ಅಮಿತ್ ಶಾ ಮಗ ಭಜರಂಗದಳದಲ್ಲಿ ಯಾಕೆ ಇಲ್ಲ? ಮುತಾಲಿಕ್, ಪುತ್ತಿಲ್‌ಗೆ ಯಾಕೆ ಟಿಕೆಟ್ ನೀಡಿಲ್ಲ: ಹನುಮ ಭಕ್ತನ ಪೋಸ್ಟ್ ವೈರಲ್
ಬೆಂಗಳೂರು, ಮೇ 03: ನಿನ್ನೆ ಬಿಡುಗಡೆಯಾದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಹಾಗೂ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡುವ ಭರವಸೆಯನ್ನು ನೀಡಲಾಗಿದೆ. ಇದು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇಷ್ಟು ವರ್ಷ ಬಜರಂಗದಳದಿಂದ ದೂರವಿದ್ದ ಬಿಜೆಪಿ, ಈಗ ದಿಢೀರ್‌ನೇ ಭಜರಂಗಿ ಜಪ ಮಾಡುತ್ತಿರುವುದು ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.
ಹನುಮ ಭಕ್ತ 'ಭಜರಂಗಿ' ಎಂದು ಹೇಳಿಕೊಂಡಿರುವ ಫೇಸ್‌ಬುಕ್ ಬಳಕೆದಾರರೊಬ್ಬರು ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಫೋಸ್ಟ್ ವೈರಲ್ ಆಗುತ್ತಿದೆ.

ಭಜರಂಗಿಯ ಪೋಸ್ಟ್‌ನಲ್ಲಿ ಏನಿದೆ?
ಭಜರಂಗದಳದ ಸಂಘಟನೆಯ ಬಗ್ಗೆ ಅತೀವ ಅಭಿಮಾನ ತೋರಿಸುವ ಬಿಜೆಪಿಗೆ ಒಂದು ಪ್ರಶ್ನೆ? ಭಜರಂಗದಳದ ಶರಣ್ ಪಂಪ್ವೇಲ್‌ಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಯಾಕೆ ನೀಡಿಲ್ಲ? ಎಂದು ಕೇಳಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಯಾಕೆ ಟಿಕೆಟ್ ನೀಡಿಲ್ಲ? ಹಿಂದುತ್ವಕ್ಕೆ ದುಡಿದ ಸತ್ಯಜಿತ್ ಸುರತ್ಕಲ್ ಯಾಕೆ ಬಿಜೆಪಿ ಟಿಕೆಟ್ ನೀಡಿಲ್ಲ? ಎಂದು ಅವರು ಕೇಳಿದ್ದಾರೆ.
ಪ್ರಮೋದ್ ಮುತಾಲಿಕ್‌ಗೆ ಯಾಕೆ ನೀಡಿಲ್ಲ? ಅರುಣ್ ಕುಮಾರ್ ಪುತ್ತೀಲಗೆ ಯಾಕೆ ಟಿಕೆಟ್ ನೀಡಿಲ್ಲ? ಎಂದು ಅವರು ಪ್ರಶ್ನೆ ಎತ್ತಿದ್ದಾರೆ.

ಬಿಜೆಪಿ ನಾಯಕರ ಹೆಂಡತಿ ಮಕ್ಕಳು, ಸೊಸೆಯಂದಿರಿಗೆ ಟಿಕೆಟ್ ನೀಡಿದ್ದೀರಿ ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಕ್ಕೆ ಯಾಕೆ ನೀಡಿಲ್ಲ? ಎಂದು ಅವರು ಕೇಳಿದ್ದಾರೆ.
ಕೊನೆಯ ಪ್ರಶ್ನೆ ಅಮಿತ್ ಶಾನ ಮಗ ಭಜರಂಗದಳದಲ್ಲಿ ಯಾಕೆ ಇಲ್ಲ? ಎಂದೂ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿಗರಿಗೆ ಈಗ ಪ್ರೀತಿ ಉಕ್ಕಿ ಉಕ್ಕಿ ಹರಿಯುತ್ತಿದೆ
ಇನ್ನೊಬ್ಬ ಫೇಸ್‌ಬುಕ್ ಬಳಕೆದಾರರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಆಡಳಿತ ವಿರೋಧಿ ಅಲೆಯ ರಬಸಕ್ಕೆ ಕೊಚ್ಚಿ ಹೋಗಲಿರುವ ಬಿಜೆಪಿಗೆ 5 ವರ್ಷ ಹಳೆಯ ಸುದ್ದಿಯೊಂದು ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯ ಆಸರೆಯಂತಾಗಿದೆ' ಎಂದು ಹೇಳಿದ್ದಾರೆ.
'ಅಧಿಕಾರ ಸಿಕ್ಕಾಗ ಭಜರಂಗದಳ ಕಾರ್ಯಕರ್ತರ ಮೇಲಿನ ಕೇಸನ್ನು ತೆರವುಗೊಳಿಸುವಲ್ಲಿ ಕಿಂಚಿತ್ತೂ ಪ್ರಯತ್ನ ಬರದ ಬಿಜೆಪಿಗರಿಗೆ ಈಗ ಪ್ರೀತಿ ಉಕ್ಕಿ ಉಕ್ಕಿ ಹರಿಯುತ್ತಿದೆಯೆಂದರೆ ಇದು ಸೋಲಿನ ಭೀತಿಯೇ ಹೊರತು ಹಿಂದುಗಳ ಮೇಲಿನ ಕಾಳಜಿ ಅಲ್ಲವೇ ಅಲ್ಲ' ಎಂದು ಆರೋಪಿಸಿದ್ದಾರೆ.

'ಬಿಜೆಪಿಯ ಈ ನೀಚ ರಾಜಕೀಯದ ವಿರುದ್ದ ಜನರು ಜಾಗೃತರಾಗಿರಬೇಕು. ಮುಂಬರುವ ದಿನಗಳಲ್ಲಿ ಬಿಜೆಪಿಗರ ಇನ್ನಷ್ಟು ಅಪಪ್ರಚಾರವನ್ನು ಎದುರಿಸಲು ಸರ್ವ ಸನ್ನದ್ದಾರಗಿರೋಣ' ಎಂದೂ ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ?
ಕಾನೂನು ಮತ್ತು ಸಂವಿಧಾನವು ಪವಿತ್ರವಾದುದು ಎಂದು ನಾವು ನಂಬಿರುವ ಕಾರಣ, ಭಜರಂಗದಳ ಮತ್ತು ಪಿಎಫ್‌ಐನಂತಹ ಸಂಘಟನೆಗಳ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಬಿಡುಗಡೆ ಮಾಡಿದ 62 ಪುಟಗಳ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಪ್ರಧಾನಿ ಮೋದಿ ಹೇಳಿದ್ದೇನು?
ಕರ್ನಾಟಕ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸಲು ಪ್ರಸ್ತಾಪಿಸಿರುವ ಕಾಂಗ್ರೆಸ್ ಹನುಮಂತನನ್ನು ಪೂಜಿಸುವವರನ್ನು ಬಂಧಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾಗ್ದಾಳಿ ನಡೆಸಿದರು.

'ಈ ಹಿಂದೆ ಕಾಂಗ್ರೆಸ್ ಭಗವಾನ್ ರಾಮನಿಗೆ ಬೀಗ ಹಾಕಿತ್ತು ಮತ್ತು ಈಗ ಅವರು 'ಜೈ ಭಜರಂಗ್ ಬಲಿ' ಎಂದು ಕೂಗುವವರನ್ನು ಒಳಗಿಡಲು ಬಯಸುತ್ತಿದ್ದಾರೆ ಎಂದು ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಹೇಳಿದರು.
'ಬಾಟ್ಲಾ ಹೌಸ್ ಎನ್‌ಕೌಂಟರ್ ಸಂದರ್ಭದಲ್ಲಿ ಕಾಂಗ್ರೆಸ್ ಉನ್ನತ ನಾಯಕರೊಬ್ಬರು ಹೇಗೆ ಅಳುತ್ತಾರೆಂದು ನಿಮಗೆ ನೆನಪಿಲ್ಲವೇ? ಎಂದೂ ಅವರು ಕೇಳಿದರು.
ವಿಜಯನಗರ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, 'ನಾನು ಹನುಮಂತನ ಭೂಮಿಗೆ ಬಂದಿದ್ದೇನೆ. ಅವರ ಭೂಮಿಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಆದರೆ ನಾನು ಅವರ ಭೂಮಿಗೆ ಗೌರವ ಸಲ್ಲಿಸಲು ಬಂದಿರುವ ನನ್ನನ್ನು ನೋಡಿ ಕಾಂಗ್ರೆಸ್ ಹನುಮಂತ ದೇವರಿಗೆ ಬೀಗ ಹಾಕಲು ನಿರ್ಧರಿಸಿದೆ' ಎಂದು ಪ್ರಧಾನಿ ಮೋದಿ ಆರೋಪಿಸಿದರು.












Click it and Unblock the Notifications