ಮಳೆಗಾಲದಲ್ಲೂ ಬೇಸಿಗೆಯಂತೆ ಸೆಕೆ, ಹವಾಮಾನ ತಜ್ಞರು ಹೇಳುವುದೇನು?
ಬೆಂಗಳೂರು, ಆಗಸ್ಟ್ 20: ಬೆಂಗಳೂರು ನಗರ ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಮಳೆಯಾಗುತ್ತಿದೆ. ಆದರೆ ಮಳೆ ಅಬ್ಬರಿಸಿದ ಕೆಲವೇ ಕ್ಷಣಗಳಲ್ಲಿ ಬೇಸಿಗೆಯನ್ನು ನೆನಪಿಸುವಂತೆ ಸೆಕೆಯ ಅನುಭವವಾಗುತ್ತಿದೆ. ಜನರು ಫ್ಯಾನ್ ಆನ್ ಮಾಡುವುದು ಅನಿವಾರ್ಯವಾಗಿದೆ. ಮಳೆಗಾಲದಲ್ಲಿ ಈ ಮಾದರಿ ಸೆಕೆಯ ವಾತಾವರಣ ಏಕೆ? ಎಂಬುದು ಜನರ ಪ್ರಶ್ನೆಯಾಗಿದೆ.
ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪೂರ್ವ ಮುಂಗಾರು ಪರಿಸ್ಥಿತಿ ನೆಪಿಸುವಂತೆ ಸೆಕೆಯ ವಾತಾವರಣ ಇರುವುದಕ್ಕೆ ಕಾರಣಗಳನ್ನು ವಿವರಿಸಿದ್ದಾರೆ. ರಾಜ್ಯದಲ್ಲಿ ಜುಲೈ ತಿಂಗಳಿನಲ್ಲಿ ಭಾರೀ ಮಳೆಯಾಗಿತ್ತು. ಆದರೆ ಆಗಸ್ಟ್‌ನಲ್ಲಿ ಮಳೆ ಕಡಿಮೆ ಆಗಿದೆ. ಬೆಳಗ್ಗೆ ಬಿಸಿಲು ಇದ್ದರೆ ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಮಳೆಯಾಗುತ್ತಿದೆ. ಇದರ ಜೊತೆಗೆ ಸೆಕೆಯೂ ಇದೆ.

ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಬರುವ ಮಾರುತಗಳಿಂದ ಕಳೆದ 4-5 ದಿನಗಳಿಂದ ಮಳೆಯಾಗುತ್ತಿಲ್ಲ. ಉಷ್ಣಾಂಶ ಮತ್ತು ತೇವಾಂಶದಿಂದ ಸೃಷ್ಟಿಯಾಗುವ ಮೋಡಗಳಿಂದ ಮಳೆಯಾಗುತ್ತಿದೆ. ಮುಂದಿನ ಎರಡು ಮೂರು ದಿನ ಇದೇ ಮಾದರಿ ಹವಾಮಾನ ಇರಲಿದೆ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಆಗಸ್ಟ್‌ನಲ್ಲಿ ಮಲೆನಾಡು ಭಾಗದಲ್ಲಿ ಕಡಿಮೆ ಮಳೆಯಾಗಿದೆ. ಆದರೆ ಬೆಂಗಳೂರು, ತುಮಕೂರು, ಕರಾವಳಿ ಜಿಲ್ಲೆಗಳಲ್ಲಿ ಆಗಾಗ ಭಾರೀ ಮಳೆಯಾಗುತ್ತಿದ್ದು, ಮತ್ತೆ ವಾತಾವರಣ ಸಹಜ ಸ್ಥಿತಿಗೆ ಬರುತ್ತಿವೆ. ಈಗಾಗಲೇ ಜುಲೈನಲ್ಲಿ ಸುರಿದ ಮಳೆಗೆ ರಾಜ್ಯದ ಜಲಾಶಯಗಳು ಭರ್ತಿಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಸಹ ಅನುಕೂಲವಾಗಿದೆ.
ಮತ್ತೆ ಸುರಿಯಲಿದೆ ಮಳೆ: ಹವಾಮಾನ ಇಲಾಖೆಯ ಸದ್ಯದ ಮಾಹಿತಿಯಂತೆ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್‌ನಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆ ಸುರಿಯಲಿದೆ. ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಒಂದು ವಾರ ಮಳೆ ಮುಂದುವರೆಯಲಿದ್ದು, ಮಂಗಳವಾರ ಮತ್ತು ಬುಧವಾರ ಮಧ್ಯಾಹ್ನ ಮತ್ತು ಸಂಜೆಯ ವೇಳೆ ಮಳೆಯಾಗಲಿದೆ. ಸೋಮವಾರ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಕಡೆ ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಆರೆಂಜ್ ಮತ್ತು ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ ಬೆಂಗಳೂರು ನಗರದ ವಿವಿಧ ಭಾಗದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಮಳೆಯಾಗಿತ್ತು. ದಿಢೀರ್ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದ್ದರು. ಸಂಜೆ ಮತ್ತು ರಾತ್ರಿ ಕೆಲವು ಪ್ರದೇಶಗಳಲ್ಲಿ ಚದುರಿದಂತೆ ಮಳೆಯಾಗಿದೆ. ಮಂಗಳವಾರವೂ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಮತ್ತು ಸಂಜೆ ಮಳೆಯ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಆಗಸ್ಟ್ 21ರ ತನಕ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಮಳೆಯ ಪ್ರಮಾಣ ಕಡಿಮೆ ಇರಲಿದೆ.
ಸೋಮವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆ ಭಾರಿ ಮಳೆಯಾಗಿತ್ತು. ಇದರಿಂದಾಗಿ ರಸ್ತೆಗಳು ನದಿಯಂತಾಗಿದ್ದವು. ಬಾಳೆಹೊನ್ನೂರು-ಕಳಸ- ಕೊಟ್ಟಿಗೆಹಾರ ಸಂಪರ್ಕ ಕಡಿತಗೊಂಡಿತ್ತು. ಎನ್. ಆರ್. ಪುರ ತಾಲೂಕಿನ ಬನ್ನೂರು ಬಳಿ ರಸ್ತೆ ಮೇಲೆ ಮಳೆ ನೀರು ರಭಸವಾಗಿ ಹರಿಯುತ್ತಿದ್ದ ಪರಿಣಾಮ ರಸ್ತೆ ಸಂಪರ್ಕ ಕೆಲವು ಕಾಲ ಕಡಿತವಾಗಿತ್ತು. ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.












Click it and Unblock the Notifications