ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ ಎಂದ ಸಿದ್ದರಾಮಯ್ಯ: ಯಾವಾಗ ಗೊತ್ತಾ?
ಶಿವಮೊಗ್ಗ, ಜನವರಿ 12 : ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವ ಹೈಕಮಾಂಡ್ ತೀರ್ಮಾನ ಸರಿಯಾಗಿದೆ, ಇದನ್ನು ನಾನು ಬೆಂಬಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ರು, ಆದರೆ, ಇದೀಗ ಆಯೋಧ್ಯೆಗೆ ಭೇಟಿ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಜನವರಿ 22 ರ ನಂತರ ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ ಎಂದ ಸಿದ್ದರಾಮಯ್ಯ ಅವರು, ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಿಸಿ ಬಿಜೆಪಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದರು.

ದೇವರನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆಯೇ ಹೊರತು ಶ್ರೀ ರಾಮಚಂದ್ರನನ್ನು ವಿರೋಧಿಸುವುದಿಲ್ಲ. 22 ನೇ ತಾರೀಖಿನ ನಂತರ ಅಯೋಧ್ಯೆಗೆ ಭೇಟಿ ನೀಡುವುದಾಗಿ ಹೇಳಿದರು. ಇಡೀ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ. ದೇವರನ್ನು ಬಳಸಿ ಬಿಜೆಪಿ ಮಾಡುತ್ತಿರುವ ರಾಜಕೀಯವನ್ನು ನಾವು ವಿರೋಧಿಸುತ್ತೇವೆ ಎಂದರು.
ಕುಮಾರಸ್ವಾಮಿ ಅಂದರೆ ಸುಳ್ಳು, ಸುಳ್ಳು ಎಂದರೆ ಕುಮಾರಸ್ವಾಮಿ
ಗ್ಯಾರಂಟಿ ಯೋಜನೆಗಳ ಬಗ್ಗೆ ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು , ಕುಮಾರಸ್ವಾಮಿ ಅಂದರೆ ಸುಳ್ಳು, ಸುಳ್ಳು ಎಂದರೆ ಕುಮಾರಸ್ವಾಮಿ. ಅವರ ಟೀಕೆಗೆ ನಾನು ಉತ್ತರಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷ ನಾಯಕರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಪಕ್ಷಗಳು ತಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಗ್ಯಾರಂಟಿಗಳನ್ನು ನೀಡಿಲ್ಲವಾದ್ದರಿಂದ ಅವರಿಗೆ ಈ ಯೋಜನೆಗಳು ನುಂಗಲಾರದ ತುತ್ತಾಗಿವೆ ಎಂದರು.
ಇನ್ನೂ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮೂವರು ಉಪಮುಖ್ಯಮಂತ್ರಿಗಳ ವಿಚಾರ ಹೈಕಮಾಂಡ್ ನಾಯಕರ ಮಟ್ಟದಲ್ಲಿ ಚರ್ಚೆಯಾಗಿದೆಯೇ ಎಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಚರ್ಚಿಸುವುದಿಲ್ಲ ಎಂದು ಉತ್ತರ ನೀಡಲು ಮುಖ್ಯಮಂತ್ರಿಗಳು ನಿರಾಕರಿಸಿದರು.












Click it and Unblock the Notifications