ಹೈಕೋರ್ಟ್ ಮೆಟ್ಟಿಲೇರಿದ ವಜ್ರ ಖಚಿತ ವಾಚ್ ವಿವಾದ
ಬೆಂಗಳೂರು, ಮಾರ್ಚ್ 01 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಊಬ್ಲೋ ವಾಚ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ವಾಚ್ ಹರಾಜು ಹಾಕದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಹಿರಿಯ ವಕೀಲ ಎಸ್ ನಟರಾಜ್ ಶರ್ಮಾ ಅವರು ಮಂಗಳವಾರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ವಜ್ರ ಖಚಿತ ಊಬ್ಲೋ ವಾಚ್ ಅನ್ನು ವಶಕ್ಕೆ ಪಡೆದು, ಕ್ಯಾಬಿನೆಟ್ ಬೋರ್ಡ್ ರೂಂನಲ್ಲಿ ಇಡಲು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. [ಉಭಯ ಸದನಗಳ ಕಲಾಪ ವಾಚ್ ಗೆ ಬಲಿ]

ಮುಖ್ಯಮಂತ್ರಿಗಳು ವಾಚ್ ಅನ್ನು ಹರಾಜು ಹಾಕಲು ತಡೆ ನೀಡಬೇಕು ಎಂದು ಕೋರಿರುವ ವಕೀಲರು, ಜಾರಿ ನಿರ್ದೇಶನಾಲಯಕ್ಕೆ ವಾಚ್ ವಿವಾದದ ಈ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಬೇಕು ಎಂದು ಕೋರಿದ್ದಾರೆ. [ಊಬ್ಲೋ ವಾಚ್ ವಿವಾದ : ಡಾ.ಸುಧಾಕರ ಶೆಟ್ಟಿ ಹೇಳಿದ್ದೇನು?]
ಹರಾಜು ಹಾಕುವ ಸುಳಿವು : ಫೆ.24ರಂದು ವಿಧಾನಸೌಧದಲ್ಲಿ ಮಾತನಾಡಿದ್ದ ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ಹರಾಜು ಹಾಕುವ ಬಗ್ಗೆ ಸುಳಿವು ನೀಡಿದ್ದರು. 'ವಾಚ್ ವಿವಾದದಲ್ಲಿ ಮುಖ್ಯಮಂತ್ರಿಗಳು ಜನ ಮೆಚ್ಚುವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ' ಎಂದು ಹೇಳಿದ್ದರು. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]
ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದು, ಸಿದ್ದರಾಮಯ್ಯ ಅವರ ವಾಚ್ ವಿವಾದದ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ. ರಿಟ್ ಅರ್ಜಿಯಲ್ಲಿ ಈ ದೂರಿನ ಬಗ್ಗೆಯೂ ಪ್ರಸ್ತಾಪಿಸಲಾಗಿದ್ದು, ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications