ದುರ್ಗಕ್ಕೆ ಬರುವ ವೇಳೆಗೆ ಯಡಿಯೂರಪ್ಪ ಬದಲಾದ್ರಪ್ಪ!

ಬೆಳಗಾವಿಯಲ್ಲಿ ಅದಿವೇಶನ ಮುಗಿಸಿ ಚಿತ್ರದುರ್ಗಕ್ಕೆ ಬರುವ ವೇಳೆಗೆ ಯಡಿಯೂರಪ್ಪ ಮತ್ತೆ ಚಂಚಲ ಚಿತ್ತರಾಗಿದ್ದಾರೆ. ಅಥವಾ ಕನಿಷ್ಠ ಹಾಗೆ ಭಾಸವಾಗುತ್ತಿದ್ದಾರೆ. ಏಕೆಂದರೆ ಯಡಿಯೂರಪ್ಪ ಅವರಂಥ ಅನುಭವಿ ರಾಜಕಾರಣಿ ಕೊನೆಯ ಕ್ಷಣದಲ್ಲಿ ಮತ್ತೆ ಹಳೆಯ ರಾಗ ಹಾಡಲಾರಂಭಿಸಿದ್ದಾರೆಂದರೆ ಅದು ಬಿಜೆಪಿ ವರಿಷ್ಠರಿಗೆ ಅವರು ಮತ್ತಿನ್ನೇನೋ ಸಂದೇಶ ರವಾನಿಸುತ್ತಿದ್ದಾರೆ ಎಂದೇ ಅರ್ಥ.
ಹೌದು ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಬಿಜೆಪಿ ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ಸಂದೇಶ ತಲುಪುತ್ತಿದ್ದಂತೆ ದಿಢೀರನೆ ಮೆತ್ತಗಾಗಿದ್ದ ಯಡಿಯೂರಪ್ಪ ಅವರನ್ನು 'ಬಿಜೆಪಿಗೆ ಮರಳುತ್ತೀರಂತೆ?' ಎಂದು ಸುದ್ದಿಗಾರರು ಕೇಳಿದಾಗ 'ಆ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ' ಎಂದು ಜಾಣಮೌನ ಪ್ರದರ್ಶಿಸಿದ್ದರು.
(ಬಿಎಸ್ವೈ ಮರಳಿ ಗೂಡಿಗೆ: ಡಿ 9ಕ್ಕೆ ಕೆಜೆಪಿ ವಿಸರ್ಜನೆ?)
ಆದರೆ ಅಲ್ಲಿಂದ 372 ಕಿಮೀ (ಐದೂವರೆ ಗಂಟೆ ಪ್ರಯಾಣ) ದೂರ ಸಾಗಿಬಂದ ಯಡಿಯೂರಪ್ಪನವರು ಚಿತ್ರದುರ್ಗ ತಲುಪುತ್ತಿದ್ದಂತೆ 'ನಾನು ಮತ್ತೆ ಬಿಜೆಪಿಗೆ ಹೋಗುವುದಿಲ್ಲ. ಹಿಂದೆಯೂ ಇದನ್ನೇ ಹೇಳಿದ್ದೆ. ಈಗಲೂ ಇದನ್ನೆ ಹೇಳುತ್ತಿದ್ದೇನೆ. ಕೆಜೆಪಿ ಸಂಘಟಿಸುವುದೇ ನನ್ನ ಗುರಿ' ಘಂಟಾಘೋಷವಾಗಿ ಅದೇ ರಾಗ ಅದೇ ಹಾಡು ಹಾಡಲಾರಂಭಿಸಿದ್ದಾರೆ.
(ಯಡಿಯೂರಪ್ಪನನ್ನು ಮತ್ತೆ ಬಿಜೆಪಿಗೆ ಕರೆ ತರುವುದು ಖಚಿತ- ದೇವೇಗೌಡ)
ಚಿತ್ರದುರ್ಗದ ಪತ್ರಕರ್ತರೊಂದಿಗೆ ಶುಕ್ರವಾರ ಸಂಜೆ ಮಾತನಾಡಿದ ಅವರು, ನನ್ನನ್ನು ಬಿಜೆಪಿಗೆ ಕರೆತರುವ ವಿಚಾರವಾಗಿ ಬಿಜೆಪಿ ನಾಯಕರು ನಿರ್ಣಯ ಮಾಡಿರುವುದು ಒಂದು ಸೈಡ್ ಆಗಿದೆ. ಆದರೆ ದೇಶದ ಜನರ ಅಭಿಪ್ರಾಯದಂತೆ ನರೇಂದ್ರ ಮೋದಿ ಈ ದೇಶದ ಪ್ರಧಾನಮಂತ್ರಿ ಆಗಬೇಕೆನ್ನುವ ಉದ್ದೇಶದಿಂದ ಎನ್ ಡಿಎಗೆ ಬೆಂಬಲ ನೀಡುವ ಬಗ್ಗೆ ಬಹಳ ಹಿಂದೆಯೆ ಪತ್ರ ಬರೆದಿದ್ದೇನೆ. ಇಂದಿಗೂ ಅವರಿಂದ ಸಕರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಯಡಿಯೂರಪ್ಪ ಬೇಕಿದ್ದರೆ ಅವರು ಪತ್ರ ಬರೆಯುತ್ತಾರೆ. ಇಲ್ಲವಾದರೆ ನಮ್ಮ ದಾರಿ ನಮಗೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಯಡಿಯೂರಪ್ಪನವರ ಈ ಹೇಳಿಕೆಯ ಒಳಸುಳಿ/ಒಳಾರ್ಥಗಳನ್ನು ಬಲ್ಲವರು ಹೇಳಬೇಕು! (ಬಿಎಸ್ವೈ ನಂತರ ಬಿಜೆಪಿ ಕಣ್ಣು ಶ್ರೀರಾಮುಲು ಮೇಲೆ!)











Click it and Unblock the Notifications