Nisha Yogeshwar: ಸಿ.ಪಿ ಯೋಗೇಶ್ವರ್ ವಿರುದ್ಧ ಮಗಳು ನಿಶಾ ಈ ಕಾರಣಕ್ಕೆ ಮಾತನಾಡುವಂತಿಲ್ಲ, ಯಾಕೆ ?
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕಣ ರಂಗೇರಿದ್ದು, ಕೊನೆಯ ಹಂತದ ಹಣಾಹಣೆಗೆ ತಲುಪಿದೆ. ಈ ನಡುವೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ವಕ್ಫ್ ಬೋರ್ಡ್ ವಿವಾದವನ್ನೇ ಪ್ರಧಾನ ಅಸ್ತ್ರವನ್ನಾಗಿಸಿಕೊಳ್ಳುತ್ತಿದ್ದು, ಈ ನಡುವೆ ಚನ್ನಪಟ್ಟಣ ವಿಧಾನಸಭೆ ಕಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಸಿ.ಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಅವರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಲಾಗಿದೆ.
ಸಿ.ಪಿ ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದಾಗಿನಿಂದಲೂ ಅವರ ಮಗಳಾದ ನಿಶಾ ಅವರು ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಿದ್ದರು. ನಿಶಾ ಅವರು ಸಿ.ಪಿ ಯೋಗೇಶ್ವರ್ ಅವರ ಬಗ್ಗೆ ಮಾತನಾಡಿದ್ದ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿ ಚರ್ಚೆಗೂ ಗ್ರಾಸವಾಗಿದ್ದು ಇದೆ. ಇನ್ನು ಇದೇ 13ಕ್ಕೆ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ.

ಈ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೊನೆಯ ಅಂತದ ಸರ್ಕಸ್ ಅನ್ನು ರಾಜಕೀಯ ಪಕ್ಷಗಳು ಹಾಗೂ ಚುನಾವಣೆ ಕಣದಲ್ಲಿ ಇರುವ ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಈ ನಡುವೆ ಸಿ.ಪಿ. ಯೋಗೇಶ್ವರ್ ವಿರುದ್ಧ ಅವರ ಮಗಳು ನಿಶಾ ಅವರು ಮಾತನಾಡುವಂತಿಲ್ಲ ಎಂದು ಸಿ.ಪಿ ಯೋಗೇಶ್ವರ್ ಅವರ 2ನೇ ಹೆಂಡತಿ ಪಿ.ವಿ. ಶೀಲಾ ಅವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಅವರ ಮಗಳು ನಿಶಾ ಅವರು ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ರೀತಿಯ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ಕೊಡದಂತೆ ಹೈಕೋರ್ಟ್ ನಿರ್ಬಂಧ ವಿಧಿಸಿದ್ದು, ಈ ಸಂಬಂಧ ಆದೇಶ ಮಾಡಿದೆ.
ಮಧ್ಯಂತರ ಆದೇಶ: ಇನ್ನು ಸಿ.ಪಿ ಯೋಗೇಶ್ವರ್ ಅವರ ಎರಡನೇ ಹೆಂಡತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರುವ ಕೋರ್ಟ್ ಈ ಸಂಬಂಧ ಆದೇಶ ಮಾಡಿದೆ. ಈ ಪ್ರಕರಣದಲ್ಲಿ ಪ್ರತಿವಾದಿಗಳಾದ (ನಿಶಾ) ಸೋಷಿಯಲ್ ಮೀಡಿಯಾಗಳಾದ ಇನ್‌ಸ್ಟಾಗ್ರಾಂ, ಎಕ್ಸ್, ಹಾಗೂ ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ನಿಂದನಾತ್ಮಕ ಹೇಳಿಕೆಗಳನ್ನು ಅಪ್‌ಲೋಡ್ ಮಾಡಬಾರದು ಎಂದು ಹೇಳಲಾಗಿದೆ. ಅಲ್ಲದೇ ಈ ಸಂಬಂಧ ಈಗಾಗಲೇ ಪ್ರಸಾರವಾಗಿರುವ ತುಣಕುಗಳನ್ನು ತಡೆಹಿಡಿಯುವಂತೆ ಹೇಳಿ ಮಧ್ಯಂತರ ಆದೇಶ ನೀಡಲಾಗಿದ್ದು, ವಿಚಾರಣೆಯನ್ನು ಮುಂದೂಡಲಾಗಿದೆ.
ಚುನಾವಣೆಯಲ್ಲಿ ಪರಿಣಾಮದ ಭೀತಿ: ಇನ್ನು ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರ ಬಗ್ಗೆ ಅವರ ಮಗಳು ನಿಶಾ ಯೋಗೇಶ್ವರ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ಭಾರೀ ವೈರಲ್ ಆಗಿದ್ದವು. ಇದನ್ನೇ ವಿರೋಧ ಪಕ್ಷಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದವು. ಅಲ್ಲದೇ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋಗಳನ್ನು (ನಿಶಾ ಅವರ ಹೇಳಿಕೆ) ಅಪ್ಲೋಡ್ ಮಾಡಿದ್ದವು.
ಇದೀಗ ಮತದಾನಕ್ಕೆ ಸರಿಯಾಗಿ 10 ದಿನಗಳು ಸಹ ಬಾಕಿ ಉಳಿದಿಲ್ಲ. ಈ ಸಂದರ್ಭದಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಪಿ. ಯೋಗೇಶ್ವರ ಅವರ ವಿರುದ್ಧ ಹಲವು ಆರೋಪಗಳನ್ನು ನಿಶಾ ಮಾಡಿದ್ದರು. ಇವುಗಳಲ್ಲಿ ಕೆಲವು ಗಂಭೀರ ಆರೋಪಗಳು ಸಹ ಇದ್ದವು ಎನ್ನಲಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಈಗಾಗಲೇ ಜಿದ್ದಾಜಿದ್ದಿನ ಕಣವಾಗಿ ಬದಲಾಗಿದೆ.












Click it and Unblock the Notifications