ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಘೋಷಣೆ ಮಾಡ್ತಾರಾ ಜನಾರ್ದನ ರೆಡ್ಡಿ?
ಬೆಂಗಳೂರು,ಡಿಸೆಂಬರ್ 24: 2023 ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೂರು ಪಕ್ಷಗಳು ಸಾಕಷ್ಟು ಸಿದ್ದತೆಯನ್ನ ಮಾಡಿಕೊಂಡಿವೆ. ಈ ಮಧ್ಯೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಸಾಕಷ್ಟು ಸಕ್ರಿಯರಾಗಿದ್ದಾರೆ. ಗಾಲಿ ಜನಾರ್ಧನ ರೆಡ್ಡಿ ಅವರ ಮುಂದಿನ ರಾಜಕೀಯ ನಿರ್ಧಾರ ಏನು? ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ರೆಡ್ಡಿ ಹೊಸ ಪಕ್ಷ ಕಟ್ಟುತ್ತಾರಾ? ಅಥವಾ ಬಿಜೆಪಿಯಲ್ಲೇ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುತ್ತಾರಾ? ಎಂಬ ಕುತೂಹಲ ಕೆರಳಿಸಿದೆ. ಈ ನಡುವೆ ಭಾನುವಾರ ಜನಾರ್ಧನ ರೆಡ್ಡಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದ್ದು, ತಮ್ಮ ಮುಂದಿನ ನಿರ್ಧಾರ ಘೋಷಣೆ ಮಾಡುವ ಸಾಧ್ಯತೆ ಹಚ್ಚಾಗಿದೆ.
ಇಷ್ಟು ದಿನ ಗಂಗಾವತಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದ ಜನಾರ್ಧನ ರೆಡ್ಡಿಯವರು, ನಾಳೆ (ಡಿಸೆಂಬರ್ 25) ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಬೆಳಗ್ಗೆ 10.30 ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮುಂದಿನ ರಾಜಕೀಯ ಹೆಜ್ಜೆಯನ್ನು ಘೋಷಣೆ ಮಾಡುವ ಅಥವಾ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
ಈಗಾಗಲೇ ಗಣಿ ಅಕ್ರಮದಿಂದ ರಾಜಕೀಯವಾಗಿ ಭಾರೀ ಹಿನ್ನಡೆ ಅನುಭವಿಸಿದ್ದ ಜನಾರ್ಥನ್ ರೆಡ್ಡಿ ಹಲವು ವರ್ಷಗಳ ಕಾಲ ಸೈಲೆಂಟ್ ಆಗಿದ್ದರು. ಆದರೆ ಇದೀಗ 2023 ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ರಾಜಕೀಯವಾಗಿ ಸಕ್ರಿಯರಾಗುವ ಸೂಚನೆ ನೀಡುತ್ತಿದ್ದಾರೆ.

ಈ ನಡುವೆ ಜನಾರ್ದನ ರೆಡ್ಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇಲ್ಲಿಂದಲೇ ನನ್ನ ಸ್ಪರ್ಧೆ, ಟಿಕೆಟ್ ನೀಡಿ ಎಂಬ ಸಂದೇಶವನ್ನು ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ ಎಂಬ ಚರ್ಚೆಗಳೂ ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಅಲ್ಲದೇ ಗಂಗಾವತಿಯಲ್ಲಿಯೂ ಹೊಸ ನಿವಾಸವನ್ನ ಮಾಡಿದ್ದು, ಇಲ್ಲಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ಅವರ ಆಪ್ತ ವಲಯದಲ್ಲಿ ಕೇಳಿಬಂದಿದೆ.
ಕಳೆದ ಕೆಲವು ದಿನಗಳಿಂದ ಬಿಜೆಪಿ ಟಿಕೆಟ್ ನೀಡದಿದ್ರೆ ಹೊಸ ಪಕ್ಷ ಸ್ಥಾಪನೆಗೆ ರೆಡ್ಡಿ ಮುಂದಾಗ್ತಾರೆ ಎನ್ನಲಾಗಿತ್ತು. ಅದರ ಜೊತೆಗೆ ವೈಎಸ್ಆರ್ ಪಕ್ಷದಿಂದ ಟಿಕೆಟ್ ಪಡೆದು ಗಂಗಾವತಿಯಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ಸುದ್ದಿಯೂ ಇದೆ. ಜನಾರ್ದನ ರೆಡ್ಡಿ ಒಂದು ವೇಳೆ ಪಕ್ಷ ಕಟ್ಟಿದರೆ ಅದರ ಪರಿಣಾಮ ಬಿಜೆಪಿಯ ಮೇಲೆ ಆಗಲಿದೆ. ಹಾಗಿದ್ದರೆ ಅವರ ಆಪ್ತ ಸ್ನೇಹಿತ ಶ್ರೀರಾಮುಲು ಏನು ನಡೆಯನ್ನು ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲವೂ ಕೆರಳಿದೆ.
ಈಗಾಗಲೇ ಹಲವು ಮಾಜಿ ಸಚಿವ ಹಾಗೂ ಸ್ನೇಹಿತರಾದ ಬಾರಿ ಜನಾರ್ದನ ರೆಡ್ಡಿ ಅವರನ್ನ ಸಚಿವ ಶ್ರೀರಾಮುಲು ಮನವೊಲಿಕೆ ಯತ್ನವನ್ನ ಮಾಡಿಕೊಂಡೆ ಬಂದಿದ್ದಾರೆ. ಆದರೆ ಇದು ಫಲಪ್ರದವಾದ ಹಾಗಿಲ್ಲ. ಹೀಗಾಗಿ ಭಾನುವಾರ ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿ ಕುತೂಹಲ ಕೆರಳಿಸಿದೆ.

ರೆಡ್ಡಿ ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ಹೊಸ ಪಕ್ಷ ಸ್ಥಾಪಿಸಲಿದ್ದಾರೆಯೇ? ಅಥವಾ ಬಿಜೆಪಿಯಲ್ಲಿ ಉಳಿಯಲಿದ್ದಾರೆಯೇ? ಎಂಬ ಪ್ರಶ್ನೆಗಳೂ ಮುನ್ನೆಲೆಗೆ ಬಂದಿವೆ. ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ರೆಡ್ಡಿಯನ್ನು ಮರಳಿ ಬಿಜೆಪಿಯಲ್ಲಿಉಳಿಸಿಕೊಳ್ಳಲು ಸಚಿವ ಬಿ ಶ್ರೀರಾಮುಲು ಅವರು ನಾನಾ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೂ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆತರುವ ಮಾತುಗಳನ್ನಾಡಿದ್ದಾರೆ. ಆದರೂ, ಜನಾರ್ದನ ರೆಡ್ಡಿ ಅವರು ರಾಜ್ಯದ ಪ್ರಮುಖ ಮಠ ಮಾನ್ಯಗಳಿಗೆ, ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಉದಯ?
ಇನ್ನೂ ಜನಾರ್ದನ ರೆಡ್ಡಿ ಅವರು ಬಿಜೆಪಿ ವಿರುದ್ಧ ಅಸಮಾಧಾನಗೊಳ್ಳುತ್ತಿದ್ದಂತೆ ಹೊಸ ಪಕ್ಷ ಸ್ಥಾಪನೆ ಮಾಡುವ ಕುರಿತ ಮಾತುಗಳು ಕೇಳಿಬಂದವು. ಇದಕ್ಕೆ ಪೂರಕವಾಗಿ ಜನಾರ್ದನ ರೆಡ್ಡಿ ಅವರ ಬೆಂಬಲಿಗರ ಹೆಸರಿನಲ್ಲಿ 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ' ಸ್ಥಾಪನೆಗೆ ಸಂಬಂಧಿಸಿದ ದಾಖಲೆ ಸಮೇತ ನೋಂದಣಿ ಪ್ರಕ್ರಿಯೆಗೆ ಸದ್ದಿಲ್ಲದೆ ಮುಂದುವರಿದಿರುವುದು ಕುತೂಹಲ ಕೆರಳಿಸುವಂತಾಗಿದೆ. ಹೊಸ ಪಕ್ಷ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕಾಗಿ ಈಗಾಗಲೇ ಬಳ್ಳಾರಿ ಜಿಲ್ಲೆಯಿಂದ 20 ಜನರ ಮಾಹಿತಿಯನ್ನು ದಾಖಲೆ ಸಮೇತ ಪಡೆಯಲಾಗಿದೆ ಎನ್ನಲಾಗಿದೆ.
ಒಟ್ನಾಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮನೆ ಮಾಡಿ ರಾಜಕೀಯದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಜನಾರ್ದನ ರೆಡ್ಡಿ ಹೊಸ ನಿರ್ಧಾರ, ಮುಂದಿನ ರಾಜಕೀಯ ಕುರಿತು ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಇದರ ಮಧ್ಯೆ ರೆಡ್ಡಿ ಡಿಸೆಂಬರ್ 25ಕ್ಕೆ ಸುದ್ದಿಗೋಷ್ಠಿ ಕರೆದಿದ್ದು, ಹೊಸ ಪಕ್ಷದ ಉದಯದ ಬಗ್ಗೆ ಮಹತ್ವದ ಘೋಷಣೆ ಮಾಡುತ್ತಾರಾ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications