ಶಿಕ್ಷಣ ಸುಧಾರಣೆಯಲ್ಲಿ ಕರ್ನಾಟಕ ಮಾದರಿ ರಾಜ್ಯ: ಡಾ. ಸಿ.ಎನ್. ಅಶ್ವತ್ ನಾರಾಯಣ
ಬೆಂಗಳೂರು: ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಸಾಧ್ಯವೇ ಇಲ್ಲ. ಈ ವಿಷಯದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿರಲು ಬಯಸುತ್ತದೆ ವಿನಃ ಎರಡನೇ ಸ್ಥಾನವನ್ನಲ್ಲ. ಶೈಕ್ಷಣಿಕ ಸುಧಾರಣೆಯಲ್ಲಿ ಕರ್ನಾಟಕ ಉಳಿದ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಅಭಿಪ್ರಾಯಪಟ್ಟರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ಶೈಕ್ಷಣಿಕ ಪಠ್ಯಕ್ರಮ ಚೌಕಟ್ಟಿನ (ಎನ್ಸಿಎಫ್) ಕಡ್ಡಾಯ ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಸುವರ್ಣಾವಕಾಶವಾಗಿದೆ. ಇದರ ಲಾಭವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೂಲೆಮೂಲೆಗೂ ಕೊಂಡೊಯ್ಯಬಹುದು. ಈ ವಿಚಾರದಲ್ಲಿ ರಾಜ್ಯವು ಮುಂದಾಳತ್ವ ವಹಿಸಿಕೊಳ್ಳಲು ಸಿದ್ಧವಿದೆ.

ದೇಶದಲ್ಲಿ ಇದುವರೆಗೂ ಅನುಸರಿಸಿಕೊಂಡು ಬರುತ್ತಿದ್ದ 30 ವರ್ಷಗಳಷ್ಟು ಹಿಂದಿನ ಶಿಕ್ಷಣ ನೀತಿಯಲ್ಲಿ ಹತ್ತಾರು ಮಿತಿಗಳಿದ್ದವು. ಆ ನೀತಿಗೆ ದೇಶೀಯ ವಿಧಾನಗಳ ಮೂಲಕ ಕಲಿಕೆಯನ್ನು ಸಾಧ್ಯವಾಗಿಸುವ ಮತ್ತು ಸಮಗ್ರ ವಿಕಾಸದ ಕಲ್ಪನೆಯೇ ಇರಲಿಲ್ಲ. ಆದರೆ, ಐದು ವರ್ಷಗಳ ನಿರಂತರ ಸಮಾಲೋಚನೆ ಮತ್ತು ವಿಚಾರ ವಿನಿಮಯಗಳ ಮೂಲಕ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಪರಿಪೂರ್ಣ ದೃಷ್ಟಿಕೋನವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ನಾವೀಗ ಜಾಗತಿಕ ಸ್ಪರ್ಧೆಯನ್ನು ಎದುರಿಸಲೇಬೇಕಾಗಿದೆ. ಇದನ್ನು ಬಿಟ್ಟು ಬೇರೆ ದಾರಿ ಇಲ್ಲ. ಇದನ್ನು ನಾವು ಆತ್ಮವಿಶ್ವಾಸದಿಂದ ಮಾಡಬೇಕೆಂದರೆ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದೆ ಎನ್ನುವುದು ಎನ್ಇಪಿಯಿಂದ ದೃಢಪಟ್ಟಿದೆ. ಹಾಗೆಯೇ, ಸಮಾಜದ ಸಮಸ್ಯೆಗಳಿಗೆ ಕೂಡ ಇದು ಸಮರ್ಥ ಪರಿಹಾರವಾಗಿದ್ದು, ಭಾರತವನ್ನು ಜ್ಞಾನದ ರಾಜಧಾನಿಯನ್ನಾಗಿ ಮಾಡುವ ದಾರ್ಶನಿಕತೆಯನ್ನು ಹೊಂದಿದೆ ಎಂದರು.
ಎನ್ಇಪಿ ಜಾರಿಗೆ ಉನ್ನತ ಶಿಕ್ಷಣ ವಲಯದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಪಠ್ಯಕ್ರಮ ಬದಲಾವಣೆ, ಉದ್ಯಮಗಳ ಸಹಭಾಗಿತ್ವ, ವಿದೇಶಿ ವಿ.ವಿ.ಗಳೊಂದಿಗೆ ಒಡಂಬಡಿಕೆ, ಹಿಂದುಳಿದ ಸಮುದಾಯಗಳ ಮಕ್ಕಳ ಹೆಚ್ಚಿನ ಪ್ರವೇಶಾತಿ, ಕೌಶಲ್ಯ ಪೂರೈಕೆ ಇತ್ಯಾದಿ ಎಲ್ಲವೂ ಎನ್ಇಪಿಯಿಂದ ಸಾಧ್ಯವಾಗುತ್ತಿದೆ ಎಂದು ಅಶ್ವತ್ ನಾರಾಯಣ ತಿಳಿಸಿದರು.

ವಿಜ್ಞಾನ ಸಂಶೋಧನೆಗೆ ಮುಕ್ತ ಉತ್ತೇಜನ:
ರಾಜ್ಯದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಉತ್ತೇಜಿಸಲು ಉದಾರ ಅನುದಾನವನ್ನು ಒದಗಿಸಲಾಗುತ್ತಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ 200 ಕೋಟಿ ರೂ. ಕೊಡಲಾಗಿತ್ತು. ಈ ಪೈಕಿ ಇನ್ನೂ 20 ಕೋಟಿ ರೂ. ಉಳಿದಿದ್ದು, ಇದನ್ನೂ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
2019-20 ಮತ್ತು 2020-21ನೇ ಸಾಲುಗಳ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಫಲಾನುಭವಿಗಳೊಂದಿಗೆ ಜಕ್ಕೂರಿನ ಜವಾಹರಲಾಲ್ ನೆಹರು ಉನ್ನತ ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರವು ಕೂಡ ಸಂಶೋಧನಾ ಪ್ರತಿಷ್ಠಾನವನ್ನು ಅಸ್ತಿತ್ವಕ್ಕೆ ತಂದಿದ್ದು, ಸಾವಿರಾರು ಕೋಟಿ ರೂ.ಗಳಷ್ಟು ಅನುದಾನವನ್ನು ಮೀಸಲಿಟ್ಟಿದೆ. ಇದಲ್ಲದೆ, ಕರ್ನಾಟಕದವರೇ ಆದ ಪ್ರೊ.ಅಜಯ್ ಕುಮಾರ್ ಸೂದ್ ಅವರು ಇತ್ತೀಚೆಗೆ ಪ್ರಧಾನಮಂತ್ರಿಗಳ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಈ ಅವಕಾಶಗಳನ್ನು ರಾಜ್ಯದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳ ಪ್ರತಿಭಾವಂತರು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.












Click it and Unblock the Notifications