ವೀರ್ ಸಾವರ್ಕರ್ ಫೋಟೋ ವಿವಾದ: ಸದನದಲ್ಲಿ ಬಿಸಿಬಿಸಿ ಚರ್ಚೆ?
ಬೆಂಗಳೂರು,ಡಿಸೆಂಬರ್ 19: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸೋಮವಾರ (ಡಿ. 19) ರಿಂದ ಆರಂಭವಾಗಲಿದೆ. ಈ ಬಾರಿಯ ಅಧಿವೇಶನದಲ್ಲಿ ಸರ್ಕಾರವನ್ನ ಕಟ್ಟಿ ಹಾಕುವ ನಿಟ್ಟಿನಲ್ಲಿ ಹತ್ತು ಹಲವು ವಿಚಾರಗಳನ್ನ ಈಗಾಗಲೇ ಕಾಂಗ್ರೆಸ್ ಪಕ್ಷ ಸಿದ್ದಪಡಿಸಿಕೊಂಡಿದೆ. ಈಗಾಗಲೇ ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ವೀರ ಸಾವರ್ಕರ್ ಫೋಟೋವನ್ನು ಅನಾವರಣ ಮಾಡುವ ಮೂಲಕ ಆಡಳಿತ ಪಕ್ಷ ಬಿಜೆಪಿ ವಿವಾದದ ಕಿಡಿ ಸೃಷ್ಟಿಸಿದ್ದು, ವೀರ್ ಸಾವರ್ಕರ್ ವಿಚಾರದದಲ್ಲಿ ರಾಜ್ಯ ಸರ್ಕಾರದ ನಡೆಯನ್ನ ತೀವ್ರವಾಗಿ ವಿರೋಧ ಮಾಡಲಿದೆ. ಅಲ್ಲದೇ ಮತದಾರರ ಮಾಹಿತಿ ಕಳವು, ಗಡಿ ವಿವಾದ ಹಾಗೂ ಭ್ರಷ್ಟಚಾರ ವಿಚಾರಗಳ ಸದನದಲ್ಲಿ ಚರ್ಚೆಯಾಗುವ ಮೂಲಕ ಅಧಿವೇಶನ ಬಿಸಿ ಏರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಕಾಂಗ್ರೆಸ್ ಶಾಸಕಾಂಗ ಸಭೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಹಿನ್ನೆಲೆಯಲ್ಲಿ ಚರ್ಚೆ ನಡೆಸುವ ಸಲುವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸೋಮವಾರ ನಡೆಯಲಿದೆ. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಲಿದ್ದು, ಅಧಿವೇಶನದಲ್ಲಿ ಯಾವ ವಿಚಾರಗಳನ್ನು ಎತ್ತಿಕೊಂಡು ಚರ್ಚೆ ನಡೆಸುವ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭಬೆ ನಡೆಯಲಿತ್ತು ಹತ್ತು ಹಲವು ಅಸ್ತ್ರಗಳನ್ನ ಬಳಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸಜ್ಜಾಗುತ್ತಿದೆ.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ!
ಕರ್ನಾಟಕ - ಮಹಾರಾಷ್ಟ ಗಡಿ ಗದ್ದಲ ತೀವ್ರಗೊಂಡಿದ್ದು, ಅಧಿವೇಶನದ ಸಂದರ್ಭದಲ್ಲೂ ಇದು ಪ್ರತಿಧ್ವನಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅಧಿವೇಶನ ಮಹತ್ವ ಪಡೆದುಕೊಂಡಿದೆ. ಈಗಾಗಲೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಭಯ ರಾಜ್ಯಗಳು ಗಡಿ ವಿಚಾರವಾಗಿ ಯಾವುದೇ ಗೊಂದಲ ಸೃಷ್ಟಿಸದಂತೆ ಸೂಚನೆ ನೀಡಿದ್ದರೂ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಪುಂಡಾಟಿಕೆ ನಡೆಸಿದರೂ ಅಚ್ಚರಿ ಇಲ್ಲ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇನ್ನೂ ಚುನಾವಣಾ ಸಂದರ್ಭದಲ್ಲಿ ಗಡಿ ವಿವಾದದ ಖ್ಯಾತೆಯನ್ನ ತೆಗೆದುಕೊಂಡಿದ್ದು, ಇದರಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದ್ದೆ ಎಂದು ಸರ್ಕಾರದ ವಿರುದ್ದ ಈಗಾಗಲೇ ಕಾಂಗ್ರೆಸ್ ನಾಯಕರು ಕಿಡಿಕಾರಿದ್ರು. ಇನ್ನೂ ಈ ಭಾರಿಯ ಸದನದಲ್ಲೂ ಗಡಿ ವಿವಾದದ ಬಗ್ಗೆಯೂ ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಗಡಿ ವಿವಾದವನ್ನು ನಿರ್ವಹಣೆ ಮಾಡಿದ ರೀತಿಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಮುಂದಾಗಲು ಸಜ್ಜಾಗಿದೆ ಎಂದು ಹೇಳಲಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ಗಡಿ ವಿವಾದವಾಗಿ ಸರ್ಕಾರದ ನಿಲುವು ಹಾಗೂ ಧೋರಣೆಯ ಬಗ್ಗೆ ಪ್ರಸ್ತಾಪ ಮಾಡಿ ಚಾಟಿ ಬೀಸಲು ಕಾಂಗ್ರೆಸ್ ಮುಂದಾಗಿದೆ.

ಸರ್ಕಾರದ ವಿರುದ್ದ ಕೇಳಿ ಬಂದ 40% ಕಮಿಷನ್ ಆರೋಪ
ಸರ್ಕಾರದ ವಿರುದ್ದ ಸಾಕಷ್ಟು ಬಾರಿ 40 % ಕಮಿಷನ್ ಆರೋಪ ಕೇಳಿ ಬಂದಿದ್ದು, ಈ ಬಾರಿಯೂ ಸದನದಲ್ಲಿ ಶೇ.40ರಷ್ಟು ಕಮಿಷನ್ ಆರೋಪ ಸದ್ದು ಮಾಡುವ ಸಾಧ್ಯತೆ ಇದೆ. ಕಳೆದ ಎರಡು ಬಾರಿಯ ಅಧಿವೇಶನದಲ್ಲೂ ಶೇ.40ರಷ್ಟು ಕಮಿಷನ್ ಆರೋಪದ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಅವಕಾಶ ಕೋರಿತ್ತು. ಆದರೆ ಅನುಮತಿ ಸಿಕ್ಕಿರಲಿಲ್ಲ. ಈ ಬಾರಿಯೂ ಭ್ರಷ್ಟಾಚಾರದ ಆರೋಪವನ್ನು ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಮುಂದಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ
ಇನ್ನೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರ ಕೂಡಾ ಕಾಂಗ್ರೆಸ್ ಪಾಲಿಗೆ ಇರುವ ಪ್ರಮುಖ ಅಸ್ತ್ರವಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಶೂಟ್ ಔಟ್ ಪ್ರಕರಣ, ಕರಾವಳಿ ಭಾಗದಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಜೊತೆಗೆ ಬೇಕರಿ ಮಾಲೀಕರ ಮೇಲೆ ಪುಡಿ ರೌಡಿಗಳ ನಡೆಸಿದ ದಾಂಧಲೆ ಮುಂತಾದವುಗಳನ್ನು ಮುಂದಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರವನ್ನು ಪಸ್ತಾಪ ಮಾಡಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವುದು ಕಾಂಗ್ರೆಸ್ ತಂತ್ರಗಾರಿಕೆಯಾಗಿದೆ.

ಕಬ್ಬು ಬೆಳೆಗಾರರ ಸಮಸ್ಯೆ
ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದನೆಗೆ ಪ್ರೋತ್ಸಾಹ ಧನ ನೀಡಬೇಕು, ಕಡಿಮೆ ಬಡ್ಡಿಯಲ್ಲಿ ಸಾಲ, ತೆರಿಗೆ ವಿನಾಯಿತಿ, ಎಥನಾಲ್ ಖರೀದಿ ಭರವಸೆ, ವಿದ್ಯುತ್ ಖರೀದಿ ಭರವಸೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಉಪ ಉತ್ಪನ್ನವಾದ ಎಥೆನಾಲ್ ಗೆ ಸಂಬಂಧಿಸಿದಂತೆ ಪ್ರತಿ ಮೆಟ್ರಿಕ್ ಟನ್ ಗೆ 50 ರೂ. ಹೆಚ್ಚುವರಿಯಾಗಿ ರೈತರಿಗೆ ಪಾವತಿಸುವ ಸಂಬಂಧವಾಗಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಭರವಸೆ ನೀಡಿದ್ದರು. ಅದರಂತೆ ಆದೇಶ ಹೊರಡಿಸಲಾಗಿದೆ. ಆದರೆ ಸಚಿವರು ಸಭೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ. ಈ ವಿಚಾರ ಸದನದಲ್ಲೂ ಸದ್ದು ಮಾಡಲಿದೆ.
ಎಸ್‌ಟಿ, ಎಸ್‌ಸಿ ಮೀಸಲಾತಿ
ಎಸ್‌ಸಿ ,ಎಸ್‌ಟಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡಿತ್ತು. ಆದರೆ, ವಾಸ್ತವದಲ್ಲಿ ಇದು ಜಾರಿಗೆ ಬರಲು ಅಸಾಧ್ಯ ಎಂದು ಕಾಂಗ್ರೆಸ್ ಹೇಳಿತ್ತು. ಈ ನಡುವೆ ಲೋಕಸಭೆಯಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸುವ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸಚಿವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ಗೆ ಅಸ್ತ್ರ ಸಿಕ್ಕಂತಾಗಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಸರ್ಕಾರದ ನಿರ್ಧಾರದ ಹಿಂದೆ ಕೇವಲ ರಾಜಕೀಯ ಉದ್ದೇಶ ಇದೆ ಎಂದು ಈಗಾಗಲೇ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಮೀಸಲಾತಿ ಪ್ರಮಾಣವನ್ನು ಶೇ.50ರಷ್ಟು ಪ್ರಮಾಣದ ಮಿತಿಯನ್ನು ಕಿತ್ತುಹಾಕದೆ ಹೇಗೆ ಮೀಸಲಾತಿ ಹೆಚ್ಚಳ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವನ್ನು ಸದನದಲ್ಲೂ ಪಸ್ತಾಪ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications