ಬಿಸಿ ಅನ್ನಕ್ಕೆ ತುಪ್ಪ ಹಾಕಿ ಉಣ್ಣೋದು ಯಾಕೆ? ನಮ್ಮ ಅಜ್ಜ-ಅಜ್ಜಿಯರಿಗೆ ಗೊತ್ತಿತ್ತು ವೈಜ್ಞಾನಿಕ ರಹಸ್ಯ!

ಬಿಸಿ ಬಿಸಿ ಅನ್ನ. ಅದರ ಮೇಲೆ ಒಂದು ಚಮಚ ತುಪ್ಪ. ಪಕ್ಕದಲ್ಲಿ ಬೇಳೆ ಸಾರು ಅಥವಾ ಸಾಂಬಾರ್. ಜೊತೆಗೆ ಸ್ವಲ್ಪ ತರಕಾರಿ. ಈ ಊಟವನ್ನು ನೋಡಿದರೆ ಸಾಕು, ಬಾಯಿಯಲ್ಲಿ ನೀರೂರದೇ ಇರದು. ಅಹಬೆಯಾಡುವ ಅನ್ನದ ಮೇಲಿನಿಂದ ತೇಲಿಬರುವ ತುಪ್ಪದ ಘಮವೇ ಸೊಗಸು. ಇದು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಊಟದ ರೀತಿ.

ಭಾರತೀಯರ ಮನೆಗಳಲ್ಲಿ ಅನ್ನಕ್ಕೆ ತುಪ್ಪ ಹಾಕಿ ಊಟ ಶುರುಮಾಡುವ ಪದ್ಧತಿ ಹಳೆಯದು. ದಕ್ಷಿಣ ಭಾರತದಲ್ಲಿ ತುಪ್ಪ ಅನ್ನ, ನೇಯ್ ಚೋರು ಹೀಗೆ ಹಲವು ರೂಪಗಳಲ್ಲಿ ಇದು ಕಾಣಿಸುತ್ತದೆ. ಉತ್ತರ ಭಾರತದಲ್ಲೂ ಬೇಳೆ-ಅನ್ನಕ್ಕೆ ಸ್ವಲ್ಪ ತುಪ್ಪ ಬೆರೆಸಿ ತಿನ್ನುವುದು ಸಾಮಾನ್ಯ. ಸಮಾರಂಭದ ಊಟಗಳಲ್ಲಿ ಅನ್ನಕ್ಕೆ ತುಪ್ಪ ಬೀಳದೇ ಶುರು ಮಾಡುವಂತೆಯೇ ಇಲ್ಲ. ನಮ್ಮ ಹಿರಿಯರು ಹೀಗೆ ಮಾಡುತ್ತಿದ್ದದ್ದು ಕೇವಲ ರುಚಿಗಾಗಿ ಮಾತ್ರವಾ? ಖಂಡಿತ ಅಲ್ಲ.

Ghee

ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ತುಪ್ಪವನ್ನು ಅನ್ನದ ಜೊತೆ ಸಣ್ಣ ಪ್ರಮಾಣದಲ್ಲಿ ಸೇವಿಸುವುದರಿಂದ ಆಗುವ ಆರೋಗ್ಯದ ಲಾಭಗಳತ್ತ ಬೆಟ್ಟು ಮಾಡಿವೆ. ಜೀರ್ಣಕ್ರಿಯೆ, ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಊಟದ ನಂತರ ದೇಹದಲ್ಲಿ ಶಕ್ತಿ ಬಿಡುಗಡೆಯಾಗುವ ರೀತಿಯ ಮೇಲೆ ಕೆಲವು ಪರಿಣಾಮಗಳಿರಬಹುದು ಎಂದು ಸೂಚಿಸಿವೆ.

ಅನ್ನದ ಜೊತೆ ತುಪ್ಪ ಹಾಕಿದರೆ ಏನಾಗುತ್ತದೆ?

ಮೊದಲನೆಯದಾಗಿ, ಅನ್ನದಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿರುತ್ತದೆ. ಬಿಳಿ ಅನ್ನವನ್ನು ತಿಂದಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣ ಬೇಗ ಏರಬಹುದು. ಆದರೆ ಊಟದಲ್ಲಿ ಕೊಬ್ಬು ಇದ್ದರೆ, ಆಹಾರ ಹೊಟ್ಟೆಯಿಂದ ಮುಂದೆ ಸಾಗುವ ವೇಗ ಸ್ವಲ್ಪ ನಿಧಾನವಾಗಬಹುದು. ಇದರಿಂದ ಅನ್ನದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಹೀರಿಕೊಳ್ಳುವ ವೇಗವೂ ನಿಧಾನವಾಗುವ ಸಾಧ್ಯತೆ ಇದೆ. ಅಂದರೆ, ಬರೀ ಅನ್ನ ತಿನ್ನುವುದಕ್ಕಿಂತ ಸ್ವಲ್ಪ ತುಪ್ಪದ ಜೊತೆ ಅನ್ನ ತಿಂದಾಗ ಶಕ್ತಿ ನಿಧಾನವಾಗಿ ಬಿಡುಗಡೆಯಾಗುವ ರೀತಿಯಲ್ಲಿ ವ್ಯತ್ಯಾಸವಾಗಬಹುದು.

ಒಂದು ಅಧ್ಯಯನದಲ್ಲಿ ತುಪ್ಪದ ಜೊತೆ ಬೇಯಿಸಿದ ಬಿಳಿ ಅನ್ನವನ್ನು ಟೈಪ್-2 ಮಧುಮೇಹ ಹೊಂದಿದ್ದ 103 ಜನರಿಗೆ ಮೂರು ತಿಂಗಳ ಕಾಲ ನೀಡಲಾಗಿತ್ತು. ಅವರ HbA1c ಮಟ್ಟವನ್ನು ಆರಂಭದಲ್ಲೂ ನಂತರವೂ ಪರಿಶೀಲಿಸಲಾಗಿತ್ತು. ಅಧ್ಯಯನದಲ್ಲಿ ಬಹುಪಾಲು ಜನರಲ್ಲಿ HbA1c ಕಡಿಮೆಯಾಗಿರುವುದಾಗಿ ವರದಿಯಾಗಿದೆ.

ಆದರೆ ಇದನ್ನು ನೋಡಿ, "ತುಪ್ಪ ತಿಂದರೆ ಮಧುಮೇಹ ಕಡಿಮೆಯಾಗುತ್ತದೆ" ಎಂದು ಅರ್ಥ ಮಾಡಿಕೊಳ್ಳಬಾರದು. ತುಪ್ಪ ಯಾವುದೇ ಮ್ಯಾಜಿಕ್ ಆಹಾರವಲ್ಲ. ಈ ವಿಷಯದಲ್ಲಿ ಇನ್ನಷ್ಟು ದೃಢವಾದ ಸಂಶೋಧನೆ ಬೇಕಿದೆ.

ತುಪ್ಪದಲ್ಲಿ ಏನಿದೆ?

ತುಪ್ಪದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿದೆ. ಅದೇ ಸಮಯದಲ್ಲಿ ಕೆಲವು ಶಾರ್ಟ್-ಚೈನ್ ಮತ್ತು ಮೀಡಿಯಂ-ಚೈನ್ ಫ್ಯಾಟಿ ಆಸಿಡ್‌ಗಳೂ ಇರುತ್ತವೆ. ಅದರಲ್ಲಿರುವ ಬ್ಯೂಟಿರಿಕ್ ಆಸಿಡ್‌ ಬಗ್ಗೆ ವಿಜ್ಞಾನದಲ್ಲಿ ಸಾಕಷ್ಟು ಆಸಕ್ತಿ ಇದೆ. ಇದು ದೊಡ್ಡ ಕರುಳಿನ ಒಳಪದರದಲ್ಲಿರುವ ಕೋಶಗಳಿಗೆ ಇಂಧನವಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಆದರೆ ಒಂದು ಚಮಚ ತುಪ್ಪದಿಂದ ಸಿಗುವ ಬ್ಯೂಟಿರೇಟ್ ಪ್ರಮಾಣ ತುಂಬಾ ಕಡಿಮೆ. ಹಾಗಾಗಿ ತುಪ್ಪವನ್ನೇ ಬ್ಯೂಟಿರೇಟ್‌ನ ಔಷಧೀಯ ಮೂಲ ಎಂದು ಪರಿಗಣಿಸುವುದು ಸರಿಯಲ್ಲ. ತುಪ್ಪದ ಕೊಬ್ಬಿನ ರಚನೆ ಮತ್ತು ಅದರಲ್ಲಿರುವ ಕೆಲವು ಅಂಶಗಳು ಆರೋಗ್ಯಕ್ಕೆ ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ತರಕಾರಿ ಜೊತೆ ತುಪ್ಪ ತಿಂದರೆ ಏನಾಗುತ್ತದೆ? ನಾವು ತಿನ್ನುವ ಕೆಲವು ವಿಟಮಿನ್‌ಗಳು ಮತ್ತು ಸಸ್ಯಜನ್ಯ ಪೋಷಕಾಂಶಗಳನ್ನು ದೇಹ ಚೆನ್ನಾಗಿ ಹೀರಿಕೊಳ್ಳಲು ಕೊಬ್ಬಿನ ಸಹಾಯ ಬೇಕಾಗುತ್ತದೆ. ಉದಾಹರಣೆಗೆ ಕ್ಯಾರೆಟ್, ಪಾಲಕ್, ಕುಂಬಳಕಾಯಿ ಅಥವಾ ಹಸಿರು ಸೊಪ್ಪುಗಳಂತಹ ತರಕಾರಿಗಳ ಜೊತೆ ಸ್ವಲ್ಪ ತುಪ್ಪ ಸೇವಿಸಿದರೆ ಅವುಗಳಲ್ಲಿರುವ ಕೆಲವು ಕೊಬ್ಬಿನಲ್ಲಿ ಕರಗುವ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳಲು ಸಹಾಯವಾಗಬಹುದು.

ವಿಟಮಿನ್ A, E ಮತ್ತು K ಹಾಗೂ ಬೀಟಾ-ಕ್ಯಾರೋಟಿನ್‌ನಂತಹ ಕ್ಯಾರೋಟಿನಾಯ್ಡ್‌ಗಳ ಹೀರಿಕೊಳ್ಳುವಿಕೆಗೆ ಆಹಾರದಲ್ಲಿರುವ ಕೊಬ್ಬು ಸಹಾಯ ಮಾಡಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ಅದಕ್ಕೇ ಇರಬಹುದು, ನಮ್ಮ ಸಾಂಪ್ರದಾಯಿಕ ಊಟದಲ್ಲಿ ಅನ್ನ, ಬೇಳೆ, ತರಕಾರಿ ಮತ್ತು ಸ್ವಲ್ಪ ತುಪ್ಪ ಒಟ್ಟಿಗೆ ಬರುವ ವ್ಯವಸ್ಥೆ ಇದೆ.

ನಮ್ಮ ಹಿರಿಯರಿಗೆ ಇದಕ್ಕೆ ವೈಜ್ಞಾನಿಕ ವಿವರಣೆ ಗೊತ್ತಿರಲಿಲ್ಲದಿರಬಹುದು. ಆದರೆ ತಲೆಮಾರುಗಳಿಂದ ಬಂದ ಆಹಾರ ಪದ್ಧತಿಯಲ್ಲಿ ಇಂತಹ ಹಲವು ಸೂಕ್ಷ್ಮ ಅಂಶಗಳು ಸೇರಿಕೊಂಡಿರುವುದು ಕುತೂಹಲಕಾರಿ.

ತುಪ್ಪದ ಪರಿಮಳಕ್ಕೂ ಕೆಲಸವಿದೆ!

ತುಪ್ಪದ ರುಚಿ ಮಾತ್ರವಲ್ಲ, ಅದರ ವಾಸನೆಯೂ ಊಟವನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ. ತುಪ್ಪವನ್ನು ಬಿಸಿ ಮಾಡಿದಾಗ ಅದರಿಂದ ವಿಶಿಷ್ಟವಾದ ಸುವಾಸನೆ ಬರುತ್ತದೆ. ಆ ವಾಸನೆ ಅನ್ನ, ಬೇಳೆ, ಸಾರು ಅಥವಾ ತರಕಾರಿಗಳ ರುಚಿಯನ್ನೇ ಬದಲಿಸಿಬಿಡುತ್ತದೆ. ಊಟದ ರುಚಿ ಮತ್ತು ವಾಸನೆ ತೃಪ್ತಿಕರವಾಗಿದ್ದರೆ, ನಾವು ಊಟವನ್ನು ಹೆಚ್ಚು ಸಂತೋಷದಿಂದ ತಿನ್ನಬಹುದು. ಇದರಿಂದ ಊಟದ ನಂತರ ಮತ್ತೆ ಮತ್ತೆ ಏನಾದರೂ ತಿನ್ನಬೇಕು ಎನ್ನುವ ಬಯಕೆ ಕೆಲವರಲ್ಲಿ ಕಡಿಮೆಯಾಗಬಹುದು.

ಇದು ಎಲ್ಲರಲ್ಲೂ ಒಂದೇ ರೀತಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಆಹಾರದ ರುಚಿ ಮತ್ತು ವಾಸನೆ ಕೂಡ ನಾವು ಎಷ್ಟು ತೃಪ್ತಿಯಿಂದ ಊಟ ಮಾಡುತ್ತೇವೆ ಎನ್ನುವುದರಲ್ಲಿ ಪಾತ್ರ ವಹಿಸುತ್ತವೆ.

ಅಡುಗೆಗೂ ತುಪ್ಪ ಒಳ್ಳೆಯದು. ತುಪ್ಪದಲ್ಲಿ ನೀರು ಮತ್ತು ಹಾಲಿನ ಘನವಸ್ತುಗಳನ್ನು ತೆಗೆದುಹಾಕಿರುವುದರಿಂದ, ಸಾಮಾನ್ಯ ಬೆಣ್ಣೆಗಿಂತ ಹೆಚ್ಚಿನ ಉಷ್ಣತೆಯಲ್ಲಿ ಬಳಸಲು ಇದು ಸೂಕ್ತವಾಗಿದೆ. ಅದಕ್ಕೇ ಒಗ್ಗರಣೆಗೆ ತುಪ್ಪ ಬಳಸುವುದು ಭಾರತೀಯ ಅಡುಗೆಯಲ್ಲಿ ಬಹಳ ಹಳೆಯ ಪದ್ಧತಿ.

ತುಪ್ಪದಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸಿನಕಾಯಿ ಅಥವಾ ಇತರ ಮಸಾಲೆಗಳನ್ನು ಹಾಕಿ ಬಿಸಿ ಮಾಡಿದಾಗ ಅವುಗಳ ಸುವಾಸನೆ ಇನ್ನಷ್ಟು ಚೆನ್ನಾಗಿ ಹೊರಬರುತ್ತದೆ. ಒಂದು ಚಿಕ್ಕ ಚಮಚ ತುಪ್ಪವೇ ಇಡೀ ಅಡುಗೆಯ ಪರಿಮಳವನ್ನು ಬದಲಿಸಿಬಿಡುತ್ತದೆ.

ಆಯುರ್ವೇದ ಕೂಡ ತುಪ್ಪಕ್ಕೆ ಮಹತ್ವ ನೀಡಿದೆ. ತುಪ್ಪದ ಬಗ್ಗೆ ಭಾರತೀಯ ಪರಂಪರೆಯಲ್ಲೂ ಬಹಳ ಹಿಂದಿನಿಂದಲೇ ಮಾತನಾಡಲಾಗಿದೆ. ಆಯುರ್ವೇದದಲ್ಲಿ ತುಪ್ಪವನ್ನು 'ಘೃತ' ಎಂದು ಕರೆಯಲಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ 'ಅಗ್ನಿ'ಯನ್ನು ಬೆಂಬಲಿಸುವ ಮತ್ತು ದೇಹವನ್ನು ಪೋಷಿಸುವ ಆಹಾರವಾಗಿ ಇದನ್ನು ಪರಿಗಣಿಸಲಾಗಿದೆ.

ಆಯುರ್ವೇದದಲ್ಲಿ ತುಪ್ಪವನ್ನು ಜೀರ್ಣಕ್ರಿಯೆ, ದೇಹದ ಪೋಷಣೆ, ಕಣ್ಣು, ಮೆದುಳು ಮತ್ತು ಒಟ್ಟಾರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಳಸಿರುವ ಉಲ್ಲೇಖಗಳಿವೆ.

ಹಾಗಾದರೆ ಎಷ್ಟು ತುಪ್ಪ ತಿನ್ನಬೇಕು? ತುಪ್ಪದಲ್ಲಿ ಕ್ಯಾಲೊರಿ ಹೆಚ್ಚಿರುತ್ತದೆ. ಅದರಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಕೂಡ ಇದೆ. ಹಾಗಾಗಿ "ತುಪ್ಪ ಆರೋಗ್ಯಕರ, ಎಷ್ಟು ಬೇಕಾದರೂ ತಿನ್ನಬಹುದು" ಎನ್ನುವುದು ಸರಿಯಲ್ಲ. ಅನ್ನಕ್ಕೆ ಒಂದು ಸಣ್ಣ ಚಮಚ ತುಪ್ಪ ಹಾಕಿಕೊಂಡು, ಅದರ ಜೊತೆ ಬೇಳೆ, ತರಕಾರಿ, ಸೊಪ್ಪು ಮುಂತಾದ ವೈವಿಧ್ಯಮಯ ಆಹಾರ ಸೇವಿಸುವುದು ಒಂದು ಸಮತೋಲನದ ಊಟದ ಭಾಗವಾಗಬಹುದು. ಆದರೆ ತುಪ್ಪವನ್ನು ಆರೋಗ್ಯಕ್ಕೆ ಔಷಧಿ ಎಂದು ಭಾವಿಸಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಅಗತ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+