ಚುನಾವಣಾ ಆಯೋಗ ‘ನೋಟಾ’ದ ವ್ಯವಸ್ಥೆ ಮಾಡಿದ್ದೇಕೆ? ನೋಟಾ ಎಂದರೇನು?
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಮತ ಚಲಾಯಿಸಲು ಯಾರೂ ಅರ್ಹರಲ್ಲ ಎಂದೆನಿಸಿದರೆ ಮತದಾರರು ಇವರು ಯಾರು ಇಷ್ಟವಿಲ್ಲ ಎಂಬುದನ್ನು ವ್ಯಕ್ತಪಡಿಸಲು 'ನೋಟಾ'ದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಇತ್ತೀಚೆಗಿನ ವರ್ಷಗಳಲ್ಲಿ ಒಂದಷ್ಟು ಮತಗಳು ಬೀಳುತ್ತಿರುವುದು ಗಮನಾರ್ಹವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರ, ಅಧಿಕಾರ ದುರುಪಯೋಗ ಹೀಗೆ ಹಲವು ಕಾರಣಗಳಿಗೆ ರೋಸಿ ಹೋಗಿರುವ ಮತದಾರರು ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಅಸಮಾಧಾನಗೊಂಡು 'ನೋಟ' ದತ್ತ ಬೆರಳನ್ನು ಒತ್ತುತ್ತಿದ್ದಾರೆ.
ಐದು ವರ್ಷಕ್ಕೊಮ್ಮೆ ನಡೆಯುವ ಪ್ರತಿ ಚುನಾವಣೆಯೂ ಪ್ರಜೆಗಳಿಗೆ ನೀಡುವ ಹಕ್ಕು ಆಗಿದ್ದು, ಇದರಿಂದ ತಮಗಿಷ್ಟವಿಲ್ಲದ ಪ್ರತಿನಿಧಿಯನ್ನು ಅಥವಾ ಅಧಿಕಾರದಲ್ಲಿರುವವರನ್ನು ಬದಲಾಯಿಸಲು ಈ ಚುನಾವಣೆ ಸಹಕಾರಿಯಾಗಿದೆ. ಆದರೆ ಈ ಚುನಾವಣೆಯ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ಇದನ್ನು ತಮ್ಮ ಕರ್ತವ್ಯ ಎಂಬಂತೆ ಪಾಲಿಸಿ ಮತ ಚಲಾಯಿಸಿದರೆ ನಮ್ಮ ದೇಶದ ಪ್ರಜಾ ಪ್ರಭುತ್ವ ಗಟ್ಟಿಯಾಗಲು ಸಾಧ್ಯವಾಗುತ್ತದೆ. ಆದರೆ ಎಲ್ಲೋ ಒಂದು ಕಡೆ ಇನ್ನೂ ಕೂಡ ಬಹುತೇಕರು ಮತ ಚಲಾಯಿಸುವತ್ತ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ.

ಇವತ್ತು ಬಹಳಷ್ಟು ಜನರಿಗೆ ರಾಜಕೀಯದ ಬಗ್ಗೆ ಒಲವಿಲ್ಲ ಹೀಗಾಗಿ ನೀರಸಭಾವ ತೋರುತ್ತಾರೆ. ಅಯ್ಯೋ ರಾಜನಿಗೆ ಪಟ್ಟವಾದರೆ ರಾಗಿ ಬೀಸೋದು ತಪ್ಪುತ್ತಾ ಎಂಬ ಹಳೆಯ ಕಾಲದ ಆ ಗಾದೆಯನ್ನೇ ಹೇಳಿಕೊಂಡು ಓಡಾಡುತ್ತಾರೆ. ಆದರೆ ಈ ದೇಶದ ಆಗುಹೋಗುಗಳ ಬಗ್ಗೆ ಒಬ್ಬ ಪ್ರಜೆಯಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಜತೆಗೆ ಸಂವಿಧಾನಬದ್ಧವಾಗಿ ನೀಡಿರುವ ಹಕ್ಕನ್ನು ಚಲಾಯಿಸಬೇಕು. ಅಷ್ಟು ಮಾಡದೆ ಹೋದರೆ ನಾವು ಈ ದೇಶದ ಪ್ರಜೆ ಎನ್ನುವುದಕ್ಕೆ ಅರ್ಹರಾಗುವುದಿಲ್ಲ.
ನೋಟಾ ಎಂದರೇನು ಗೊತ್ತಾ?
ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಡಳಿತ ನಡೆಸುವವರು ದೇಶದ ಬದ್ಧತೆಗೆ ತಕ್ಕಂತೆ ಆಡಳಿತ ನಡೆಸುತ್ತಿಲ್ಲ ಎನ್ನುವುದಾದರೆ ಅವರನ್ನು ಕಿತ್ತೊಗೆಯುವ ಶಕ್ತಿ ಪ್ರಜೆಗಳಾದ ನಮಗಿದೆ. ನಮ್ಮ ಮತಕ್ಕೂ ಒಂದು ಸರ್ಕಾರವನ್ನು ತೊಲಗಿಸುವ ಶಕ್ತಿಯಿದೆ. ಇದನ್ನು ಪ್ರತಿಯೊಬ್ಬ ಪ್ರಜೆಯೂ ಅರಿತುಕೊಂಡು ಅದನ್ನು ಹೆಂಡ, ಹಣಕ್ಕೆ ಮಾರಿಕೊಳ್ಳದೆ, ಇರುವ ಅಭ್ಯರ್ಥಿಗಳ ನಡುವೆ ಯೋಗ್ಯನನ್ನು ಆರಿಸುವ ನಿರ್ಧಾರ ಮಾಡಿದರೆ ಒಂದೊಳ್ಳೆಯ ಪ್ರಜಾಪ್ರಭುತ್ವ ಸ್ಥಾಪನೆಗೆ ಸಾಧ್ಯವಾಗುತ್ತದೆ.

ಅಯ್ಯೋ ನಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದವರು ಯಾರೂ ಅರ್ಹರಲ್ಲ ಹಾಗಾಗಿ ಮತ ಹಾಕೋಕೆ ಇಷ್ಟವಿಲ್ಲವೆಂದು ಮಾತನಾಡುವವರಿಗೆ ಕೊರತೆಯಿಲ್ಲ. ಇಂತಹವರ ಪೈಕಿ ಕೆಲವರು ಮತಕೇಂದ್ರಕ್ಕೆ ಹೋಗುವುದೇ ಇಲ್ಲ. ಆದರೆ ಪ್ರಜ್ಞಾವಂತ ಕೆಲವರು ತಮ್ಮ ಹಕ್ಕನ್ನು ನೋಟಕ್ಕೆ ಚಲಾಯಿಸುತ್ತಾರೆ. ಇಂತಹದೊಂದು ಅವಕಾಶವನ್ನು ಕಳೆದೊಂದು ದಶಕದಿಂದೀಚೆಗೆ ಚುನಾವಣಾ ಆಯೋಗ ಮಾಡಿಕೊಟ್ಟಿದೆ. ಅದರಂತೆ ರಾಜಕೀಯ ಪಕ್ಷಗಳು ಕಣಕ್ಕಿಳಿಸಿರುವ ಅಥವಾ ಪಕ್ಷೇತರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ನಮಗೆ ಅರ್ಹರಲ್ಲ ಎಂದೆನಿಸಿದರೆ ನೋಟಾ (NOTA -NONE OF THE ABOVE) ಕ್ಕೆ ಮತ ಚಲಾಯಿಸಬಹುದಾಗಿದೆ.
2013ರಲ್ಲಿ ನೋಟಾ ಜಾರಿಗೆ ಬಂತು
ಇದೊಂದು ರೀತಿಯಲ್ಲಿ ಮತದಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಮಾರ್ಗವಾಗಿಯೂ ಗೋಚರಿಸುತ್ತಿದೆ. 2013ರಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ ಪಂಚ ರಾಜ್ಯ ಚುನಾವಣೆಯಲ್ಲಿ ಮತದಾರರಿಗೆ ನೋಟಾ ಆಯ್ಕೆಗೆ ಅವಕಾಶ ಮಾಡಿಕೊಡಲಾಯಿತು. ತದನಂತರದ ಚುನಾವಣೆಗಳಲ್ಲಿ ಇದಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಮತ ಯಂತ್ರ(ಇವಿಎಂ)ದ ಕೊನೆಯಲ್ಲಿ ನೋಟಾ ಗೆ ವ್ಯವಸ್ಥೆ ಮಾಡಲಾಗಿದೆ.
ನೋಟಾ ಜಾರಿಗೆ ಬಂದ ನಂತರ ಮತದಾರರು ಕ್ಷೇತ್ರದಲ್ಲಿ ಕಣಕ್ಕಿಳಿಸಿರುವ ಅಭ್ಯರ್ಥಿಗಳು ಯಾರೂ ಅರ್ಹರಲ್ಲ ಎಂಬುದನ್ನು ಸಾಬೀತುಪಡಿಸುವ ಒಂದು ಪ್ರತಿಭಟನೆಯನ್ನು ನೋಟಾಗೆ ಮತ ಚಲಾಯಿಸುವ ಮೂಲಕವೇ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ರಾಜಕೀಯ ಪಕ್ಷಕ್ಕೆ ಮತ್ತು ಸ್ಪರ್ಧಿಸುವ ಅಭ್ಯರ್ಥಿಗಳಿಗೊಂದು ಸಂದೇಶ ಎಂದರೂ ತಪ್ಪಾಗಲಾರದು. ಹಾಗಾದರೆ ಇದರಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಪ್ರತಿಯೊಬ್ಬರ ಮನದಲ್ಲಿ ಮೂಡದಿರದು.
ಯಾವಾಗ ನೋಟಾಗೆ ಮತ ಹಾಕ್ತಾರೆ?
ಇದಕ್ಕೆ ಉತ್ತರವಾಗಿ ಹೇಳುವುದಾದರೆ ದೇಶದ ಪ್ರಜೆಗಳಾದ ನಮಗೆ ಸಂವಿಧಾನದಲ್ಲಿ ಮತ ನೀಡುವ ಹಕ್ಕನ್ನು ನೀಡಲಾಗಿದೆ. ಈ ಮತಕ್ಕೆ ತನ್ನದೇ ಮಹತ್ವವಿದೆ. ಒಂದೇ ಒಂದು ಮತವೂ ನಿರ್ಣಾಯಕವಾಗಿದ್ದು, ಅದು ಸೋಲು ಗೆಲುವಿನ ಲೆಕ್ಕಾಚಾರವನ್ನು ಮಾಡಲಿದೆ. ಆದರೆ ಕಣದಲ್ಲಿರುವ ಅಭ್ಯರ್ಥಿ ಆಯ್ಕೆಗೆ ಸೂಕ್ತವಲ್ಲ ಎಂಬುದನ್ನು ಮತದಾರ ನಿರ್ಧಾರ ಮಾಡಿದರೆ ಆತ ಮತದಾನದಿಂದ ದೂರ ಉಳಿಯುವ ಸಾಧ್ಯತೆಯಿದೆ. ಹೀಗಾಗಿ ಈ ದೇಶದ ಪ್ರಜೆಯಾಗಿ ಯಾರೊಬ್ಬರೂ ಮತದಾನದಿಂದ ದೂರ ಉಳಿಯದೆ ತನ್ನ ಹಕ್ಕನ್ನು ಚಲಾಯಿಸಲು ಮತ್ತು ಆ ಮೂಲಕ ತನ್ನ ಅಭಿಪ್ರಾಯವನ್ನು ತಿಳಿಸಲು ನೋಟಾ ಉಪಯುಕ್ತವಾಗಿದೆ.
ಇನ್ನು ಈ ನೋಟಾಗೆ ಮಹತ್ವವಿದೆಯಾ? ಇದನ್ನು ಪರಿಗಣಿಸಲಾಗುತ್ತದೆಯಾ? ಎಂಬುದನ್ನು ನೋಡುವುದಾದರೆ ಮೊದ ಮೊದಲು ಇದಕ್ಕೆ ಅಂತಹ ಮಹತ್ವವೇನು ಇರಲಿಲ್ಲ. ಅದನ್ನು ಅಕ್ರಮ ಮತವೆಂದೇ ಪರಿಗಣನೆ ಮಾಡಲಾಗುತ್ತಿತ್ತು. ಆದರೆ ಆ ಬಳಿಕ ನೋಟಾಗೆ ಹೆಚ್ಚಿನ ಮತ ಚಲಾವಣೆಯಾದರೆ ಅದಕ್ಕಿಂತ ಕಡಿಮೆ ಮತ ಪಡೆದ, ಅಂದರೆ ಎರಡನೇ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸುವ ತೀರ್ಮಾನ ಮಾಡಲಾಯಿತು.
2018ರಲ್ಲಿ ನೋಟಾಗೆ ಸ್ಥಾನಮಾನ
2018ರ ಡಿಸೆಂಬರ್ ನಲ್ಲಿ ಹರಿಯಾಣದ ಐದು ಜಿಲ್ಲೆಗಳಲ್ಲಿ ಮುನ್ಸಿಪಲ್ ಚುನಾವಣೆ ನಡೆದಾಗ ಅಲ್ಲಿನ ಅಭ್ಯರ್ಥಿಗಳ ವಿರುದ್ಧ ಅಸಮಾಧಾನಗೊಂಡಿದ್ದ ಮತದಾರರು ನೋಟಾಗೆ ಅತಿ ಹೆಚ್ಚು ಮತಗಳನ್ನು ಹಾಕಿದ್ದರು. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಎಲ್ಲಾ ಅಭ್ಯರ್ಥಿಗಳು ಅನರ್ಹರು ಎಂದು ಘೋಷಣೆ ಮಾಡಲಾಯಿತು. ಇದೊಂದು ಪ್ರಕರಣ ನೋಟದ ಮಹತ್ವವನ್ನು ಇಡೀ ದೇಶಕ್ಕೆ ಸಾರಿತ್ತು. ಆ ನಂತರ ಅನ್ಯ ಮಾರ್ಗವಿಲ್ಲದೆ ಚುನಾವಣಾ ಆಯೋಗ ಮರು ಚುನಾವಣೆ ನಡೆಸಲು ಆದೇಶ ನೀಡಿತ್ತು. ಅದೇ ವರ್ಷ(2018)ದಿಂದ ದೇಶದಲ್ಲಿ ಮೊದಲ ಬಾರಿಗೆ ನೋಟಾಗೂ ಅಭ್ಯರ್ಥಿಯ ಸರಿಸಮನಾದ ಸ್ಥಾನಮಾನವನ್ನು ನೀಡಲಾಯಿತು.
ಇನ್ನೊಂದೆಡೆ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗದ 2018ರಲ್ಲಿ ಹೊರಡಿಸಿದ ಆದೇಶದ ಪ್ರಕಾರ ನೋಟಾಗೆ ಕಾಲ್ಪನಿಕ ಚುನಾವಣಾ ಅಭ್ಯರ್ಥಿ ಸ್ಥಾನಮಾನವನ್ನು ನೀಡಲಾಗಿದ್ದು, ಸ್ಪರ್ಧಿಸಿರುವ ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಹೆಚ್ಚು ಮತ ಬಿದ್ದರೆ ಮತ್ತೆ ಚುನಾವಣೆ ನಡೆಸಲಾಗುವುದು. ಒಂದು ವೇಳೆ ಮರು ಚುನಾವಣೆಯಲ್ಲಿಯೂ ಯಾವುದೇ ಅಭ್ಯರ್ಥಿ ನೋಟಾಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಗದಿದ್ದರೆ, ಮೂರನೇ ಬಾರಿಗೆ ಚುನಾವಣೆ ನಡೆಯುವುದಿಲ್ಲ. ಬದಲಿಗೆ ನೋಟಾ ನಂತರ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಸದ್ಯ ಇದು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗದ ನಿಯಮವಾಗಿರುವುದರಿಂದ ಆ ರಾಜ್ಯಕ್ಕಷ್ಟೆ ಸೀಮಿತವಾಗಿದೆ.
ಮತದಾನ ಮಾಡುವುದು ನಮ್ಮ ಹಕ್ಕು
ಇಂತಹದೊಂದು ಸಂದರ್ಭಗಳು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಂಭವಿಸಬಹುದಷ್ಟೆ. ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಸಂಭವಿಸುವುದು ತೀರಾ ವಿರಳ ಎಂದೇ ಹೇಳಬಹುದು. ಆದರೆ ಈ ಚುನಾವಣೆಗಳಲ್ಲಿ ನೋಟಾಕ್ಕೆ ಎಷ್ಟು ಮತಗಳು ಬಿದ್ದಿವೆ ಎಂಬುದು ಆ ಕ್ಷೇತ್ರದ ಅಭ್ಯರ್ಥಿಗಳ ವ್ಯಕ್ತಿತ್ವಕ್ಕೆ ಹಿಡಿಯುವ ಕನ್ನಡಿಯಾಗಬಹುದು. ಅದು ಏನೇ ಇರಲಿ ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದು ತಮಗಿಷ್ಟವಾದ ಅಭ್ಯರ್ಥಿಗೋ. ನೋಟಾಕ್ಕೋ ಯಾವುದೋ ಒಂದಕ್ಕೆ ಅದನ್ನು ಚಲಾಯಿಸುವ ಕೆಲಸವನ್ನು ತಪ್ಪದೇ ಮಾಡಬೇಕಷ್ಟೆ.












Click it and Unblock the Notifications