58 ಸಾವಿರ ಶಾಲಾ ಶಿಕ್ಷಕರ ನೇಮಕಾತಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಹೇಳಿಕೆ
ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 58 ಸಾವಿರ ಹುದ್ದೆಗಳ ಭರ್ತಿಗೆ ನಿಗದಿತ ಕಾಲಮಿತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತಿಭಾವಂತ ಶಿಕ್ಷಕರು ಇಲಾಖೆಯ ಶಕ್ತಿ, ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡರೂ ಅದು ತಾತ್ಕಾಲಿಕ ಪರಿಹಾರವಷ್ಟೇ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ, ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿದ್ದ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾದ 13,351 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು, ಆದರೆ ಕೆಲವರು ಕೋರ್ಟ್ ಮೊರೆ ಹೋಗಿದ್ದು, ಸ್ಥಳ ನಿಯೋಜನೆ ಆದೇಶ ನೀಡಲು ತಡವಾಗಿದೆ, ಕಾನೂನು ನೆರವು ಪಡೆದು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದರು.
ಪಠ್ಯ ಬದಲಾವಣೆ ಬಗ್ಗೆ ಶಿಕ್ಷಣ ಸಚಿವರು ಹೇಳಿದ್ದೇನು?
ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ಬಗ್ಗೆ ಮಾತನಾಡಿರುವ ಸಚಿವ ಮಧು ಬಂಗಾರಪ್ಪ, "ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂವಿಧಾನ ವಿರೋಧಿ ಮತ್ತು ಅವೈಜ್ಞಾನಿಕ ಪಠ್ಯವನ್ನು ಪರಿಷ್ಕರಣೆ ಮಾಡಲಾಗುವುದು" ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಕ್ರಮದಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಸೇರ್ಪಡೆ ಮಾಡಲಾಗಿತ್ತು, ಈ ಅಂಶಗಳನ್ನು ಪರಿಷ್ಕರಣೆ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಚಿಂತಿಸಿದ್ದಾರೆ. ಶಿಕ್ಷಣ ತಜ್ಞರೊಂದಿಗೆ ಈಗಾಗಲೇ ಮಾತುಕತೆ ನಡೆದಿದೆ, ಮಕ್ಕಳಿಗೆ ಕಲಿಸುವ ಪಠ್ಯಕ್ರಮ ವೈಜ್ಞಾನಿಕವಾಗಿರಬೇಕು ಎಂದು ಲೇಖಕರು, ಸಾಹಿತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
"ವಿದ್ಯಾರ್ಥಿಗಳಲ್ಲಿ ತಪ್ಪು ತಿಳುವಳಿಕೆ ಬರಬಾರದು ಎನ್ನುವ ಉದ್ದೇಶದಿಂದ ಈ ಸಲಹೆ ನೀಡಲಾಗಿದೆ. ಪಢ್ಯಕ್ರಮದಲ್ಲಿ ಯಾವ ಪಾಠಗಳನ್ನು ಮುಂದುವರೆಸಬೇಕು, ಯಾವ ಪಾಠಗಳನ್ನು ಕೈಬಿಡಬೇಕು ಎನ್ನುವ ಬಗ್ಗೆಯೂ ತಮ್ಮ ಅಭಿಪ್ರಾಯ ನೀಡಿದ್ದಾರೆ. ಇದನ್ನು ಆಧರಿಸಿ ಶಾಲೆಗಳಿಗೆ ಸುತ್ತೋಲೆ ನೀಡಲಾಗಿದೆ" ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
"ಪಠ್ಯಪುಸ್ತಕಗಳು ಪ್ರಕಟವಾಗಿ ಈಗಾಗಲೇ ಶಾಲೆಗಳನ್ನು ತಲುಪಿದ್ದು, ಪರಿಷ್ಕೃತ ಪಠ್ಯಕ್ರಮ ಪ್ರಕಟಿಸಲು ಆಗುತ್ತಲ್ಲ. ಈಗಿರುವ ಪಠ್ಯಕ್ರಮವನ್ನು ಇನ್ನೂ ಬೋಧಿಸಲಾಗಿಲ್ಲ, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ನಿರ್ಧಾರ ಮಾಡಲಾಗುವುದು, ಸರ್ಕಾರ ಶೀಘ್ರದಲ್ಲಿಯೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ" ಎಂದು ಹೇಳಿದರು.












Click it and Unblock the Notifications