ಕನ್ನಡದಲ್ಲೇ ಈ ಪರೀಕ್ಷೆಗಳನ್ನ ನಡೆಸಿ ಎಂದ ಸಾಹಿತಿಗಳು, ಕನ್ನಡಪರ ಹೋರಾಟಗಾರರು
ಸಾಹಿತಿಗಳು ಹಾಗೂ ಕನ್ನಡ ಪರ ಹೋರಾಟಗಾರರು ಕನ್ನಡದಲ್ಲಿ ಮುಖ್ಯ ಪರೀಕ್ಷೆಗಳು ನಡೆಯದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಡೆಸಿದ ಇತ್ತೀಚಿನ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗಿದೆ. ಈ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಎಚ್‌ಎಎಲ್ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ನೆರವಿನಿಂದ ಸ್ಥಾಪನೆಯಾಗಿತ್ತು. ಆದರೆ, ಎಚ್‌ಎಎಲ್ ನೇಮಕಾತಿಯಲ್ಲೇ ಸ್ಥಳೀಯರಾದ ಕನ್ನಡಿಗರನ್ನು ಕಡೆಗಣಿಸಲಾಗಿದೆ. ಈ ನೇಮಕಾತಿಯಲ್ಲಿ ಹೊರ ರಾಜ್ಯಗಳ ಶೇ 90ರಷ್ಟು ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕನ್ನಡ ಗೆಳೆಯರ ಬಳಗ ಆಕ್ಷೇಪ ವ್ಯಕ್ತಪಡಿಸಿದೆ.

ಈ ರೀತಿ ನೇಮಕಾತಿ ವಿಚಾರದಲ್ಲಿ ಸ್ಥಳೀಯ ಕನ್ನಡಿಗರನ್ನು ಉದ್ಯೋಗದಿಂದ ವಂಚಿತರನ್ನಾಗಿ ಮಾಡಿರುವ ಎಚ್‌ಎಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿ ಎಲ್.ಹನುಮಂತಯ್ಯ, ಟಿ.ಎಸ್.ನಾಗಾಭರಣ, ಮನು ಬಳಿಗಾರ್, ರಾ.ನಂ.ಚಂದ್ರಶೇಖರ, ದೊಡ್ಡರಂಗೇಗೌಡ, ಮುಖ್ಯಮಂತ್ರಿ ಚಂದ್ರು, ವ.ಚ.ಚನ್ನೇಗೌಡ, ಆರ್.ಶೇಷಶಾಸ್ತ್ರಿ ಹಾಗೂ ಎಚ್.ಟಿ.ಪೋತೆ ಹೇಳಿಕೆ ರಿಲೀಸ್ ಮಾಡಿದ್ದಾರೆ.
ಇತ್ತೀಚೆಗೆ ಇಂಟರ್ನೆಟ್ ಮೂಲಕ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ವಿಭಾಗದಲ್ಲಿ 166 ಹುದ್ದೆಗಳಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 150ಕ್ಕೂ ಹೆಚ್ಚು ಹುದ್ದೆಗಳಿಗೆ ಕೇವಲ ಉತ್ತರ ಭಾರತೀಯರನ್ನೇ ನೇಮಕ ಮಾಡಿಕೊಳ್ಳಲಾಗಿದೆ. ಫಿಟ್ಟರ್, ಮಷಿನಿಸ್ಟ್, ಎಲೆಕ್ಟ್ರಿಷಿಯನ್ ಹುದ್ದೆಗಳಿಗೂ ಸಹ ಸ್ಥಳೀಯರಾದ ಕನ್ನಡಿಗರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಈ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಹಾಗೂ ಹೊಸದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಎಚ್‌ಎಎಲ್ ತಾಂತ್ರಿಕ ತರಬೇತಿ ಇಲಾಖೆಯ ಮೂಲಕವೇ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕನ್ನಡದ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ.
ಈ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಹಿಂದಿ ಬದಲಿಗೆ ಕನ್ನಡದಲ್ಲೇ ನೀಡಬೇಕು. ಈ ಬಗ್ಗೆ ಕರ್ನಾಟಕ ಸರ್ಕಾರ ಹಾಗೂ ಎಲ್ಲ ಸಂಸದರು ಮಧ್ಯ ಪ್ರವೇಶಿಸಬೇಕು. ಕನ್ನಡಿಗರಿಗೆ ಆಗುತ್ತಿರುವ ಈ ಮೋಸವನ್ನು ತಪ್ಪಿಸಲು ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಲೇ ಇವೆ. ಪ್ರತಿ ಬಾರಿ ಪರೀಕ್ಷೆ ನಡೆದಾಗಲೂ ಕನ್ನಡಿಗರನ್ನು ಮೂಲೆಗುಂಪು ಮಾಡುತ್ತಾ ಉದ್ಯೋಗಗಳನ್ನು ಕಸಿಯುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಧೋರಣೆಯಿಂದಾಗಿ ಕನ್ನಡಿಗರಲ್ಲಿ ನಿರುದ್ಯೋಗದ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಪ್ರತಿಭೆಯಿದ್ದರೂ ಈ ಧೋರಣೆಯಿಂದಾಗಿ ಕನ್ನಡಿಗರಿಗೆ ಸೂಕ್ತ ವೇದಿಕೆಗಳು ಸಿಗುತ್ತಿಲ್ಲ ಎಂದು ಜನ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.
ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡಬೇಕು ಎಂಬ ನಿಯಮ ಕೂಡ ಜಾರಿಯಾಗುತ್ತಿಲ್ಲ. ಇತ್ತೀಚೆಗೆ ಖಾಸಗಿ ಕಂಪನಿಗಳಲ್ಲಿನ ಕೆಲ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎನ್ನುವ ನಿಯಮ ರೂಪಿಸಲು ಮುಂದಾಗಿದ್ದ ರಾಜ್ಯ ಸರ್ಕಾರವು ದಿಢೀರನೆ ತನ್ನ ನಿರ್ಧಾರದಿಂದ ಯೂಟರ್ನ್ ಹೊಡೆದಿತ್ತು. ಇದು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿತ್ತು.












Click it and Unblock the Notifications