ಜೆಡಿಎಸ್‌ಗೆ ಶುರುವಾಗಿದೆಯಾ ಆಪರೇಷನ್ ಹಸ್ತದ ಭೀತಿ?
ಬೆಂಗಳೂರು, ನವೆಂಬರ್ 25: ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಗೆಲುವಿನ ಬಳಿಕ ಆಡಳಿತರೂಢ ಕಾಂಗ್ರೆಸ್ ನಲ್ಲಿ ಹುಮ್ಮಸ್ಸು ಬಂದಿದ್ದರೆ, ಅತ್ತ ದೋಸ್ತಿ ಪಕ್ಷಗಳಲ್ಲಿ ಆತಂಕ ಶುರುವಾಗಿದೆ. ಅದರಲ್ಲೂ ಜೆಡಿಎಸ್ ಪಕ್ಷದಲ್ಲಿ ತುಸು ಜಾಸ್ತಿಯೇ ತಳಮಳ ಆರಂಭವಾಗಿದ್ದು, ಕಾಂಗ್ರೆಸ್ ನವರು ಆಪರೇಷನ್ ಹಸ್ತದ ಮೂಲಕ ತಮ್ಮ ಪಕ್ಷದ ಶಾಸಕರನ್ನು ಸೆಳೆದುಕೊಳ್ಳುತ್ತಾರೋ ಎಂಬ ಭಯ ಪಕ್ಷದ ವರಿಷ್ಟರಲ್ಲಿ ಆರಂಭವಾಗಿದ್ದರೆ ಅಚ್ಚರಿಪಡಬೇಕಾಗಿಲ್ಲ.
ಈ ನಡುವೆ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದಲ್ಲಿ ಯಾವುದೇ ಬಣ ಇಲ್ಲ ಎಂದು ಹೇಳಿದರೂ ಪಕ್ಷದೊಳಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣವಂತು ಇದ್ದೇ ಇದೆ ಎಂಬುದು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಗೊತ್ತಾಗಿದೆ. ಅದನ್ನು ಅವರ ಬೆಂಬಲಿಗ ಸಚಿವರು ಮತ್ತು ಶಾಸಕರು ಸಮಯ ಸಿಕ್ಕಾಗಲೆಲ್ಲ ಬಹಿರಂಗಪಡಿಸಿದ್ದಾರೆ. ಆದರೆ ಚುನಾವಣೆ ಅಂಥ ಬಂದಾಗ ಒಗ್ಗಟ್ಟಾಗಿ ನಡೆಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೆಲ್ಲದರ ನಡುವೆ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂಬ ಕೂಗು ಮಾತ್ರ ಒಕ್ಕಲಿಗ ನಾಯಕರಲ್ಲಿದೆ. ಅದು ಸಕಾರವಾಗಬೇಕಾದರೆ ಇನ್ನಷ್ಟು ಒಕ್ಕಲಿಗ ನಾಯಕರು ಕೈಜೋಡಿಸಬೇಕಾದ ಅಗತ್ಯತೆಯೂ ಇದೆ.

ಹಳೆ ಮೈಸೂರು ಭಾಗದಲ್ಲಿ ಇದುವರೆಗೆ ಒಕ್ಕಲಿಗರು ದೇವೇಗೌಡರು ಮತ್ತು ಕುಮಾರಸ್ವಾಮಿಯನ್ನು ನಾಯಕರನ್ನಾಗಿ ಒಪ್ಪಿಕೊಂಡು ಬಂದಿದ್ದಾರೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಬಹುದು ಎಂಬ ನಿರೀಕ್ಷೆಯಲ್ಲಿ ಅತ್ತ ವಾಲಿದ್ದರು. ತದ ನಂತರ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಆಗುವ ಯೋಗ ಕೂಡಿ ಬರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಬಹುದೇನೋ? ಹಾಗೊಂದು ವೇಳೆ ಆಗಬೇಕಾದರೆ ಅದಕ್ಕೆ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಮುದಾಯದ ಪ್ರಾಬಲ್ಯವನ್ನು ಪ್ರದರ್ಶನ ಮಾಡಲೇ ಬೇಕಾಗುತ್ತದೆ. ಅದಕ್ಕೆ ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತಂದು ಗೆಲ್ಲಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಜೆಡಿಎಸ್ ದುರ್ಬಲವಾದರೆ ಡಿಕೆಶಿಗೆ ಲಾಭ?
ಇಲ್ಲಿ ಡಿ.ಕೆ.ಶಿವಕುಮಾರ್ ಅವರಿಗೂ ತಾನೇನು ಎಂಬುದನ್ನು ತೋರಿಸಬೇಕಿತ್ತು ಮತ್ತು ಒಕ್ಕಲಿಗ ಶಾಸಕರನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯತೆಯಿತ್ತು. ಹೀಗಾಗಿಯೇ ಅವರು ತಮ್ಮ ರಾಜಕೀಯ ದ್ವೇಷ ಏನೇ ಇದ್ದರೂ ಅದೆಲ್ಲವನ್ನು ಮರೆತು ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಮೂಲಕ ರಾಮನಗರದಿಂದ ಜೆಡಿಎಸ್ ನ್ನು ಇನ್ನಿಲ್ಲದಂತೆ ಮಾಡಿದ್ದಾರೆ. ಒಂದು ಕಾಲದಲ್ಲಿ ರಾಮನಗರ, ಮಂಡ್ಯ, ಮೈಸೂರು ಭಾಗಗಳಲ್ಲಿ ಹೆಚ್ಚಿನ ಸ್ಥಾನ ಗೆದ್ದು ಒಕ್ಕಲಿಗ ನಾಯಕ ಎನಿಸಿಕೊಂಡಿದ್ದ ದೇವೇಗೌಡರು ಮತ್ತು ಅವರ ಕುಟುಂಬವನ್ನು ಬದಿಗೆ ಸರಿಸಿ ಆ ಪಟ್ಟವನ್ನು ತನ್ನತ್ತ ಎಳೆದುಕೊಳ್ಳುವತ್ತ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ಇದು ಸಾಧ್ಯವಾಬೇಕಾದರೆ ಜೆಡಿಎಸ್ ದುರ್ಬಲವಾಗಬೇಕು. ಅದು ಆಗಬೇಕಾದರೆ ಅಲ್ಲಿರುವ ಶಾಸಕರನ್ನು ತಮ್ಮತ್ತ ಸೆಳೆಯಲೇ ಬೇಕಾಗುತ್ತದೆ. ಅದು ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಅಚ್ಚರಿಯಿಲ್ಲ. ಈಗಾಗಲೇ ಮಾಧ್ಯಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕಾಂಗ್ರೆಸ್ ನಿಂದ ಗೆದ್ದು ಬಂದ ಚನ್ನಪಟ್ಟಣದ ಶಾಸಕ ಸಿ.ಪಿ,ಯೋಗೇಶ್ವರ್ ನನಗೆ ಟಾಸ್ಕ್ ಕೊಟ್ಟರೆ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಗೆ ಎಳೆದುಕೊಂಡು ಬರುವುದು ಕಷ್ಟವೇನಲ್ಲ ಎಂದಿದ್ದಾರೆ. ಈ ಮಾತು ಕೇಳಿದರೆ ಜೆಡಿಎಸ್ ಗೆ ಮುಂದಿದೆ ಮಾರಿಹಬ್ಬ ಎಂಬಂತೆ ಕಾಣಿಸುತ್ತಿದೆ.

ಜೆಡಿಎಸ್ ಪಕ್ಷದ ಮುಂದಿನ ಭವಿಷ್ಯ ಏನು?
ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ತಾವು ಕಟ್ಟಿ ಬೆಳೆಸಿದ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಯಾವ ಪ್ರಯತ್ನ ಮಾಡುತ್ತಾರೆ? ಈಗಿರುವ ಜೆಡಿಎಸ್ ಶಾಸಕರು ಆಮಿಷಗಳಿಗೆ ಒಳಗಾಗದೆ ಪಕ್ಷದಲ್ಲಿಯೇ ಉಳಿಯುವಂತೆ ಮಾಡಲು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ. ಜೆಡಿಎಸ್ ಪಕ್ಷದ ಮುಂದಿನ ಭವಿಷ್ಯ ಏನು? ಹೀಗೆ ಹತ್ತಾರು ಸವಾಲ್ ಗಳು ಹೆಚ್.ಡಿ.ಕುಮಾರಸ್ವಾಮಿ ಮುಂದಿದೆ. ಇದೆಲ್ಲದರ ನಡುವೆ ಉಪಚುನಾವಣೆಯಲ್ಲಿ ದೋಸ್ತಿಗಳಿಗೆ ಸೋಲಾಗಲು ಕುಟುಂಬ ರಾಜಕಾರಣ, ಪುತ್ರ ವಾತ್ಸಲ್ಯ ಕಾರಣವಾಯಿತಾ ಎಂಬ ಚರ್ಚೆಗಳು ಶುರುವಾಗಿವೆ.
ಕುಟುಂಬ ರಾಜಕಾರಣದ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುತ್ತಿದ್ದ ಬಿಜೆಪಿ ಈ ಬಾರಿಯ ಉಪಚುನಾವಣೆಯಲ್ಲಿ ಅದನ್ನೇ ಮಾಡಿದೆ. ಶಿಗ್ಗಾಂವಿಯಲ್ಲಿ ಪಕ್ಷದ ಕೆಲವು ನಾಯಕರ ವಿರೋಧದ ನಡುವೆಯೂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿತು. ಇತ್ತ ಜೆಡಿಎಸ್ ಪಕ್ಷವೂ ಹೊರತಾಗಿರಲಿಲ್ಲ. ಕ್ಷೇತ್ರವನ್ನು ಎನ್ ಡಿಎ ಬಗಲಿನಲ್ಲಿ ಇಟ್ಟುಕೊಳ್ಳಬೇಕೆಂಬ ಇಚ್ಚಾಶಕ್ತಿಯಿದ್ದಿದ್ದರೆ ಬಿಜೆಪಿಗೆ ಬಿಟ್ಟು ಕೊಡಬಹುದಿತ್ತು. ಆಗ ಸಿ.ಪಿ.ಯೋಗೇಶ್ವರ್ ಪಕ್ಷ ಬಿಟ್ಟು ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ ಇಲ್ಲಿ ಕುಮಾರಸ್ವಾಮಿ ಜಾಣ ನಡೆ ತೋರಿದ್ದರು. ಈ ಬಾರಿ ತನ್ನ ಪ್ರಭಾವ ಇರುವುದರಿಂದ ಮಗನನ್ನು ಸುಲಭವಾಗಿ ಗೆಲ್ಲಿಸಿಕೊಂಡು ಬರಬಹುದು ಎಂಬುದು ಅವರ ಆಲೋಚನೆಯಾಗಿತ್ತು. ಹೀಗಾಗಿ ಅವರು ಸಿ.ಪಿ.ಯೋಗೇಶ್ವರ್ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪಲಿಲ್ಲ.
ಬಿಜೆಪಿಗೆ ಬಿಸಿ ತುಪ್ಪವಾದ ಭಿನ್ನಮತೀಯರು
ಇಲ್ಲಿ ಎರಡು ಕಡೆಯಲ್ಲಿಯೂ ಪುತ್ರ ವಾತ್ಸಲ್ಯ ಕೆಲಸ ಮಾಡಿದೆ. ಹಾಗೆಯೇ ಅದರ ಪರಿಣಾಮವೂ ಗೊತ್ತಾಗಿದೆ. ಕುಟುಂಬ ರಾಜಕಾರಣವನ್ನು ವಿರೋಧಿಸಿಕೊಂಡು ಬಂದಿರುವ ಬಿಜೆಪಿಗೆ ಕರ್ನಾಟಕದ ಮಟ್ಟಿಗೆ ಬಿಸಿ ತುಪ್ಪವಾಗಿದೆ. ಬಿ.ಎಸ್.ಯಡಿಯೂರಪ್ಪ ತಮ್ಮ ಮಕ್ಕಳನ್ನು ಮುಂದಿಟ್ಟುಕೊಂಡು ವಾತ್ಸಲ್ಯ ಮೆರೆಯುತ್ತಿದ್ದಾರೆ ಎಂಬ ಆಕ್ರೋಶ ಬಿಜೆಪಿ ಪಕ್ಷದಲ್ಲಿಯೇ ಇದೆ. ಅದನ್ನು ಪದೇ ಪದೇ ಹಿರಿಯ ಶಾಸಕ ಬಸವನಗೌಡ ಯತ್ನಾಳ್ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಬಹುತೇಕ ಹಿರಿಯ ನಾಯಕರು ಈ ವಿಚಾರದಲ್ಲಿ ಯತ್ನಾಳ್ ಪರವಾಗಿದ್ದಾರೆ.

ಬಹುಶಃ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿ, ಒಡೆದು ಹೋಗಿರುವ ನಾಯಕರ ಮನಸ್ಸುಗಳನ್ನು ಸರಿಪಡಿಸದೆ ಹೋದರೆ ಅದರ ಪರಿಣಾಮಗಳು ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ. ಹಾಗೆಯೇ ಜೆಡಿಎಸ್ ಪಕ್ಷದಲ್ಲಿಯೂ ಕೂಡ ದೇವೇಗೌಡರ ಕುಟುಂಬವನ್ನು ಹೊರತು ಪಡಿಸಿ ಇತರೆ ನಾಯಕರಿಗೆ ಪಕ್ಷ ಸಂಘಟನೆಗೆ ಅವಕಾಶ ಮಾಡಿಕೊಡದೆ ಹೋದರೆ, ಮುಂದಿನ ದಿನಗಳಲ್ಲಿ ಜತೆಗಿರುವ ಶಾಸಕರು ತಮ್ಮ ದಾರಿಯನ್ನು ಹುಡುಕುವ ಮನಸ್ಸು ಮಾಡಿದರೆ ಆಗ ಕಾಂಗ್ರೆಸ್ ನಾಯಕರ ತಮ್ಮೆಡೆಗೆ ಸೆಳೆಯುವ ತಂತ್ರ ಮಾಡಿದರೂ ಅದರಲ್ಲಿ ಅಚ್ಚರಿಯೇನೂ ಇಲ್ಲ.












Click it and Unblock the Notifications