ಯಡಿಯೂರಪ್ಪ ವಾಪಸಾತಿಗೆ ಎಲ್ಕೆ ಅಡ್ವಾಣಿ ಒಪ್ತಾರಾ?
ಬೆಂಗಳೂರು, ಡಿ. 5 : ಒಟ್ಟಿನಲ್ಲಿ ಚುನಾವಣೆಯನ್ನು ಗೆಲ್ಲಬೇಕು! ತತ್ತ್ವ, ಆದರ್ಶ, ಸಿದ್ಧಾಂತ, ಪ್ರತಿಷ್ಠೆ ಬಲಿಕೊಟ್ಟಾದರೂ ಸರಿ, ಶತ್ರು ಶತ್ರುಗಳು ಒಂದಾದರೂ ಸರಿ, ಸ್ಥಾನ ಮಾನಗಳನ್ನು ತ್ಯಾಗ ಮಾಡಿದರೂ ಸರಿ... ಒಟ್ಟಿನಲ್ಲಿ ಚುನಾವಣೆ ಗೆಲ್ಲಬೇಕು, ಕಾಂಗ್ರೆಸ್ ಪಕ್ಷವನ್ನು ಮಟ್ಟಹಾಕಬೇಕು ಎಂಬ ನಿರ್ಧಾರಕ್ಕೆ ಭಾರತೀಯ ಜನತಾ ಪಕ್ಷ ಬಂದಿದೆ.
ಈ ನಿಟ್ಟಿನಲ್ಲಿ, ಸ್ಥಾನ ಮಾನ ಕಿತ್ತುಕೊಂಡರೆಂದು ಮುನಿಸಿಕೊಂಡು ಪಕ್ಷದಿಂದ ಸಿಡಿದುಹೋಗಿ ಹೊಸ ಪಕ್ಷ ಕಟ್ಟಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ತರಲು ಆಹ್ವಾನ ಪತ್ರಿಕೆಯನ್ನು ರಾಜ್ಯ ಬಿಜೆಪಿ ನಾಯಕರು ಸಿದ್ಧಪಡಿಸಿಕೊಂಡು ನಿಂತಿದ್ದಾರೆ. ಇನ್ನು ಪಕ್ಷದ ಹಿರಿಯರು ಆ ಆಹ್ವಾನ ಪತ್ರಿಕೆ ಅರಿಶಿಣ ಕುಂಕುಮ ಹಚ್ಚಿ ಒಪ್ಪಿಗೆಯ ಮುದ್ರೆ ಒತ್ತುವುದೊಂದು ಬಾಕಿಯಿದೆ.
ಅಡ್ವಾಣಿ ಒಪ್ತಾರಾ? : ಈ ಆಹ್ವಾನವನ್ನು ಯಡಿಯೂರಪ್ಪ ಸ್ವೀಕರಿಸ್ತಾರಾ ಇಲ್ಲವಾ ಎಂಬುದು ನಂತರದ ಮಾತು. ಆದರೆ, ಅಕ್ರಮ ಗಣಿಗಾರಿಕೆ, ಭೂಕಬಳಿಕೆ ಮುಂತಾದ ಆರೋಪಗಳನ್ನು ಎದುರಿಸುತ್ತಿರುವ, ಒಂದು ಬಾರಿ ಜೈಲಿಗೂ ಹೋಗಿ ಬಂದಿರುವ, ಹಲವಾರು ಬಾರಿ ಹಿರಿಯ ನಾಯಕರಿಂದ ತಿರಸ್ಕಾರಕ್ಕೆ ಗುರಿಯಾಗಿರುವ ಯಡಿಯೂರಪ್ಪನವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರು ಒಪ್ತಾರಾ?

ಎಲ್ಲಕ್ಕಿಂತ ಹೆಚ್ಚಾಗಿ, ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿ ದೇಶದ ಉದ್ದಗಲಕ್ಕೂ ಭಾಷಣ ಬಿಗಿಯುತ್ತಿರುವ ನರೇಂದ್ರ ಮೋದಿ ಅವರು ಕೂಡ ಯಡಿಯೂರಪ್ಪ ಮರಳುವುದಕ್ಕೆ ಮುಕ್ತ ಆಹ್ವಾನ ನೀಡುತ್ತಾರೆಯೆ? ಎಂಬುದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ. ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೆ ಮಾತು ಕೊಟ್ಟಿದ್ದಾರೆ.
ಉಳಿದೆಲ್ಲ ನಾಯಕರು ಯಡಿಯೂರಪ್ಪ ಪರ ಮೃದು ಧೋರಣೆ ತಾಳಿದಂತಹ ಸಮಯದಲ್ಲಿ, ಅವರನ್ನು ಅಪ್ಪಿತಪ್ಪಿ ಕೂಡ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂಬ ಖಡಕ್ ನಿರ್ಧಾರವನ್ನು ತಳೆದಿದ್ದು ಅಡ್ವಾಣಿಯವರು. ಆದರೆ, ಈಗಿನ ದಿನಗಳಲ್ಲಿ ಅಡ್ವಾಣಿಯವರ ಮಾತಿಗೆ ಅಂತಹ ಗೌರವ ಸಲ್ಲುತ್ತಿಲ್ಲ. ಅವರು ಒಪ್ಪಿದರೂ ಅಷ್ಟೇ ಬಿಟ್ಟರೂ ಅಷ್ಟೇ ಎಂಬಂತಹ ವಾತಾವರಣ ಪಕ್ಷದಲ್ಲಿದೆ.
ಯಡಿಯೂರಪ್ಪನವರ ಕಟ್ಟಾ ವೈರಿಗಳೆಂದೇ ಬಿಂಬಿತರಾಗಿರುವ ಅನಂತ್ ಕುಮಾರ್, ಕೆ.ಎಸ್. ಈಶ್ವರಪ್ಪ ಕೃತಕ 'ನಗುಮೊಗ'ದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಬಿಜೆಪಿ ಸೇರುವ ಕುರಿತು ಡಿ.9ರಂದು ಸೋಮವಾರ, ತನ್ನ ಮೊದಲ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸಭೆಯಲ್ಲಿ ಯಡಿಯೂರಪ್ಪ ಮತ್ತು ಸಹೋದ್ಯೋಗಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. [ಯಡಿಯೂರಪ್ಪ ದೂರವಾಗಲು 7 ಕಾರಣಗಳು]
ಶೋಭಾ ಅಡ್ಡಗೋಡೆ ಮೇಲೆ ದೀಪ : ಯಡಿಯೂರಪ್ಪನವರ ಬೆನ್ನೆಲುಬಾಗಿ ನಿಂತಿರುವ ಶೋಭಾ ಕರಂದ್ಲಾಜೆ ಅವರು, ಈ ಬಗ್ಗೆ ತಮಗೇನೂ ಗೊತ್ತಿಲ್ಲ, ಯಾವ ಆಹ್ವಾನವೂ ಬಂದಿಲ್ಲ, ವಾಪಸ್ ಆಗುವ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ, ಆಹ್ವಾನ ಬಂದರೆ ನೋಡೋಣ ಎಂದು ಕೆಜೆಪಿ ಪರವಾಗಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ. ಶೋಭಾ ಮಾತು ಬೇರೆಯಲ್ಲ ಯಡಿಯೂರಪ್ಪ ಮಾತು ಬೇರೆಯಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಇದೆಲ್ಲದರ ನಡುವೆ, ಕರ್ನಾಟಕ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಶಂಕರ ಪಾಟೀಲ್ ಅವರು, ಕೆಜೆಪಿ ಹುಟ್ಟುಹಬ್ಬದ ದಿನ ಡಿಸೆಂಬರ್ 9 ಪಕ್ಷಕ್ಕೆ ಮಾತ್ರವಲ್ಲ ಭಾರತೀಯ ಜನತಾ ಪಕ್ಷಕ್ಕೂ ಶುಭದಿನ ಎಂದು ಹೇಳಿ ಬಿಜೆಪಿ ಮತ್ತು ಕೆಜೆಪಿ ಒಂದಾಗುವಿಕೆಯ ಬಗ್ಗೆ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಆದರೆ, ಈ ಬಗ್ಗೆ ಯಡಿಯೂರಪ್ಪ ಮಾತ್ರ ತುಟಿ ಪಿಟಕ್ ಅಂದಿಲ್ಲ.
ಅವರಾಗೇ ಬಿಟ್ಟು ಹೋದವರು ಅವರಾಗೇ ಬರುತ್ತೇನೆಂಬ ಬೇಡಿಕೆ ಮುಂದಿಟ್ಟರೆ ಪರಿಗಣಿಸುವುದಾಗಿ ಹೇಳುತ್ತಿದ್ದ ಹಲವಾರು ನಾಯಕರು ಹೂವಿನ ಹಾರ, ಗುಚ್ಛ ಹಿಡಿದುಕೊಂಡು ಯಡಿಯೂರಪ್ಪನವರನ್ನು ಸ್ವಾಗತಿಸಲು ನಿಂತಿರುವುದು ಯಡಿಯೂರಪ್ಪನವರ ಕೈ ಮೇಲಾಗಿದ್ದರ ಎಲ್ಲ ಸೂಚನೆಗಳನ್ನು ನೀಡುತ್ತಿದೆ. ಯಡಿಯೂರಪ್ಪ ಇಲ್ಲದಿದ್ದರೆ ಲೋಕಸಭೆ ಚುನಾವಣೆ ಎದುರಿಸುವುದು ಕಷ್ಟದ ಕೆಲಸ ಎಂಬುದೂ ಮನವರಿಕೆಯಾಗಿದೆ.
ಮರ್ಯಾದೆ ಸಿಗುತ್ತದಾ? : ಯಡಿಯೂರಪ್ಪ ಮರಳುವಿಕೆಗೆ ಬಿಜೆಪಿ ಹೈಕಮಾಂಡ್ ಇಟ್ಟಿರುವ ಬೇಡಿಕೆಗಳಾದರೂ ಏನು? ಬಿಜೆಪಿಗೆ ಮರಳಲು ಯಡಿಯೂರಪ್ಪ ಹೈಕಮಾಂಡ್ ಮುಂದಿಟ್ಟಿರುವ ಬೇಡಿಕೆಗಳು ಏನು? ಒಂದು ವೇಳೆ ಅವರು ಮರಳಿದರೂ ಶೋಭಾ ಕರಂದ್ಲಾಜೆ ಅಥವಾ ಧನಂಜಯ್ ಕುಮಾರ್ ಅವರಿಗೆ ಮೊದಲಿನ ಮರ್ಯಾದೆ ಸಿಗುತ್ತದಾ? ಅನಂತ್ ಕುಮಾರ್, ಸದಾನಂದ ಗೌಡ, ಶೆಟ್ಟರ್ ಸ್ಥಾನಗಳಿಗೇನಾಗಲಿದೆ?
ಯಡಿಯೂರಪ್ಪ ಅವರ ಮರಳುವಿಕೆ ಕಾಂಗ್ರೆಸ್, ಜೆಡಿಎಸ್ ಪಾಳಯದಲ್ಲಿ ನಡುಕ ತಂದಿರಬಹುದಾದರೂ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಮತ್ತೊಂದು ಅಸ್ತ್ರ ಅವರಿಗೆ ಸಿಕ್ಕ ಹಾಗೂ ಆಗುತ್ತದೆ. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ಸಂತೋಷ ಲಾಡ್ ಅವರನ್ನು ಕೆಳಗಿಳಿಸಿದ್ದು ಇದೇ ಬಿಜೆಪಿ ನಾಯಕರು. ಈಗ ಅವರೇ ಯಡಿಯೂರಪ್ಪನವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.












Click it and Unblock the Notifications