"ಪ್ರಗತಿಪರರ ಡಾರ್ಲಿಂಗ್ ಸಿ.ಎಂ ಸಿದ್ದರಾಮಯ್ಯನವರಿಗೆ" ಸೋಷಿಯಲ್ ಮೀಡಿಯಾ ಪೋಸ್ಟ್‌ ವೈರಲ್!

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಬರಹಗಾರ ಪ್ರವರ ಕೊಟ್ಟೂರು (Pravara kottur) ಅವರು, ಪ್ರಗತಿಪರರ ಡಾರ್ಲಿಂಗ್‌ ಆದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎನ್ನುವ ಶೀರ್ಷಿಕೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಬರಹವು ವೈರಲ್ ಆಗುತ್ತಿದೆ. ಈ ಬರಹವನ್ನು ನೋಡಿ ಹಲವರು ಹೌದು, ನಮ್ಮದೂ ಇದೇ ಅಭಿಪ್ರಾಯ ಎಂದು ಹೇಳುತ್ತಿದ್ದಾರೆ.

ಪ್ರವರ ಕೊಟ್ಟೂರು ಅವರು, ಪ್ರಗತಿಪರರ ಡಾರ್ಲಿಂಗ್ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ನಿಮ್ಮ ಹಾರೈಕೆಯಿಂದ ನಾನು ಆರೋಗ್ಯವಾಗಿ ಕ್ಷೇಮದಿಂದ್ದೇನೆ, ನೀವೂ ಕೂಡ ಮಂಡಿ ನೋವಿನ ಹೊರತಾಗಿ ಸೌಖ್ಯವೆಂದೇ ಭಾವಿಸುತ್ತೇನೆ. ಈ ಪತ್ರ ಬರೆಯಲು ಇಂಥದ್ದೇ ಕಾರಣಗಳೇನು ಇಲ್ಲದೇ ಇದ್ದರೂ ಹತ್ತು ಹಲವು ತಿಂಗಳುಗಳಿಂದ ಸರಕಾರದ ನಡೆಯನ್ನು ಹಿಂದೆಂದಿಗಿಂತಲೂ ತುಸು ಹೆಚ್ಚೇ ಆಸಕ್ತಿಯಿಂದ ಗಮನಿಸಿದ್ದೇನೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಂಡಾಗ ಸಹಜವಾಗಿಯೇ ಖುಷಿ ಪಟ್ಟ ಕೋಟ್ಯಾಂತರ ಜನಗಳಲ್ಲಿ ನಾನೂ ಒಬ್ಬನಾಗಿದ್ದೆ. ಅದರಲ್ಲೂ ಆರ್ಥಿಕವಾಗಿ ದುರ್ಬಲರಾದ ವರ್ಗಕ್ಕೆ ತಾವು ಘೋಷಿಸಿದ ಐದು ಗ್ಯಾರಂಟಿಗಳ ಬಗ್ಗೆ ಅಪಾರ ಖುಷಿ ಮತ್ತು ರಾಜ್ಯದ ಬಗ್ಗೆ ಹೆಮ್ಮೆ ಪಟ್ಟದ್ದೂ ಇದೆ. ಆದರೆ....

Writer Pravara Kottur s social media post to progressives darling CM Siddaramaiah goes viral

ಸಾಕಷ್ಟು ವಿಷಯಗಳಲ್ಲಿ ಭ್ರಮನಿರಸನಗೊಂಡು ಪ್ರೀತಿಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮನ್ನು ಹತ್ತರಲ್ಲೊಂದು ಅಂತ ಅಂದುಕೊಂಡುಬಿಟ್ಟಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಮುಂಚೆ ಮುಖ್ಯಮಂತ್ರಿಗಳಾಗಿದ್ದ ಸದಾನಂದ ಗೌಡರೋ, ಬೊಮ್ಮಾಯಿಯವರೋ, ಕುಮಾರಸ್ವಾಮಿಗಳೋ ಆಗಿದ್ದರೆ ಒಂದೇ ಒಂದು ಮಾತು ಹೇಳುವ ಆಸಕ್ತಿ ತೋರುತ್ತಲೇ ಇರಲಿಲ್ಲ. ಕಾರಣ ಇಷ್ಟೆ ಅವರುಗಳ ಬಗ್ಗೆ, ಅವರುಗಳ ಕೆಲಸಗಳ ಬಗ್ಗೆ ಯಾವುದೇ ಭರವಸೆ ಇಲ್ಲದೆ, ಅವರುಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೆ ಇದ್ದುಬಿಟ್ಟಿದ್ದೆವು. ನಿಮ್ಮ ಬಗ್ಗೆ ಹಾಗಲ್ಲ, ಸಿದ್ದರಾಮಯ್ಯ ಅಂದರೆ ಹಾಗೆ ಸಿದ್ದರಾಮಯ್ಯರೆಂದರೆ ಹೀಗೆ ಅನ್ನ ರಾಮಯ್ಯ ಅಂತಲೋ ಕನ್ನಡ ರಾಮಯ್ಯ ಅಂತಲೋ ಬಿರುದು ಬಾವಲಿಗಳ ನಮ್ಮ ಸುತ್ತಲಿದ್ದ ಪ್ರಗತಿಪರರು, ಜಾತ್ಯಾತೀತರೇ ಕೊಟ್ಟದ್ದು. ಅದಕ್ಕೂ ಮುಂಚೆ ಬೊಮ್ಮಾಯಿ ಸಾಹೇಬರ ಸರಕಾರ ನೋಡಿ ಸುಸ್ತಾಗಿದ್ದ ನಮ್ಮಂಥವರಿಗೆ ನಿಮ್ಮ ಗುಣಗಾನ ಕೇಳಿಸಿಕೊಳ್ಳುತ್ತಾ ಹಿರಿ ಹಿರಿ ಹಿಗ್ಗಿದ್ದೆವೂ ಕೂಡ. ಈಗ ಅದ್ಯಾಕೋ ನಿಮಗೆ ಹೋಲಿಸಿದರೆ ಯಡ್ಯೂರಪ್ಪನವರೇ ಬೆಟರ್ರು ಅನ್ನಿಸಿಬಿಟ್ಟಿದೆ.

ಮೊದಲಿಗೆ ಸರಕಾರದ ಮೂಲ ಉದ್ದೇಶವನ್ನು ಹೇಳಲು ಯತ್ನಿಸಿ ಆಮೇಲೆ ಮಾತನ್ನು ಮುಂದುವರಿಸಲು ಇಚ್ಚಿಸುತ್ತೇನೆ. ಆಹಾರ, ವಸತಿ, ಸಾಕ್ಷರತೆ, ರಸ್ತೆ, ಆರೋಗ್ಯ ಇತ್ಯಾದಿಗಳಾದಿಯಾಗಿ ಮೂಲ ಸೌಕರ್ಯಗಳೆಂದೇ ಕರೆಯುತ್ತೇವೆ ಅಲ್ಲವೇ! ಇವುಗಳ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡುವ ಸಲುವಾಗಿ ಒಂದು ಚಾಕ್ಲೇಟಿನಿಂದ ಹಿಡಿದು ಸೋ ಅಂಡ್‌ ಸೋ ಟ್ಯಾಕ್ಸ್‌ ಗಳ ಪ್ರತಿಯೊಬ್ಬರೂ ಕಟ್ಟಿ ಸರಕಾರದ ಖಝಾನೆ ತುಂಬಿಸಿತ್ತೇವೆ.

ಕಳೆದ ಹತ್ತಾರು ವರ್ಷಗಳಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿರುವ ಕಾರಣ ಕೊಟ್ಟು ಸಾವಿರಾರು ಶಾಲೆಗಳನ್ನು ಮುಚ್ಚಿಯಾಗಿದೆ. ನಾವು ಮುಚ್ಚಿಲ್ಲ ಮುಂಚಿನವರು ಮುಚ್ಚಿದ್ದಾರೆ ಅಂತ ಅವರಿವರ ಮೇಲೆ ಚಾಡಿ ಹೇಳುವ ಯೋಚನೆ ಮಾಡುತ್ತಿರಬಹುದು, ಅದೇ ರೀತಿ ಮಾಡಿದ್ದೇ ಆದರೆ ಹತ್ತರಲ್ಲಿ ಒಂದು ನೀವು ಖಂಡಿತ ಆಗುವುದರಲ್ಲಿ ಸಂದೇಹವೇ ಇಲ್ಲ. ಈಗ ಸೀದಾ ವಿಷಯಕ್ಕೆ ಬರೋಣ, ರಾಜ್ಯದ ಮೇಲಿನಿಂದ ಕೆಳಗಿನವರೆಗೂ ಸುಮ್ಮನೇ ಹಾಗೆ ಸರ್ವೆ ಮಾಡಿಕೊಂಡು ಬನ್ನಿ ಮಕ್ಕಳು ಸರಕಾರಿ ಶಾಲೆಯ ಹೊಸ್ತಿಲಿಗೆ ಬರದೇ ಇರಲು ಯಾವ್ಯಾವ ಕಾರಣಗಳಿವೆ ಪಟ್ಟಿ ಮಾಡಿಕೊಂಡು ಬನ್ನಿ. ನನಗೆ ಗೊತ್ತಿರುವಂತೆ ಒಂದಷ್ಟು ಸರಳವಾದ ಕಾರಣಗಳು ಅಂದರೆ ಓಬೇರಾಯನ ಕಾಲದ ಕೊಠಡಿಗಳು (ಮಳೆ ಗಾಳಿಗೆ ಬಿದ್ದು ಹೋಗಬಹುದಾದ), ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲವೇ ಇಲ್ಲ, ಶಾಲೆಗೆ ಸರಿಯಾದ ಸಮಯಕ್ಕೆ ಬಾರದ, ಬಂದರೂ ಸೈಟಿನ ವಿಷಯವನ್ನೋ, ಬಡ್ಡಿಲೆಕ್ಕವನ್ನೋ ಮಾತಾಡುತ್ತಾ ಕೂಡುವ, ನಯಾಪೈಸೆ ಅಪ್ಡೇಟ್‌ ಆಗದ ಮಾಸ್ತರುಗಳ ಕಾರಣದಿಂದಾಗಿ ಹೀಗೆ ಹೇಳುತ್ತಾ ಹೋದರೆ ಅಚ್ಚುಕಟ್ಟಾಗಿ ಪಟ್ಟಿ ಮಾಡಿಕೊಡಬಲ್ಲೆ.

ಒಳ್ಳೆ ಮಾಸ್ತರುಗಳು ಇದ್ದರೂ ಅವರ ಇತಿ ಮಿತಿಯಲ್ಲಿ ಶಾಲೆಯ ಉದ್ದಾರಕ್ಕೆ ಕೆಲಸ ಮಾಡಲು ಯತ್ನಿಸಿದರೆ ಅಧಿಕಾರಿಗಳಿಂದ ನಮ ನಮೂನೆಯ ಕಿರುಕುಳಗಳ ನೀಡುವ, ಇದರಿಂದ ಬೇಸರಿಸಿ ಇವರುಗಳ ಹಣೆಬರವೆ ಇಷ್ಟು ಅಂತ ಗುಂಪಿನಲ್ಲಿ ಗೋವಿಂದ ಅಂದುಕೊಂಡು ಕನಸುಗಳ ಕಸದಬುಟ್ಟಿಗೆ ಎಸೆದಿರುವ ಸಾಕಷ್ಟು ಉದಾಹರಣೆಗಳು ಎದುರು ಇವೆ, ಬಿಡಿ ನಿಮಗದು ಬೇಕಿಲ್ಲದ ವಿಷ್ಯ. ಕನಕಪುರ ಬಂಡೆ ಸಾಹೇಬರ ಪುತ್ರಿ ಯಾವುದೋ ಚಾನೆಲ್ಲಿನ ಚರ್ಚೆಯೊಂದರಲ್ಲಿ "ಶಿಕ್ಷಣವೆಂದರೆ ಬ್ಯುಸಿನೆಸ್‌" ಅಂತ ಸಿನಿಮಾ ಶೈಲಿಯಲ್ಲಿ ಸಾಸಿವೆ ಗಾತ್ರದ ಲಜ್ಜೆಯಿಲ್ಲದೇ ಗತ್ತಿನಿಂದ ಹೇಳುತ್ತಾರೆ. ಅವರುಗಳು ಅದಾವಾವ ಶಿಕ್ಷಣ ಸಂಸ್ಥೆಯ ಕಟ್ಟಿ ಕೋಟಿ ಕೋಟಿ ದುಡುಮೆ ಮಾಡಿ ಅಕ್ಷರ ಸೇವೆ ಮಾಡುತ್ತಿದ್ದಾರೊ ಏನೊ. ಇನ್ನೊಬ್ಬ ಬಾಯಿ ಬಡುಕ ಪುಣ್ಯಾತ್ಮ ಹಲವು ಕಡೆ ಡಾಕ್ಟರ್ರುಗಳ ಮಾಡುವ ಆಸೆ ಹುಟ್ಟಿಸಿ ಪಿಯು ಕಾಲೇಜು ಮಾಡಿ ವರ್ಷಕ್ಕೆ ಇನ್ನೂರೈವತ್ತರಿಂದ ಮುನ್ನೂರು ಕೋಟಿ ಟರ್ನೋವರ್‌ ಶಿಷ್ಯ ಅಂತ ಗಂಟಲು ಹರಿದುಕೊಂಡು ಮೈಕನ್ನು ಹೆದರಿಸುತ್ತಾನೆ.

ಇವರುಗಳು ನಿಮ್ಮದೇ ಸರಕಾರದ ಭಾಗ. ಒಂದು ಸಾಮಾನ್ಯ ಪ್ರೈವೆಟ್‌ ಶಾಲೆ ಒಂದು ವರ್ಷಕ್ಕೆ ಕನಿಷ್ಠ ಐವತ್ತು ಸಾವಿರ ರೂಪಾಯಿಗಳ ಫೀಸ್‌ ಕೇಳುತ್ತದೆ, ಮಿಕ್ಕಂತೆ ಅಂಗಿಗೆ ಚಡ್ಡಿಗೆ ಬಸ್ಸಿಗೆ ಇತ್ಯಾದಿ ಇದ್ದೇ ಇದೆ. ನಾನು ಹೇಳುತ್ತಿರುವುದು ತಾಲ್ಲೂಕು ಕೇಂದ್ರಗಳಲ್ಲಿನ ಪ್ರೈವೇಟ್‌ ಶಾಲೆಗಳ ಬಗ್ಗೆ. ಇನ್ನೂ ಬೆಂಗಳೂರಿನ ಸ್ಕೂಲುಗಳ ಬಗ್ಗೆ ನಿಮಗೆ ಹೇಳುವ ಅವಶ್ಯಕತೆ ಇಲ್ಲವೆಂದೇ ಭಾವಿಸುತ್ತೇನೆ. ಚಿಕ್ಕಬಳ್ಳಾಪುರ ಹೀರೋನ ಕಾಲೇಜಿನಲ್ಲಿ ನೀಟು ಅಂತಲೇ, ಜೆಇಇ ಅಂತಲೋ ಹೋದರೆ ಎರಡರ ಆಚೆ ಈಚೆ ಪೀಕಿಸದೇ ಬಿಡರು.

ಅಷ್ಟೊಂದು ದುಡ್ಡು ಸಾಮಾನ್ಯರ ಬಳಿ ಇದೆಯಾ ಅಂತ ಮೂರ್ಖತನದ ಪ್ರಶ್ನೆ ಕೇಳಿಬಿಟ್ಟೀರಿ ಜೋಕೆ. ವರ್ಷಕ್ಕೆ ಸರಾಸರಿಯಾಗಿ ಕೇವಲ ಮೂರರಿಂದ ನಾಲಕ್ಕು ಲಕ್ಷ ಆದಾಯವಿದ್ದರೂ ಏನೇಲ್ಲ ಸಾಹಸ ಮಾಡಿ ಮಕ್ಕಳನ್ನು ಪ್ರೈವೇಟ್‌ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇದಕ್ಕೆ ಏಕೈಕ ಕಾರಣವೆಂದರೆ ಸರಕಾರಿ ಶಾಲೆಗಳು ಈಗಿನ ಓದಿಗೆ, ಕಲಿಕೆಗೆ ಸುತಾರಾಂ ಯೋಗ್ಯವಲ್ಲ ಎಂದು. ಇದೊಂದು ಕಡೆಯಾದರೆ ಇನ್ನೊಂದು ಕಡೆ ಮಾಸ್ತರುಗಳ ಮೇಲಿನ ಅಧಿಕಾರಿಗಳು, ಡಿಸಿ ಗಳು ಓಸಿ ಗಳು ಮೊಟ್ಟೆಯಲ್ಲಿ ತಟ್ಟೆಯಲ್ಲಿ ಉದ್ದಿನ ಬೇಳೆ, ಕಡ್ಲೆ ಬೇಳೆಯಲ್ಲಿ ಸೊಪ್ಪು ತರಕಾರಿಯಲ್ಲಿ ಶಾಲೆಗೆ ಬಳಿವ ಬಣ್ಣದಲ್ಲಿ ದುಡ್ಡು ನೆಕ್ಕುತ್ತಾರೆ, ಅವರೋ ಅವರುಗಳ ದರ್ಪವೋ. ಕಮೀಶನ್‌ ಬಂದುಬಿಡಬೇಕು ಅಷ್ಟೆ ಅವಕ್ಕೆ ಅಸಹ್ಯ.

ಕನ್ನಡ ಸರಿಯಾಗಿ ಓದಲು ಬಾರದವರು ಶಿಕ್ಷಣ ಮಂತ್ರಿಯಾಗುತ್ತಾರೆ ಎನ್ನುವುದೇ ನಮ್ಮ ಕರ್ಮ. ನಮ್ಮ ಬುದ್ಧಿಜೀವಿಗಳು ಸರಕಾರಿ ಶಾಲೆಗಳು ಇಂಗ್ಲೀಶು ಮಾಧ್ಯಮದಲ್ಲಿ ಬೋಧಿಸಬಾರದು ಅಂತ ಗೊಳೋ ಅನ್ನುತ್ತಾರೆ, ಅವರುಗಳ ಮಾತ್ರ ಮಕ್ಕಳನ್ನು ಇಂಟರ್‌ ನಾಷನಲ್‌ ಸ್ಕೂಲಿನಲ್ಲಿಯೇ ಓದಿಸೋದು, ಅಂತಿಮವಾಗಿ ಸರಕಾರಿ ಶಾಲೆಗೆ ಮಕ್ಕಳನ್ನು ಕಳಿಸೋದು ಬಡವರಲ್ಲವೇ, ಅವರುಗಳು ಕಲಿತು ಉದ್ದಾರವಾಗೋದೇನು ಬೇಡವೇ ಬೇಡ.

ಇತ್ತೀಚಿಗೆ ತೊಂಭತ್ತು ಚಿಲ್ಲರೆ ಕೋಟಿ ಖರ್ಚು ಮಾಡಿ ಕಾವೇರಿ ನದಿಯ ಹರಿವಿಗೆ ಅಡ್ಡಲಾಗಿ ಮಣ್ಣಾಕಿಸಿ ಅದೇನೋ ಆರತಿ ಮಾಡಿಸುತ್ತಿದ್ದ ಮೂರ್ಖ ಸಚಿವರು ನಿಮಗೆ ಪರಿಚರ ಇದ್ದಾರು ಅಲ್ಲವಾ. ಜನರು ಉಗಿದು ಉಪ್ಪಿನಕಾಯಿ ಹಾಕಿದ ಮೇಲೆ ಅದನ್ನು ಹಿಂದಕ್ಕೆ ಪಡೆದದ್ದು ಅದು ಬೇರೆಯ ವಿಷಯ. ಇದ್ದಕ್ಕಿದ್ದ ಹಾಗೆ ಎಲ್ಲೋ ಇನ್ನೂರು ಅಡಿ ಪ್ರತಿಮೆ ಮಾಡಿಸ್ತೀರಿ ಅಂತ ಹೇಳಿಕೆ ಕೊಟ್ಟುಬಿಟ್ಟಿರಿ ಅದಕ್ಕೆ ಕಡಿಮೆ ಅಂದರೂ ಇನ್ನೂರು ಕೋಟಿ ಖರ್ಚಾಗಬಹುದು. ಹಾಗೆ ಜನಪ್ರೀಯ ಹಾಡುಗಾರರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆದ ಮಹೇಶ್‌ ಜೋಷಿ ಸಾರು ಮುಂದಿನ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ನಲವತ್ತು ಕೋಟಿ ಕೊಟ್ಟರೆ ಸಾಕು ಅಂತ ಕೇಳಿದರಂತೆ ನೀವು ಕನ್ನಡ ರಾಮಯ್ಯ ಹಾಗಾಗಿ ಕೊಡುತ್ತೀರೆಂದು ಅವರು ಒಂದು ಪುಸ್ತಕ ಪ್ರಿಂಟು ಮಾಡಿ ಇಪ್ಪತ್ತೈದು ಲಕ್ಷವಾಯ್ತೆಂದು ಚೆಂದದ ಲೆಕ್ಕ ಒಪ್ಪಿಸಿಯೇತೀರುತ್ತಾರೆ.

ಇದೆಲ್ಲಾ ಲೆಕ್ಕ ಸರಕಾರಕ್ಕೆ ಜುಜುಬಿ. ಅಯ್ಯಯ್ಯೋ ದೇವರೆ ಮರೆಬಿಟ್ಟಿದ್ದೆ ನಮ್ಮೂರ ಕೆರೆ ಹತ್ತೊ ಹದಿನೈದೋ ವರ್ಷಗಳಿಗೊಮ್ಮೆ ತುಂಬುತ್ತದೆ, ಕೆರೆಯವ್ವ ಬಲಿ ಕೇಳ್ತಾಳೆ ಅಂತ ನಮ್ಮವ್ವ ಹೇಳುತ್ತಿದ್ದ ನೆನಪು. ಹದಿನೆಂಟು ವರುಷಗಳ ಸತತ ಪ್ರಯತ್ನದ ನಂತರ ಬೆಟ್ಟಿಂಗ್‌ ಗೆ ಅಂತಲೇ ಮಾಡಿಕೊಂಡಿರುವ ಜೂಜುಕೋರ ಐಪಿಎಲ್‌ ಟ್ರೋಫಿ ಗೆದ್ದರೆಂದು ಮೆರವಣಿಗೆ ಜಾತ್ರೆ ಮಾಡಿ ಮೊಮ್ಮಕ್ಕಳಿಗೆ ಕೋಯ್ಲಿಯನ್ನು ತೋರಿಸಿ ಹತ್ತು ಲಕ್ಷ ಜನ ಸೇರಿಸಿ ಸಖತ್ತು ಫೇಮಸ್ಸಾದಿರಿ. ಶ್...‌ ಅಲ್ಲಿ ಆರ್‌ಸಿಬಿ ನೋಡಲು ಬಂದು ಸತ್ತದ್ದು ಹನ್ನೊಂದೇ ಜನ ಬಿಡಿ, ಪೊಲೀಸರ ಕಡೆ ಬೆರಳು ತೋರ್ಸಿದ್ರೆ ಆಯ್ತು. ಅದಕ್ಕೆ ಏನೊಂದು ಹತ್ತು ಕೋಟಿ ಖರ್ಚಾಯ್ತ, ಬೇಡಪ ಐದ್‌ ಕೋಟಿ ಖರ್ಚಾಯ್ತ.

Writer Pravara Kottur s social media post to progressives darling CM Siddaramaiah goes viral

ಹಿಂಗೆ ಉದ್ರಿ ಚಿಲ್ಲರೆಗಳನ್ನು ಲೆಕ್ಕ ಹಾಕಿದ್ರೆ ಒಂದೂವರೆಯಿಂದ ಎರಡು ಸಾವಿರ ಕೋಟಿಯಾಗಬಹುದು. ಒಂದು ಶಾಲೆಯನ್ನು ಸರ್ವ ರೀತಿಯಿಂದ ಯಾವುದೇ ಭ್ರಷ್ಟಾಚಾರಿಗಳ ಕೈವಾಡವಿಲ್ಲದಿದ್ದರೆ ಕನಿಷ್ಠ ಮೂರುವರೆಯಿಂದ ನಾಲಕ್ಕು ಸಾವಿರ ಸರಕಾರಿ ಶಾಲೆಗಳನ್ನು ಅದ್ಬುತವನ್ನಾಗಿಸಬಹುದು ಅಲ್ಲವೇ. ಕನಿಷ್ಠ ಐನೂರು ಕಾಲೇಜುಗಳನ್ನು ಅತ್ಯುತ್ತಮ ಮಟ್ಟಕ್ಕೆ ಏರಿಸಬಹುದು ಅಲ್ಲವೆ ಏನಂತೀರಿ?. ಅಯ್ಯೋ ಸರಕಾರಕ್ಕೆ ಭಲೇ ಬಡತನ ದುಡ್ಡೇ ಇಲ್ಲ ಅಂದುಕೊಳ್ಳೋಣ ಅಷ್ಟಾಗದಿದ್ದರೂ ಜಿಲ್ಲೆಗೆ ತಲಾ ಹತ್ತೋ ಹದಿನೈದೊ ಸಕಲ ಸವಲತ್ತುಗಳ್ಳ, ಚೆಂದ ಹೇಳಿಕೊಡುವ ಟೀಚರ್ರುಗಳುಳ್ಳ ಶಾಲೆಗಳ ಕಾಲೇಜುಗಳ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲವೇ. ಇಷ್ಟೊಂದು ಐಟಿ ಬಿಟಿ ಕಂಪನಿಗಳಿವೆ ಅವುಗಳ ಶಕ್ತಿಯಾನುಸಾರ ಶಾಲೆಗಳ ದತ್ತು ಕೊಡಿ. ಅವುಗಳ ಉದ್ದಾರ ಕಣ್ಣಿಗೆ ಕಾಣುವಂತಾಗಬೇಕು ಸಾರ್.‌

ಹಿಂದೆಂದಿಗಿಂತಲೂ ಉತ್ತಮ ಶಿಕ್ಷಣದ ಅವಶ್ಯಕತೆ ಮಕ್ಕಳಿಗೆ ಇದೆ, ಆಧುನಿಕ ಉಪಕರಣಗಳ ಸಹಾಯದಿಂದ ಮಕ್ಕಳು ನಿಜವಾಗಿಯೂ ಉತ್ತಮವಾಗಿ ಕಲಿಯಬಲ್ಲರು. ನೀವು ಪದವಿ ಮುಗಿಸಿದ ನಿರುದ್ಯೋಗಿಗಳಿಗೆ ಅಂತ ಕೊಡುವ ಎರಡು ಸಾವಿರ ರೂಪಾಯಿಯ ಅವಶ್ಯಕತೆ ಇರುವುದಿಲ್ಲ ಏನಂತೀರಿ. ನಿಮ್ಮ ಸರಕಾರದ ಆಸ್ಥಾನ ಕವಿಗಳಿಂದ, ಪ್ರಗತಿಪರರಿಂದ, ಸೋಕಾಲ್ಡ್‌ ಬುದ್ಧಿ ಜೀವಿಗಳಿಂದ ಅವರ ಬಹುಪರಾಕಿನಿಂದ ದೂರವಿದ್ದು ನಾಲಕ್ಕು ಜನ ಅಬ್ಬಬ್ಬಾ ಎನ್ನುವಂತೆ ನಿಜವಾಗಿಯೂ ಒಂದಷ್ಟು ಕೆಲಸ ಮಾಡಬೇಕು ಅಂತ ವಿನಮ್ರತೆಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಅಭಿಮಾನಿ ಎಂದು ಪ್ರವರ ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+