ಗುಜರಾತಿನಲ್ಲಿ ಸ್ಯಾಂಟ್ರೊ ರವಿ ಬಂಧನದ ಬಗ್ಗೆ ಅನುಮಾನಗಳಿವೆ: ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜನವರಿ14: ರಾಜ್ಯದ ಗೃಹ ಸಚಿವರು ಗುಜರಾತ್ ನಲ್ಲಿದ್ದಾರೆ. ಸ್ಯಾಂಟ್ರೊ ರವಿ ಕೂಡ ಅಲ್ಲೇ ಇದ್ದ, ಗೃಹ ಸಚಿವರು ಗುಜರಾತ್ ಗೆ ಯಾವಾಗ ಹೋದರು ಎನ್ನುವುದೇ ಯಕ್ಷಪ್ರಶ್ನೆ. ಗುಜರಾತಿನಲ್ಲೂ ಬಿಜೆಪಿ ಸರ್ಕಾರವಿದೆ. ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಯಾಂಟ್ರೊ ರವಿಯನ್ನು ಗುಜರಾತ್ ನಿಂದ ರಾಜ್ಯಕ್ಕೆ ಕರೆತಂದ ಪೊಲೀಸರು ಅಜ್ಞಾತ ಸ್ಥಳಕ್ಕೆ ಮಾಧ್ಯಮಗಳ ಕಣ್ತಪ್ಪಿಸಿ ರಾಜಾತಿಥ್ಯ ಕೊಟ್ಟು ಕರೆದೊಯ್ದಿದ್ದಾರೆ. ವಿಐಪಿ ಗೇಟ್ ಮೂಲಕ ಸ್ಯಾಂಟ್ರೊ ರವಿಯನ್ನು ಎಲ್ಲರ ಕಣ್ತಪ್ಪಿಸಿ ಕರೆತಂದದ್ದು ಏಕೆ? ವಿಐಪಿ ಗೇಟ್ ಇರುವುದು ಪ್ರಧಾನಿ, ಮುಖ್ಯಮಂತ್ರಿಗಳಿಗೆ ಮಾತ್ರ. ಒಬ್ಬ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ಇಷ್ಟೊಂದೆಲ್ಲ ರಾಜಾತಿಥ್ಯ ಏಕೆ? ಎಂದು ಪ್ರಶ್ನಿಸಿದರು.
ಸ್ಯಾಂಟ್ರೊ ರವಿಯನ್ನು ಎರಡು-ಮೂರು ದಿನಗಳ ಹಿಂದೆಯೇ ಗುಜರಾತ್ ನಲ್ಲಿ ಬಂಧಿಸಿದ್ದಾರೆ. ಏನೆಲ್ಲಾ ಸಾಕ್ಷ್ಯ ಇಟ್ಟುಕೊಂಡಿದ್ದನೋ ಅದನ್ನೆಲ್ಲ ಕಿತ್ತುಕೊಂಡು ಬಂದಿದ್ದಾರೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಇವನ್ನದ್ದೇ ನೇರಪಾತ್ರವಿದೆ. ಮೈಸೂರಿನಲ್ಲಿ ಮಹಿಳೆಯೊಬ್ಬರು ದಾಖಲಿಸಿದ ಪ್ರಕರಣ ಬಿಟ್ಟು ಉಳಿದ ಪ್ರಕರಣವನ್ನು ಯಾವ ರೀತಿ ತನಿಖೆ ಮಾಡುತ್ತಾರೆ?. ಸರ್ಕಾರದ ಆಡಳಿತ, ದಂಧೆಕೋರರು ದಲ್ಲಾಳಿಗಳಿಂದ ನಡೆಯಬೇಕು ಅಂದರೆ ಈ ಸರ್ಕಾರ ಮುಂದುವರೆಯಬೇಕಾ? ಎಂದು ಕಿಡಿಕಾರಿದರು.

ನನ್ನ ಆಡಳಿತ ಇದ್ದಾಗ ನಾನು ಬಿಗಿಯಾಗಿ ಇಟ್ಟುಕೊಂಡಿದ್ದೆ. ಜನರಿಗೆ ಉತ್ತರ ಕೊಡಬೇಕಾದವರು ಸರ್ಕಾರದವರೇ. ಸ್ಯಾಂಟ್ರೋ ರವಿ ರಾಜರೋಷವಾಗಿ ಮಾತಾಡ್ತಾನೆ ಅಂದರೆ ಹೇಗೆ?. ಪೂನಾದಿಂದ ಗುಜರಾತ್ ಗೆ ಯಾಕೆ ಕರೆಸಿಕೊಂಡರು. ಅವನಿಗೆ ಏನು ಪ್ರಾಮೀಸ್ ಮಾಡಿ ಕರೆಸಿಕೊಂಡರು. ಒಂದು ತಿಂಗಳು ಸುದ್ದಿಯಲ್ಲಿ ಇರ್ತಾರೆ ನಂತರ ಜನ ಮರೆತಾಗ ಮುಚ್ಚಿ ಹಾಕುತ್ತಾರೆ ಅಷ್ಟೆ ಎಂದರು.
ಗೃಹ ಸಚಿವರು ಯಾಕೆ ಗುಜರಾತ್ ಗೆ ಹೋದರು. ಸಾಬರಮತಿ ಆಶ್ರಮದಲ್ಲಿ ಗಾಂಧಿ ಪ್ರತಿಮೆ ಬಳಿ ಫೋಟೊ ತೆಗೆಸಿಕೊಳ್ಳುವುದು, ವಿಡಿಯೋ ಕ್ಲಿಪ್ಪಿಂಗ್ ಯಾಕೆ ಕಳಿಸಿರುವುದು. ನನಗೆ ಅನುಮಾನ ಅಂತೂ ಇದೆ. ಪೂನಾದಲ್ಲೇ ಅರೆಸ್ಟ್ ಮಾಡಬಹುದಿತ್ತಲಾ?. ಆತನನ್ನು ಗುಜರಾತ್ ಗೆ ಯಾಕೆ ಕರೆಸಿಕೊಂಡರು. ನಾನೇ ಎಲ್ಲ ಹೇಳೋದಾದ್ರೆ ಸರ್ಕಾರ ತನಿಖೆ ಮಾಡಬೇಕಲಾ?, ವಾಸ್ತವಾಂಶ ಹೇಳಬೇಕಲ್ಲವೇ? 40 ಪರ್ಸೆಂಟ್ ಸರ್ಕಾರ ಅಂತಾರೆ. ಒಂದು ದಾಖಲೆ ಕೊಡಕಾಗುತ್ತದೆಯೇ?. ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ಸಾಕಲ್ಲವೇ?. ಇಂತಹ ಕೆಟ್ಟ ಸರ್ಕಾರ ಹಿಂದೆ ಬಂದಿಲ್ಲ, ಮುಂದೆ ಬರುವುದಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಸರಿ ಬಟ್ಟೆ ಬಗ್ಗೆ ಮಾತಾಡೋವ್ರು, ಅದೇ ಕೇಸರಿ ಬಟ್ಟೆನೇ ಇಂಥವರು ಹೆಗಲಿಕೆ ಹಾಕಿದ್ದಲ್ವಾ. ಅದಕ್ಕೆ ಗೌರವವಿಲ್ಲವೆ? ಎಂದ ಹೆಚ್ ಡಿಕೆ, ಜೆಡಿಎಸ್ ಜನರ ಟೀಂ, ಕಾಂಗ್ರೆಸ್-ಬಿಜೆಪಿ ಅವರು ಹೇಳಿದ್ದಾರಲ್ಲಾ ಅಲ್ಲೇ ಅರ್ಥ ಮಾಡಿಕೊಳ್ಳಿ. ಇವರು ಯಾವ ಟೀಂ ಅಂತ. ಬಿಜೆಪಿ ಆಡಳಿತ ಮಾಡಬೇಕಾದರೆ ಯಾವ ಕೃಪಾಕಟಾಕ್ಷ ಇತ್ತು ಎಂದರು.
ಈ ಸರ್ಕಾರದಲ್ಲಿ ಸ್ಯಾಂಟ್ರೋ ರವಿಯಂಥವರು ತುಂಬಾ ಜನ ಇದ್ದಾರೆ. ಕೆಲವು ಮಂತ್ರಿಗಳು, ರಾಜಕಾರಣಿಗಳಲ್ಲಿ ಸಂಪರ್ಕದಲ್ಲಿ ಇದ್ದಾರೆ. ನಾನು ಅಂದು ಹೇಳದೇ ಹೋಗಿದ್ರೆ ಇದನ್ನು ಮುಚ್ಚಿ ಹಾಕ್ತಿದ್ರು ಅಷ್ಟೆ. ಕೇರಳ ಅಲ್ಲಿ ಇಲ್ಲಿ ಹೋಗಿದ್ದ ಅಂತ ಹೇಳಿದ್ದರು. ನಾನು ಯಾಕೆ ಮೊಸರಲ್ಲಿ ಕಲ್ಲು ಹುಡುಕಲಿ. ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದರೆ ಹೇಳಲಿ? ಎಂದು ಹೇಳಿದರು.












Click it and Unblock the Notifications