ಯಡಿಯೂರಪ್ಪಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಹುದ್ದೆ?
ಬೆಂಗಳೂರು, ಜು. 15 : ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ದೊರೆಯಲಿದೆಯೇ?. ಕರ್ನಾಟಕ ಬಿಜೆಪಿ ವಲಯದಲ್ಲಿ ಇಂತಹ ಮಾತು ಹಬ್ಬಿದೆ. ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಈ ಕುರಿತು ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಭ್ರಷ್ಟಾಚಾರದ ಆರೋಪದ ಹಿನ್ನಲೆಯಲ್ಲಿ ಯಡಿಯೂರಪ್ಪ ಅವರಿಗೆ ಕೇಂದ್ರದಲ್ಲಿ ಸಚಿವರಾಗುವ ಅವಕಾಶ ತಪ್ಪಿದೆ. ಆದ್ದರಿಂದ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶೀಘ್ರದಲ್ಲೇ ಅಂತಿಮ ಆದೇಶ ಹೊರಡಿಸುವ ಸಾಧ್ಯತೆ ಇದೆ. [ಸಚಿವ ಸ್ಥಾನ: ಮೋದಿಗೆ ಪತ್ರ ಬರೆದ ಯಡಿಯೂರಪ್ಪ]

ಕರ್ನಾಟಕದಲ್ಲಿನ ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಅಂದರೆ ಜು.30ರ ನಂತರ ಪಕ್ಷದ ಕಾರ್ಯಕಾರಣಿ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. [ಆಗಸ್ಟ್ ನಲ್ಲಿ ಕರ್ನಾಟಕಕ್ಕೆ ಅಮಿತ್ ಶಾ]
ಕರ್ನಾಟಕ ಮೂರು ಕ್ಷೇತ್ರಗಳ ಉಪ ಚುನಾವಣೆ ಮತ್ತು ಪಕ್ಷ ಸಂಘಟನೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಯಡಿಯೂರಪ್ಪ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ಕುರಿತು ಚಿಂತನೆ ನಡೆಯುತ್ತಿದೆ. ಯಡಿಯೂರಪ್ಪ ಅವರಿಗೆ ಪಕ್ಷದ ಅಧ್ಯಕ್ಷ ಹುದ್ದೆ ನೀಡಿದರೆ, ಹಾಲಿ ಅಧ್ಯಕ್ಷರಾಗಿರುವ ಪ್ರಹ್ಲಾದ್ ಜೋಶಿ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಹುದ್ದೆ ನೀಡಬಹುದು ಎಂಬ ನಿರೀಕ್ಷೆ ಇದೆ.
ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಜಯಗಳಿಸಿದ ಯಡಿಯೂರಪ್ಪ ಅವರಿಗೆ ಯಾವುದೇ ಸ್ಥಾನ ಮಾನ ನೀಡಿಲ್ಲ. ಯಡಿಯೂರಪ್ಪ ಬೆಂಬಲಿಗರು ಮತ್ತು ರಾಜ್ಯ ನಾಯಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ರಾಜ್ಯಾಧ್ಯಕ್ಷ ಪಟ್ಟಕಟ್ಟಬಹುದು ಎಂಬ ಮಾತುಗಳಿವೆ.












Click it and Unblock the Notifications