ವಿಧಾನಸೌಧದಲ್ಲಿ ಕುಂಕುಮ ಬಳಕೆ ಏಕೆ ಬೇಡ: ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 18: ನಾಡಹಬ್ಬ ದಸರಾದ ಸಂಭ್ರಮದ ವೇಳೆ ನಡೆಯುವ ಆಯುಧ ಪೂಜೆಯ ಸಮಯದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಒಡೆಯುವ ಕುಂಬಳಕಾಯಿ ಮತ್ತು ಬಿಡಿಸುವ ರಂಗೋಲಿಗಳಲ್ಲಿ ಯಾವುದೇ ರಾಸಾಯನಿಕ ಮಿಶ್ರಿತ ಅರಿಶಿನ, ಕುಂಕುಮ, ಬಣ್ಣ, ಸುಣ್ಣವನ್ನು ಬಳಸದಂತೆ ಸರ್ಕಾರ ಆದೇಶ ನೀಡಿದೆ.
ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು,… pic.twitter.com/nsv95rMME3
— CM of Karnataka (@CMofKarnataka) October 18, 2023
ಆದರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ದ್ವೇಷಿ ಸುತ್ತೋಲೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವಾರು ಮಂದಿ ಅಸಮಾಧಾನ ಹೊರಹಾಕಿದ್ದರು. ಆದರೆ ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ.
ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಾದರಿಯಲ್ಲಿ ತಮಿಳುನಾಡಿನ ಡಿಎಂಕೆ ಸರ್ಕಾರವು ಕೂಡ ಹಿಂದೂಗಳ ಸಂಪ್ರದಾಯವನ್ನೇ ಅದರಲ್ಲೂ ಆಯುಧಪೂಜೆಯನ್ನೇ ಉದ್ದೇಶಿಸಿ ಹೊರಡಿಸಲಾಗಿದ್ದ ಸುತ್ತೋಲೆ ಬಗ್ಗೆ ಕೆಲವರು ಕೊಂಕು ನುಡಿದಿದ್ದರು. ಆದರೆ ವಾಸ್ತವವಾಗಿ ಕರ್ನಾಟಕದ ವಿಧಾನಸೌಧ ಹಳೆಯ ಕಟ್ಟಡವಾದ್ದರಿಂದ ಹಬ್ಬದ ವೇಳೆ ಬಣ್ಣ, ಕುಂಕುಮ ಅರಿಶಿನಗಳಿಂದ ನೆಲ ಇಲ್ಲವೇ ಇತರೆಡೆ ಅಳಿಸಲಾಗದ ಕಲೆಯಾಗುತ್ತದೆ ಎಂಬ ಕಾಳಜಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಆದರೆ ಈ ಬಗ್ಗೆ ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕೂಡ ಟ್ವೀಟ್ ಮಾಡಿದ್ದು, 'ಎರಡು ರಾಜ್ಯ, ಎರಡು ರಾಜ್ಯ ಸರ್ಕಾರಗಳು. ಆದರೆ ಒಂದೇ ಗುರಿ ಅದು ಆಯುಧ ಪೂಜೆ. ಇಂಡಿ ಮೈತ್ರಿ ಪಕ್ಷಗಳ ನಡುವೆ ನೂರು ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅವರು ಈ ನೆಲದ ಸ್ಥಳೀಯ ಸಂಸ್ಕೃತಿಯ ಮೇಲಿನ ದ್ವೇಷ ಮತ್ತು ತಿರಸ್ಕಾರದ ವಿಚಾರದಲ್ಲಿ ಮಾತ್ರ ಖಂಡಿತವಾಗಿ ಒಂದಾಗುತ್ತಾರೆ.
ಆಯುಧ ಪೂಜೆಯ ಸಮಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹೂವುಗಳು, ಕುಂಕುಮ, ಅರಿಶಿನ ಮತ್ತು ಇತರ ಪೂಜೆ ಅಗತ್ಯ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂ ಇಂದು ಸರ್ಕಾರಿ ಸುತ್ತೋಲೆಯನ್ನು ಹೊರಡಿಸಿದೆ. ವರ್ಷಗಳಿಂದ, ದಕ್ಷಿಣ ಭಾರತದ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಉದ್ಯೋಗಿಗಳು ಆಯುಧ ಪೂಜೆಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ಮಹತ್ವದ ಸಾಂಸ್ಕೃತಿಕ ಆಚರಣೆಗೆ ಇದೀಗ ಇಂಡಿ ಒಕ್ಕೂಟ ತನ್ನ ಟಾರ್ಗೆಟ್‌ಅನ್ನಾಗಿ ಮಾಡಿಕೊಂಡಿದೆ' ಎಂದು ಅವರು ಟ್ವೀಟ್ ಮಾಡಿದ್ದರು.












Click it and Unblock the Notifications