ಗುಂಡ್ಲುಪೇಟೆ, ನಂಜನಗೂಡು ಚುನಾವಣೆಗೆ ಇವಿಎಂ ಬಳಸಿರಲಿಲ್ಲವೇ?
ನವದೆಹಲಿ, ಡಿಸೆಂಬರ್ 18 : 'ಕಾಂಗ್ರೆಸ್ ಮತಯಂತ್ರದ ಮೇಲೆ ಆರೋಪ ಮಾಡುವುದು ನಿಲ್ಲಿಸಲಿ. ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಕಾಂಗ್ರೆಸ್ ಗೆದ್ದಿಲ್ಲವೇ?' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದರು.
ಗುಜರಾತ್ , ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದ ಬಳಿಕ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದರು. ಪಕ್ಷದ ನಾಯಕರೊಂದಿಗೆ ಸಿಹಿ ತಿಂದು ಸಂಭ್ರಮಾಚರಣೆ ನಡೆಸಿದರು.

'ಜನರು ಆಶೀರ್ವಾದ ಮಾಡುತ್ತಾರೆ. ಕರ್ನಾಟಕವೂ ಕಾಂಗ್ರೆಸ್ ಮುಕ್ತವಾಗಲಿದೆ. ಪರಿವರ್ತನಾ ಯಾತ್ರೆಗೆ ಅಭೂತಪೂರ್ವ ಸ್ವಾಗತ ದೊರೆಯುತ್ತಿದೆ. ನಾಳೆಯಿಂದ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಕಾಂಗ್ರೆಸ್ ಆಡಳಿತದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷರಾದ ಅಮಿತ್ ಶಾ ರಾಜ್ಯಕ್ಕೆ ಹೆಚ್ಚು ಸಮಯ ಕೊಡುತ್ತಾರೆ. ಕರ್ನಾಟಕದಲ್ಲಿಯೂ ಪ್ರಚಾರ ನಡೆಸುತ್ತಾರೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ' ಎಂದರು.
'ಕಾಂಗ್ರೆಸ್ ನೋಟು ರದ್ಧತಿ, ಜಿಎಸ್‌ಟಿ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿತ್ತು. ಆದರೆ, ಗುಜರಾತ್ ಜನರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಿದ್ದಾರೆ' ಎಂದು ಹೇಳಿದರು.
'ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮತ ಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದೆ. ಮತಯತ್ರದ ಮೂಲಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸಹ ಜಯಗಳಿಸಿಲ್ಲವೇ?' ಎಂದು ಯಡಿಯೂರಪ್ಪ ಪ್ರಶ್ನಿಸಿದರು.












Click it and Unblock the Notifications