Breaking; ಸಿದ್ದರಾಮಯ್ಯ ಕ್ಷೇತ್ರ ಪಲಾಯನ ಬೇಕಿತ್ತೇ?
ಬೆಂಗಳೂರು, ಜನವರಿ 11; ಬಾದಾಮಿ ಕ್ಷೇತ್ರದ ಹಾಲಿ ಶಾಸಕ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ. ಕೋಲಾರದಿಂದ ಕಣಕ್ಕಿಳಿಯುತ್ತೇನೆ ಎಂದು ಈಗಾಗಲೇ ಅವರು ಘೋಷಣೆ ಮಾಡಿದ್ದಾರೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, 'ಕ್ಷೇತ್ರ ಪಲಾಯನ ಬೇಕಿತ್ತೇ?' ಎಂದು ಪ್ರತಿಪಕ್ಷದ ನಾಯಕರಿಗೆ ಪ್ರಶ್ನೆ ಮಾಡಿದೆ. 'ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಜನ ತಿರಸ್ಕರಿಸಿದ್ದಾರೆ. ಬದಾಮಿಯಲ್ಲೂ ಸೋಲುವ ಭಯದಿಂದ ಕೋಲಾರಕ್ಕೆ ಹೊರಟಿದ್ದೀರಿ. ಅಲ್ಲಿಯೂ ಸೋಲುವುದು ನಿಶ್ಚಯ. ಅಭಿವೃದ್ಧಿಯ ರಾಜಕಾರಣ ನಿಮ್ಮದಾಗಿದ್ದರೆ, ಕ್ಷೇತ್ರ ಪಲಾಯನ ಬೇಕಿತ್ತೇ?' ಎಂದು ಟ್ವೀಟ್ ಮಾಡಿದೆ.
ಕಾಂಗ್ರೆಸ್ ನಾಯಕರ ಬಸ್ ಯಾತ್ರೆಯನ್ನು ಟೀಕಿಸಿರುವ ಬಿಜೆಪಿ, #ಪ್ರಜಾದ್ರೋಹಿಯಾತ್ರೆ ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿ ವಾಗ್ದಾಳಿ ಮಾಡಿದೆ. 'ಉತ್ತರಿಸಿ ಸಿದ್ದರಾಮಯ್ಯ ಅವರೇ, ನಮ್ಮ ರಾಜ್ಯದ ಅಭಿವೃದ್ಧಿಯನ್ನು ಪ್ರಪಾತಕ್ಕೆ ತಳ್ಳಿದ್ದು ನಿಮ್ಮ ಐದು ವರ್ಷಗಳ ಸಾಧನೆ. ಭ್ರಷ್ಟಾಚಾರ, ಹಗರಣ, ಡಿನೋಟಿಫಿಕೇಷನ್, ಹಿಂದುಗಳ ಹತ್ಯೆಯ ಮೂಲಕ ಕರ್ನಾಟಕದಲ್ಲಿ ಅಂಧಾ ದರ್ಬಾರ್ ಮಾಡಿದವರು ನೀವು. ಹೀಗೆ ಜನರಿಗೆ ಮಾಡಿದ ದ್ರೋಹಗಳಿಗೆ ಪ್ರಾಯಶ್ಚಿತ್ತವಾಗಿ ಯಾತ್ರೆ ಹೊರಟಿದ್ದೀರಾ?' ಎಂದು ಬಿಜೆಪಿ ಕೇಳಿದೆ.

'ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವ ಭರವಸೆ ಇಲ್ಲ ಎಂಬ ಕಾರಣಕ್ಕೆ ಗೆದ್ದ ಅಭ್ಯರ್ಥಿಯನ್ನೇ ಸಿದ್ದರಾಮಯ್ಯ ಅವರು ಖರೀದಿ ಮಾಡಿದ ಆಡಿಯೋ ರಿಲೀಸ್ ಆಗಿದೆ. ಇದು ಮತದಾರರಿಗೆ ಮಾಡುವ ದ್ರೋಹವಲ್ಲವೇ?. ಪ್ರಜೆಗಳಿಗೆ ದ್ರೋಹ ಮಾಡಿದ ನೀವು ಅದ್ಯಾವ ಮುಖವಿಟ್ಟುಕೊಂಡು ಜನರೆಡೆಗೆ ಹೋಗುತ್ತಿದ್ದೀರಿ?' ಎಂದು ಟ್ವೀಟ್ ಮಾಡಿದೆ.
ಮತ್ತೊಂದು ಟ್ವೀಟ್‌ನಲ್ಲಿ 'ಉತ್ತರಿಸಿ ಡಿ. ಕೆ. ಶಿವಕುಮಾರ್ ಅವರೇ, ನೀವೇ ಇಂಧನ ಸಚಿವರಾಗಿದ್ದಾಗ ರೈತರ ಕೃಷಿಗೆ ಅಗತ್ಯವಾದ ವಿದ್ಯುತ್ ನೀಡಲಿಲ್ಲ. ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಿ ರೈತರ ಬೆಳೆಗೆ ಕೊಳ್ಳಿ ಇಟ್ಟಿದ್ದಿರಿ. ಈಗ ಅಧಿಕಾರಕ್ಕಾಗಿ ಉಚಿತ ವಿದ್ಯುತ್ ನಾಟಕವಾಡುತ್ತಿದ್ದೀರಿ ಎಂಬುದು ಜನರಿಗೆ ತಿಳಿಯುವುದಿಲ್ಲವೇ?' ಎಂದಿದೆ.
'ಉತ್ತರಿಸಿ ಡಿ. ಕೆ. ಶಿವಕುಮಾರ್ ಅವರೇ, ನೀವು ಇಂಧನ ಸಚಿವರಾಗಿದ್ದಾಗ 2016 ರಲ್ಲಿ ಸುಳ್ಯದ ಗಿರಿಧರ್ ರೈ ಎನ್ನುವವರು ವಿದ್ಯುತ್ ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದರೆ, ಅವರನ್ನೇ ಅರೆಸ್ಟ್ ಮಾಡಿದ ಕ್ರೂರ ಆಡಳಿತ ನಿಮ್ಮದು. ಹೀಗೆ ರೈತರಿಗೆ ನೀವು ಮಾಡಿದ ದ್ರೋಹಗಳನ್ನು ಅವರಿನ್ನೂ ಮರೆತಿಲ್ಲ' ಎಂದು ನೆನಪಿಸಿದೆ.
ಸಿದ್ದರಾಮಯ್ಯ ಘೋಷಣೆ; ಸೋಮವಾರ ಕೋಲಾರದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, "ಇಲ್ಲಿನ ಜನರ ಪ್ರೀತಿ ಅಭಿಮಾನವನ್ನು ನಾನು ತಿರಸ್ಕಾರ ಮಾಡಲಾರೆ. ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಹೈಕಮಾಂಡ್‌ನ ಅನುಮತಿ ಮೇರೆಗೆ ನನ್ನ ಸ್ಪರ್ಧೆ ನಿರ್ಧಾರವಾಗಲಿದೆ" ಎಂದು ಹೇಳಿದ್ದರು.
"ಸಿದ್ದರಾಮಯ್ಯ ಎಂಬ ಕಾರಣಕ್ಕೆ ಪಕ್ಷದಲ್ಲಿ ನನಗೊಬ್ಬನಿಗೇ ವಿಶೇಷ ಅವಕಾಶ, ಸೌಲಭ್ಯ ಇಲ್ಲ, ಪಕ್ಷದಲ್ಲಿ ಯಾರೇ ಆಗಲಿ ಎಲ್ಲರೂ ಹೈಕಮಾಂಡ್‌ನ ಅನುಮತಿ ಪಡೆದು ಸ್ಪರ್ಧೆ ಮಾಡಬೇಕು. ಅದರಂತೆ ನನಗೂ ಹೈಕಮಾಂಡ್ ಅನುಮತಿ ನೀಡಿದರೆ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು.












Click it and Unblock the Notifications