DK Shivakumar: ಡಿ.ಕೆ.ಶಿವಕುಮಾರ್ ರಾತ್ರೋರಾತ್ರಿ ಮುಂಬೈಗೆ ಹೋಗಿ ಬಂದಿದ್ದೇಕೆ?
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿ ಕಿತ್ತಾಟದ ಚರ್ಚೆಗಳು ದಿನಕ್ಕೊಂದು ಸ್ವರೂಪ ತಾಳುತ್ತಿದೆ. ಸಿದ್ದರಾಮಯ್ಯ ಈಗಾಗಲೇ ನಾನು ಪೂರ್ಣಾವಧಿ ಸಿಎಂ ಎಂದು ಖಚಿತಪಡಿಸಿದ್ದು, ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಬಣದ ಶಾಸಕರು ದೆಹಲಿಗೆ ಗುಂಪುಗುಂಪಾಗಿ ತೆರಳುತ್ತಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ಇರುವ ದೆಹಲಿ ಬದಲಿಗೆ, ಮುಂಬೈನಲ್ಲಿ ದಿಢೀರ್ ಪ್ರತ್ಯಕ್ಷವಾಗುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಹೌದು ಡಿಕೆಶಿ ರಾತ್ರೋರಾತ್ರಿ ಮುಂಬೈಗೆ ಹೋಗಿ ಬಂದಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಇವರ ಮುಂಬೈ ಭೇಟಿಯು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲಿನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಮುಂಬೈ ಭೇಟಿಯ ಬಗ್ಗೆಯೂ ಅವರು ಕ್ಲಾರಿಟಿ ಕೊಟ್ಟಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಲು ಶಿವಕುಮಾರ್ ಮುಂಬೈಗೆ ಆಗಮಿಸಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಉನ್ನತ ಮಟ್ಟದ ರಾಜಕೀಯ ಸಭೆಗಾಗಿ ನೀವು ಮುಂಬೈಗೆ ಬಂದಿದ್ದೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ವದಂತಿಗಳನ್ನು ನಿರಾಕರಿಸಿದರು. ಯಾವುದೇ ರಾಜಕೀಯ ಸಭೆ ಇಲ್ಲ. ನಾನು ಕುಟುಂಬದ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದೇನೆ. ನಾನು ಕೇವಲ ಕುಟುಂಬದ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೇನೆ. ಬೇರೇನೂ ಇಲ್ಲ" ಎಂದಿದ್ದಾರೆ.
ರಾಜಕೀಯ ಸಭೆಗಳಿಗೆ ನಾನು ಮುಂಬೈಗೆ ಏಕೆ ಬರಬೇಕು? ದೆಹಲಿ ಅಥವಾ ಬೆಂಗಳೂರಿನಲ್ಲಿ ಅದು ನಡೆಯುತ್ತದೆ, ಮುಂಬೈನಲ್ಲಿ ಅಲ್ಲ. ನಾನು ಇಲ್ಲಿಗೆ ಬಂದಿರುವುದು ಕುಟುಂಬದ ಕಾರ್ಯಕ್ರಮಕ್ಕಾಗಿ ಅಷ್ಟೇ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಡಿಕೆ ಶಿವಕುಮಾರ್‌ಗೆ ಅವಕಾಶ ನೀಡೋಣ
ಇಂದು ಬೆಂಗಳೂರಿನ ನಿವಾಸದಲ್ಲಿ ಡಿಕೆ.ಶಿವಕುಮಾರ್ ಅವರನ್ನು ಡಾ.ನಂಜಾವಧೂತ ಮಹಾಸ್ವಾಮೀಜಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. "ಸಿದ್ದರಾಮಯ್ಯನವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. ಅವರ ವಯಸ್ಸನ್ನು ಪರಿಗಣಿಸಿ, ಅವರಿಗೆ ಅವಕಾಶ ನೀಡಲಾಗುವುದು ಎಂದು ಭಾವಿಸಿದ್ದೆವು. ಹೈಕಮಾಂಡ್ ಅವರನ್ನು ಕನಿಷ್ಠ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿತ್ತು. ಸಮಾಜದ ಎಲ್ಲ ವರ್ಗಗಳು ಶಿವಕುಮಾರ್ ಅವರನ್ನು ಬೆಂಬಲಿಸುತ್ತಿವೆ. ಮೊದಲು ಸಮಸ್ಯೆಯನ್ನು ಅಲ್ಲಿಯೇ ಪರಿಹರಿಸಿ, ಶಿವಕುಮಾರ್ ಅವರಿಗೆ ಅವಕಾಶ ನೀಡೋಣ ಎಂದಿದ್ದಾರೆ.
ಶಿವಕುಮಾರ್ ಸಮುದಾಯದ ಪ್ರಮುಖ ನಾಯಕರಾಗಿದ್ದು, ಪಕ್ಷಕ್ಕೆ ಅವರು ನೀಡಿದ ಕೊಡುಗೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರು ಅಪಾರ ಕಷ್ಟಗಳನ್ನು ಎದುರಿಸಿದ್ದಾರೆ. ಸವಾಲಿನ ಸಮಯದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದ್ದರೂ, ಅವರು ಎದೆಗುಂದಲಿಲ್ಲ ಮತ್ತು ಪಕ್ಷವನ್ನು ಬಲಪಡಿಸಲು ಅವಿಶ್ರಾಂತವಾಗಿ ಶ್ರಮಿಸಿದರು. ಅವರು ಸೋನಿಯಾ ಮತ್ತು ರಾಹುಲ್ ಗಾಂಧಿ ಕುಟುಂಬಕ್ಕೆ ನಿಷ್ಠರು. ಸಿದ್ದರಾಮಯ್ಯ ವಿವಿಧ ಸಮುದಾಯಗಳ ಬೆಂಬಲದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತಂದರು. ಈಗ, ಅಹಿಂದ ಸಮುದಾಯದ ನಂತರ, ಒಕ್ಕಲಿಗರಿಗೆ ಅವಕಾಶ ನೀಡಬೇಕೆಂದು ವಿನಂತಿಸಿದ್ದಾರೆ.
ದೇವರಾಜ್ ಅರಸು ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಕೆಲಸ ಮಾಡಿದರು. ಇಂದಿನ ಸನ್ನಿವೇಶದಲ್ಲಿ ಯಾರೂ ನಮಗೆ ಸಹಾಯ ಮಾಡಲು ಸಿದ್ಧರಿಲ್ಲ. ಎಲ್ಲ ಸಮುದಾಯಗಳಿಗೆ ಸ್ವೀಕಾರಾರ್ಹ ವ್ಯಕ್ತಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದಿದ್ದಾರೆ.












Click it and Unblock the Notifications