿ ಕರ್ನಾಟಕ ಗೇ ತಿಳಿಯದೆ ಗೊಂದಲದಲ್ಲಿದೆ!' ಎಂದು ಲೇವಡಿ ಮಾಡಿದೆ.
'ಯಡಿಯೂರಪ್ಪನವರ ಸ್ಥಾನ ಮತ್ತು ಮಾನ ಎರಡನ್ನೂ ಕಾಲ ಕೆಳಗಿನ ಕಸದಂತೆ ಕಾಣುತ್ತಿದೆ ಬಿಜೆಪಿ. ಟಿಕೆಟ್ ನಿರ್ಧರಿಸುವ ಹಕ್ಕು, ಸ್ವತಂತ್ರ BSY ಅವರಿಗಿಲ್ಲ ಎನ್ನುವ ಮೂಲಕ #BSYmuktaBJP ಅಭಿಯಾನವನ್ನ ಅಧಿಕೃತಗೊಳಿಸಿದ್ದಾರೆ ಸಿ. ಟಿ. ರವಿ. ಲಿಂಗಾಯತರ ಮತಕ್ಕಾಗಿ ಉತ್ಸವ ಮೂರ್ತಿಯಾಗಿದ್ದ BSY ಇಷ್ಟು ಬೇಗ ವಿಸರ್ಜನಾ ಮೂರ್ತಿಯಾದರೆ ಬಿಜೆಪಿ ಕರ್ನಾಟಕ?' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.

'ಯಡಿಯೂರಪ್ಪನವರ ನಂತರ ಮತ್ತೊಬ್ಬ ಲಿಂಗಾಯತ ನಾಯಕನಿಗೆ ಕಣ್ಣೀರು ಹಾಕಿಸಿದೆ ಬಿಜೆಪಿ ಕರ್ನಾಟಕ. ಬಿಜೆಪಿಯಲ್ಲಿ ಲಿಂಗಾಯತ ನಾಯಕರಿಗೆ ಉಸಿರು ಕಟ್ಟುವ ವಾತಾವರಣ ಸೃಷ್ಟಿಸಲಾಗುತ್ತಿದೆಯೇ?. BSY ಬಣದ ನಾಯಕರನ್ನು ಬಗ್ಗುಬಡಿಯಲು ಹೊರಟಿರುವ ಸಂತೋಷ ಕೂಟದ ಆಟಕ್ಕೆ ಸಿಲುಕಿದ ಲಿಂಗಾಯತ ನಾಯಕರು ತರಗೆಲೆಯಂತೆ ಹಾರಿ ಹೋಗುತ್ತಿದ್ದಾರೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕರ್ನಾಟಕ ಬಿಜೆಪಿ ಯಡಿಯೂರಪ್ಪರನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ಇದೇ ಮೊದಲ ಬಾರಿಗೆ ಟ್ವೀಟ್ ಮಾಡುತ್ತಿಲ್ಲ. ಹಿಂದೆ ಹಲವು ಬಾರಿ ಇದೇ ವಿಚಾರ ಮುಂದಿಟ್ಟುಕೊಂಡು ಪಕ್ಷ ಟ್ವೀಟ್ ಮಾಡಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಆ ಕಾರ್ಯಕ್ರಮದಲ್ಲಿ ಯಡಿಯೂರಪ್ಪಗೆ ಸನ್ಮಾನ ಮಾಡಲಾಗಿತ್ತು. ಆಗ ಕಾಂಗ್ರೆಸ್ ಲಿಂಗಾಯತ ಸಮುದಾಯದ ಮತಕ್ಕಾಗಿ ಬಿಜೆಪಿ ಯಡಿಯೂರಪ್ಪರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.
ಅಮಿತ್ ಶಾ, ಜೆ. ಪಿ. ನಡ್ಡಾ ಚುನಾವಣೆಯಲ್ಲಿ ಗೆಲ್ಲಲು ಯಡಿಯೂರಪ್ಪ ಹೆಸರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಆರೋಪಿಸಿತ್ತು. ಬಸವರಾಜ ಬೊಮ್ಮಾಯಿ ಚಲಾವಣೆಯಲ್ಲಿ ಇಲ್ಲದ ನಾಣ್ಯ. ಆದ್ದರಿಂದ ಯಡಿಯೂರಪ್ಪ ಜಪ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿತ್ತು.












Click it and Unblock the Notifications