Winter effect: ಮೈಕೊರೆಯುವ ಚಳಿಗೆ ತತ್ತರಿಸಲಿದೆ ಉತ್ತರ ಕರ್ನಾಟಕ- ಹವಾಮಾನ ಇಲಾಖೆ ನೀಡಿದ ಮಾಹಿತಿ ಏನು?
ಬೆಂಗಳೂರು, ಡಿಸೆಂಬರ್ 15: ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ತಾಪಮಾನ ಗಣನೀಯವಾಗಿ ಇಳಿಕೆ ಕಂಡಿದೆ. ಗುರುವಾರ ಈ ಭಾಗದ ಬಹುತೇಕ ಜಿಲ್ಲೆಗಳು ಅತೀ ಕನಿಷ್ಠ ತಾಪಮಾನ ಜೊತೆಗೆ ಭಾರೀ ಚಳಿಗೆ ಸಾಕ್ಷಿಯಾಗಿವೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಇಂದು ಶುಕ್ರವಾರ ಅತ್ಯಧಿಕ ಚಳಿ ದಾಖಲಾಗಿದ್ದು, ಇನ್ನೂ ಕೆಲವು ದಿನ ಈ ಮೈಕೊರೆಯುವ ಚಳಿಯ ವಾತಾವರಣವೇ ಮುಂದುವರಿಯಲಿದೆ ಎಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ.
ಹವಾಮಾನ ಇಲಾಖೆ ಪ್ರಕಾರ, ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಲಿನ ಹೊರತಾಗಿಯು ರಾತ್ರಿ ಮತ್ತು ಬೆಳ್ಳಂಬೆಳಗ್ಗೆ ಅತ್ಯಧಿಕ ಚಳಿ ದಾಖಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಗುರುವಾರ 12.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಇಂದು ಶುಕ್ರವಾರ 11.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಈ ಮೂಲಕ ಉತ್ತರ ಕರ್ನಾಟಕದಲ್ಲಿ ಭಾರಿ ಚಳಿಯ ವಾತಾವರಣ ಸೃಷ್ಟಿಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಕಳೆದ ಎರಡು ದಿನಗಳಿಂದ ಚಳಿ ಕ್ರಮೇಣ ಏರಿಕೆ ಆಗಿದ್ದು, ಈ ಭಾಗಕ್ಕಿಂತಲೂ ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ಚಳಿ ಬೀಳುತ್ತಿದೆ.
ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರು ಪ್ರಾದೇಶಿಕ ಕಚೇರಿ ಹವಾಮಾನ ತಜ್ಞ ಪ್ರಸಾದ್ ಅವರು, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಳಿಗೆ ಕಾರಣವೆಂದರೆ ತೇವಭರಿತ ಗಾಳಿ ಬೀಸುತ್ತಿರುವುದು ಎಂದಿದ್ದಾರೆ. ಇನ್ನೂ ಕೆಲವು ದಿನ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚಳಿ ಹೀಗೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.

ರಾಜಧಾನಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 26.5 ಮತ್ತು 17.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಗಾಳಿಯ ವೇಗ ಪ್ರತಿ ಗಂಟೆಗೆ 25 ಕಿಮೀ ನಷ್ಟಿದೆ.
ಉತ್ತರ ಕರ್ನಾಟಕದಲ್ಲಿ ದಾಖಲಾದ ಚಳಿ ವಿವರ
ಉತ್ತರ ಕರ್ನಾಟಕದಲ್ಲಿ ಇಂದಿನ ಬೆಳಗ್ಗೆವರೆಗೆ ವಿಜಯಪುರದಲ್ಲಿ ಅತ್ಯಧಿಕ ಕಡಿಮೆ ತಾಪಮಾನ (11.8 ಡಿಸೆ) ದಾಖಲಾಗಿದೆ. ಉಳಿದಂತೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.4 ಡಿ.ಸೆ, ಬೀದರ್ 14 ಡಿ.ಸೆ, ಬಾಗಲಕೋಟೆ 15.2 ಡಿ.ಸೆ, ಗದಗ 15.1 ಡಿ.ಸೆ, ಹಾವೇರಿ 16.4ಡಿ.ಸೆ, ರಾಯಚೂರು 15.4 ಡಿ.ಸೆಲ್ಸಿಯಸ್ ನಷ್ಟು ಚಳಿ ದಾಖಲಾಗಿದೆ.
ಇದೇ ವೇಳೆ ದಕ್ಷಿಣ ಒಳನಾಡಿನ ರಾಜ್ಯಗಳಾದ ಚಾಮರಾಜನಗರ 16.4 ಡಿ.ಸೆ, ಚಿಕ್ಕಮಗಳೂರು15.2 ಡಿ.ಸೆ, ಚಿಂತಾಮಣಿ 15.8 ಡಿ.ಸೆ, ಶಿವಮೊಗ್ಗ 16.1ಡಿ.ಸೆಲ್ಸಿಯಸ್, ಬೆಂಗಳೂರು ನಗರದಲ್ಲಿ 17.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ರಾಜ್ಯದ ಮಳೆ ಮುನ್ಸೂಚನೆ
ಕರ್ನಾಟಕ ರಾಜ್ಯದಲ್ಲಿ ನಾಳೆ ಶನಿವಾರ ಡಿಸೆಂಬರ್ 16 ರಿಂದ ಕರಾವಳಿಯ ಮೂರು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ತುಮಕೂರು, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೂರು ದಿನ ತುಂತುರು, ಅಲ್ಲಲ್ಲಿ ಜೋರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.












Click it and Unblock the Notifications