ಯಡಿಯೂರಪ್ಪ ಹೊಸವರ್ಷಾಚರಣೆ ಬಿಜೆಪಿಯಲ್ಲಿ!
ಬೆಂಗಳೂರು, ಡಿ. 18: ಕೆಜೆಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ಡಿಸೆಂಬರ್ ಅಂತ್ಯದೊಳಗೆ ಯಡಿಯೂರಪ್ಪ ಬಿಜೆಪಿಗೆ ಮರಳಲಿದ್ದಾರೆ. ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಪ್ರಸಿದ್ಧಿ ಪಡೆದಿರುವ ಹಿರಿಯ ನಾಯಕ ಅರುಣ್ ಜೇಟ್ಲಿ ಯಡಿಯೂರಪ್ಪ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಪಕ್ಷದ ಮೂಲಗಳ ಪ್ರಕಾರ ಯಡಿಯೂರಪ್ಪ ವಾಪಸ್ ಕರೆತರುವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಮೂರು ದಿನಗಳ ಹಿಂದೆ ಯಡಿಯೂರಪ್ಪ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದು, ಮುಂದಿನ ವಾರ ಮತ್ತೂಂದು ಸುತ್ತಿನ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಯಡಿಯೂರಪ್ಪ ವಾಪಸ್ ಆಗಲು ಸಂಸದೀಯ ಮಂಡಳಿ ಅನುಮತಿ ಮಾತ್ರ ಬಾಕಿ ಇದೆ. [ಕೆಜೆಪಿ, ಬಿಜೆಪಿ ಬಗ್ಗೆ ಡೆಡ್ ಲೈನ್]
ಬಿ.ಎಸ್.ಯಡಿಯೂರಪ್ಪ ಅರುಣ್ ಜೇಟ್ಲಿ ಅವರ ಮುಂದೆ ಯಾವುದೇ ಗಂಭೀರ ಷರತ್ತುಗಳನ್ನು ಹಾಕಿಲ್ಲ. ಆದರೆ, ತಮ್ಮ ಬೆಂಬಲಿಗರ ಹಿತ ಹಿತ ಕಾಪಾಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಅವರನ್ನು ಮರಳಿ ಕರೆತಂದ ನಂತರ ಬೆಂಬಲಿಗರ ಬಗ್ಗೆ ಆಲೋಚಿಸುವುದಾಗಿ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಯಡಿಯೂರಪ್ಪ ಬಿಜೆಪಿಗೆ ಮರಳಲು ವೇದಿಕೆ ಸಜ್ಜಾಗಿದೆ.

ಸುಳಿವು ನೀಡಿದ ಯಡಿಯೂರಪ್ಪ
ಬಿಜೆಪಿ ಸೇರುವ ಸುಳಿವನ್ನು ಯಡಿಯೂರಪ್ಪ ಮಂಗಳವಾರ ತವರು ಜಿಲ್ಲೆ ಶಿವಮೊಗ್ಗದಲ್ಲಿ ನೀಡಿದ್ದಾರೆ. ಬಹಳಷ್ಟು ಜನರು ನಾನು ಬಿಜೆಪಿ ಸೇರಬೇಕೆಂದು ಅಪೇಕ್ಷಿಸುತ್ತಿದ್ದಾರೆ. ಈ ಸಂಬಂಧ ಚರ್ಚೆ ನಡೆಯುತ್ತಿದೆ. ಸೂಕ್ತ ವಾತಾವರಣಕ್ಕಾಗಿ ಎದುರು ನೋಡಲಾಗುತ್ತಿದೆ ಎಂದು ಸಕಾರಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಎಸ್‌ವೈ ಸ್ಥಾನಮಾನ?
ಯಡಿಯೂರಪ್ಪ ಜೊತೆಗಿನ ಮಾತುಕತೆಯ ವೇಳೆ ಮೊದಲು ಪಕ್ಷಕ್ಕೆ ಮರಳಿ ಬನ್ನಿ. ಸ್ಥಾನಮಾನದ ಬಗ್ಗೆ ನಂತರ ಆಲೋಚನೆ ನಡೆಸೋಣ, ಪಕ್ಷಕ್ಕೆ ಬಂದ ನಂತರ ಸೂಕ್ತ ಸ್ಥಾನಮಾನ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನೀವು ಒಪ್ಪಿದರೆ ಟಿಕೆಟ್ ನೀಡಲಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಪಡೆದರೆ, ರಾಜ್ಯಸಭಾ ಸದಸ್ಯರಾಗಿ ಮಾಡುವ ಸುಳಿವನ್ನು ಜೇಟ್ಲಿ ನೀಡಿದ್ದಾರೆ.

ಮನವೊಲಿಕೆ ಕಾರ್ಯಕ್ಕೆ ಚಾಲನೆ
ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ಪ್ರಸ್ತಾಪಕ್ಕೆ ಕೆಜೆಪಿ ಶಾಸಕರಾದ ಗುರುಪಾದಪ್ಪ ನಾಗಮಾರಪಲ್ಲಿ ಮತ್ತು ಬಿ.ಆರ್. ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಮನವೊಲಿಸುವ ಪ್ರಯತ್ನ ಆರಂಭವಾಗಿದೆ. ಬಿಜೆಪಿ ನಾಯಕರು ಕೂಡ ಈಗಾಗಲೇ ಈ ಇಬ್ಬರು ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

ಕಾಂಗ್ರೆಸ್ ಸೇರುವ ಸಾಧ್ಯತೆ
ಯಡಿಯೂರಪ್ಪ ಸೇರಿದಂತೆ ಕೆಜೆಪಿಯ ಒಟ್ಟು ಆರು ಶಾಸಕರ ಪೈಕಿ ನಾಗಮಾರಪಲ್ಲಿ ಮತ್ತು ಬಿ.ಆರ್.ಪಾಟೀಲ್ ಕಾಂಗ್ರೆಸ್ ನಾಯಕರೊಂದಿಗೆ ಸತತ ಸಂಪರ್ಕದಲ್ಲಿದ್ದು, ಆ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಒಲವು ಹೊಂದಿದ್ದಾರೆ. ಆದರೆ, ಯಡಿಯೂರಪ್ಪ ಎಲ್ಲಾ ಶಾಸಕರನ್ನು ಬಿಜೆಪಿಗೆ ಕರೆತರಲು ಪ್ರಯತ್ನ ನಡೆಸುತ್ತಿದ್ದಾರೆ.

ಬಿಜೆಪಿಗೆ ಯಾವಾಗ?
ಅರುಣ್ ಜೇಟ್ಲಿ ಯಡಿಯೂರಪ್ಪ ಜೊತೆ ಎರಡನೇ ಹಂತದ ಮಾತುಕತೆ ನಡೆಸಿದ ನಂತರ, ಸಂಸದೀಯ ಮಂಡಳಿ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಲ್ಲಿ ಅಧಿಕೃತ ನಿರ್ಣಯ ಕೈಗೊಂಡ ಬಳಿಕ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಡಿಸೆಂಬರ್ ಅಂತ್ಯಕ್ಕೆ ಈ ಪ್ರಕ್ರಿಯೆ ನಡೆಯಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications