ಸುಳ್ಳು ಜಾತಿ ಪ್ರಮಾಣ ಪತ್ರ ಆರೋಪ, ಕೆಂಪಯ್ಯಗೆ ಮತ್ತೆ ಸಂಕಷ್ಟ
Recommended Video

ಬೆಂಗಳೂರು, ಸೆಪ್ಟೆಂಬರ್ 15 : ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ವಿವಾದದಲ್ಲಿ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಕೆಂಪಯ್ಯ ವಿರುದ್ಧ ಸಿಬಿಐ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ದಿನೇಶ್ ಕಲ್ಲಹಳ್ಳಿ ಅವರು ಕೆಂಪಯ್ಯ ವಿರುದ್ಧ ಸಿಬಿಐ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ನೌಕರಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಪ್ರಕರಣದಲ್ಲಿ ಎಸಿಬಿ ಕೆಂಪಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.

ಏನಿದು ವಿವಾದ? : ಕೆಂಪಯ್ಯ ಅವರು ಕಾಡು ಕುರುಬ ಜಾತಿಗೆ ಸೇರಿದವರಲ್ಲ. ಅವರು ಕುರುಬ ಜಾತಿಗೆ ಸೇರಿದವರು. ಕಾಡು ಕುರುಬ ಜಾತಿಗೆ ಸೇರಿದವನು ಎಂದು ಸುಳ್ಳು ಪ್ರಮಾಣ ಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದರು ಎಂಬುದು ದೂರು.
ಈ ಕುರಿತು ಕನಕಪುರ ಮೂಲದ ದಿನೇಶ್ ಕಲ್ಲಹಳ್ಳಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಎಸಿಬಿ ನಾಗರಿಕ ಹಕ್ಕು ನಿರ್ದೇಶನಾಲಯ (ಡಿಸಿಆರ್‌ಇ) ವರದಿಯನ್ನು ಆಧರಿಸಿ ಕೆಂಪಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.
ಎಸಿಬಿ ಕ್ಲೀನ್ ಚಿಟ್ ಬಳಿಕ ಪ್ರತಿಕ್ರಿಯೆ ನೀಡಿದ್ದ ದಿನೇಶ್ ಕಲ್ಲಹಳ್ಳಿ 'ನಾನು ದೂರಿನ ಜೊತೆ ನೀಡಿದ್ದ ಪ್ರಮಾಣ ಪತ್ರಗಳನ್ನು ಎಸಿಬಿ ಪರಿಗಣಿಸಿಲ್ಲ. ಎಸಿಬಿ ಮೇಲೆ ನನಗೆ ನಂಬಿಕೆ ಇಲ್ಲ' ಎಂದು ಹೇಳಿದ್ದರು. ಈಗ ಅವರು ಸಿಬಿಐ ತನಿಖೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.












Click it and Unblock the Notifications