ಸೋತ ಲಕ್ಷ್ಮಣ ಸವದಿಗೆ ದೊಡ್ಡ ಹುದ್ದೆ ಕೊಟ್ಟಿರುವ ಹಿಂದಿದೆ ಭಾರಿ ಲೆಕ್ಕಾಚಾರ
Recommended Video
ಬೆಂಗಳೂರು, ಆಗಸ್ಟ್ 27: ಯಡಿಯೂರಪ್ಪ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಎರಡರಲ್ಲೂ ಭಾರಿ ಅಚ್ಚರಿಗೆ ಕಾರಣವಾಗಿದ್ದು ಲಕ್ಷ್ಮಣ ಸವದಿಗೆ ನೀಡಿದ ಭಾರಿ ಪ್ರಮುಖ ಸ್ಥಾನ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಟು ಮೂಲೆಗುಂಪಾಗಿದ್ದ ಲಕ್ಷ್ಮಣ ಸವಧಿಗೆ ಅಚಾನಕ್ಕಾಗಿ ಬಿಜೆಪಿಯ ಹಿರಿಯ ನಾಯಕರೇ ಹುಬ್ಬೇರುವಂತೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಯಿತು. ಅಷ್ಟಕ್ಕೇ ಮುಗಿಸದೇ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನವನ್ನೂ ಕೊಟ್ಟು ಸಾರಿಗೆ ಖಾತೆಯ ಜವಾಬ್ದಾರಿ ವಹಿಸಲಾಗಿದೆ.
ಸಂಪುಟ ವಿಸ್ತರಣೆಯ ದಿನದ ವರೆಗೆ ಯಾರ ಗಮನದಲ್ಲೂ ಇಲ್ಲದೆ ಮೂಲೆಗೆ ಸರಿದಿದ್ದ ಲಕ್ಷ್ಮಣ ಸವಧಿಗೆ ಇದ್ದಕ್ಕಿಂದಂತೆ ದೊಡ್ಡ ಪಟ್ಟ ನೀಡಿದ್ದಿದ್ದಾದರೂ ಏಕೆ ಎಂಬ ಪ್ರಶ್ನೆ ಸ್ವತಃ ಬಿಜೆಪಿಯವರಲ್ಲೂ ಇದೆ. ಆದರೆ ಇದರ ಹಿಂದೆ ದೊಡ್ಡ ಮಟ್ಟದ ರಾಜಕೀಯ ಲೆಕ್ಕಾಚಾರ ಇದೆ.

ಜಾರಕಿಹೊಳಿ ಹಿಡಿತ ತಪ್ಪಿಸಲು ತಂತ್ರ
ಬೆಳಗಾವಿ ರಾಜಕಾರಣದ ಮೇಲಿನ ಜಾರಕಿಹೊಳಿ ಕುಟುಂಬದ ಹಿಡಿತ ತಪ್ಪಿಸಲೆಂದು ಬಿಜೆಪಿ ಲಕ್ಷ್ಮಣ ಸವದಿಯನ್ನು ದಾಳವಾಗಿ ಪ್ರಯೋಗಿಸಿದೆ. ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಇನ್ನಿಬ್ಬರಿಗೆ ಸಚಿವ ಸ್ಥಾನ ಇಲ್ಲ, ಹೀಗಿರುವಾಗ ಬೆಳಗಾವಿಯವರೇ ಆದ ಲಕ್ಷ್ಮಣ ಸವದಿಗೆ ದೊಡ್ಡ ಮಟ್ಟದ ಅಧಿಕಾರ ನೀಡುವ ಮೂಲಕ ಅವರನ್ನು ಜಾರಕಿಹೊಳಿ ಕುಟುಂಬದ ಎದುರಾಳಿಯಾಗಿ ಬಿಂಬಿಸಲಾಗುತ್ತಿದೆ.

ಪ್ರಭಾವ ಕಳೆದುಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ ಮತ್ತೊಬ್ಬ ಪ್ರಭಾವಿ ರಾಜಕಾರಣಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜಾರಕಿಹೊಳಿ ಕುಟುಂಬವನ್ನು ಎದುರು ಹಾಕಿಕೊಂಡು ಕಾಂಗ್ರೆಸ್‌ನಲ್ಲಿ ಮೂಲೆಗೆ ಸರಿದಿದ್ದಾರೆ. ಇಂತಹಾ ಸಮಯದಲ್ಲಿ ಲಕ್ಷ್ಮಣ ಸವಧಿಯನ್ನು ದೊಡ್ಡದಾಗಿ ಸ್ಥಾಪನೆ ಮಾಡಿದರೆ ಬೆಳಗಾವಿ ತಮ್ಮ ಹಿಡಿತಕ್ಕೆ ಬರುತ್ತದೆಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್‌ಗೆ ಇದೆ.

ಜಾತಿಯ ಕಾರಣಕ್ಕೆ ಕತ್ತಿಗೆ ಅವಕಾಶವಿಲ್ಲ?
ಬೆಳಗಾವಿ ಜಿಲ್ಲೆಯವರೇ ಆದ ಉಮೇಶ್ ಕತ್ತಿ ಅವರನ್ನು ನಿರ್ಲಕ್ಷಿಸಲು ಅವರ ಜಾತಿ ಕಾರಣವಾಗಿದೆ. ಜಾರಕಿಹೊಳಿ ಕುಟುಂಬದ ಎದುರು ಅವರ ಜಾತಿಯರನ್ನೇ ರಾಜಕೀಯ ಪ್ರತಿರೋಧಿಯಾಗಿ ನಿಲ್ಲಿಸಬೇಕೆಂಬ ಉದ್ದೇಶದಿಂದ ಲಕ್ಷ್ಮಣ ಸವದಿಗೆ ಈ ದೊಡ್ಡ ಅವಕಾಶವನ್ನು ಬಿಜೆಪಿ ನೀಡಿದೆ.

ಮಹಾರಾಷ್ಟ್ರ ಚುನಾವಣೆಯೂ ಸಮೀಪದಲ್ಲಿದೆ
ಬೆಳಗಾವಿ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಲಕ್ಷ್ಮಣ ಸವದಿಗೆ ಉತ್ತಮ ಪ್ರಭಾವ ಇದ್ದು, ಕೆಲವೇ ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಇರುವ ಕಾರಣ ಲಕ್ಷ್ಮಣ ಸವದಿಗೆ ದೊಡ್ಡ ಹುದ್ದೆ ನೀಡಿದಲ್ಲಿ ಮಹಾರಾಷ್ಟ್ರ ಚುನಾವಣೆ ಸಮಯದಲ್ಲಿ ಸಹಾಯವಾಗುತ್ತದೆ ಎಂಬ ಲೆಕ್ಕಾಚಾರವೂ ಬಿಜೆಪಿಗೆ ಇದೆ.












Click it and Unblock the Notifications