ಸಿಎಂ ಸ್ಥಾನ ತೊರೆದ ಬಿಎಸ್‌ವೈ;ಇಂದಿಗೂ ಸಿಗದ ಉತ್ತರ ಸಿಗದ ಪ್ರಶ್ನೆಗಳು!
ಇಂದು BSY ಅವರ ಕಾಲು ಹಿಡಿಯುತ್ತಿರುವ ಬಿಜೆಪಿ ಕಣ್ಣೀರು ಹಾಕಿಸಿ ಯಡಿಯೂರಪ್ಪನವರ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬುದನ್ನು ಉತ್ತರಿಸಲಿ ಎಂದು ಕರ್ನಾಟಕ ಕಾಂಗ್ರೆಸ್ ಸವಾಲು ಹಾಕಿದೆ.
ಬೆಂಗಳೂರು, ಮಾರ್ಚ್ 01; ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಕೆಲವೇ ದಿನಗಳು ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಟ್ಟು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜಪ ಮಾಡುತ್ತಿದ್ದಾರೆ ಎಂಬುದು ಪ್ರತಿಪಕ್ಷವಾದ ಕಾಂಗ್ರೆಸ್ ಹೇಳಿಕೆ. ಈ ಕುರಿತು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಸಹ ಕೇಳಿದೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಇಂದು BSY ಅವರ ಕಾಲು ಹಿಡಿಯುತ್ತಿರುವ ಬಿಜೆಪಿ ಕಣ್ಣೀರು ಹಾಕಿಸಿ ಯಡಿಯೂರಪ್ಪನವರ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬುದನ್ನು ಉತ್ತರಿಸಲಿ' ಎಂದು ಸವಾಲು ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ರಾಜ್ಯಕ್ಕೆ ಭೇಟಿ ನೀಡಿದಾಗಲೂ ಇದೇ ರೀತಿಯ ಪ್ರಶ್ನೆಯನ್ನು ಕಾಂಗ್ರೆಸ್ ಮುಂದಿಟ್ಟಿತ್ತು.

ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, 'ಇಂದಿಗೂ ಸಿಗದ ಉತ್ತರ ಸಿಗದ ಪ್ರಶ್ನೆಗಳು, ಅವಧಿ ಪೂರೈಸುತ್ತೇನೆ ಎನ್ನುತ್ತಿದ್ದ BSY ಇದ್ದಕ್ಕಿದ್ದಂತೆ ದೆಹಲಿಗೆ ಹೋಗಿ ಬಂದು ರಾಜೀನಾಮೆ ಕೊಟ್ಟಿದ್ದೇಕೆ?, ಕಣ್ಣೀರು ಹಾಕಿ ಗೋಳಾಡಿದ್ದೇಕೆ?' ಎಂದು ಟ್ವೀಟ್ ಮಾಡಿದ್ದು, ಕರ್ನಾಟಕ ಬಿಜೆಪಿಯಿಂದ ಉತ್ತರ ಬಯಸಿದೆ.
ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್, 'ಜೋಶಿ, ಸಂತೋಷರ ಮುಖ ತೋರಿಸಿದರೆ ನಾಲ್ಕು ಮತಗಳು ಸಿಗುವುದಿಲ್ಲ ಎಂಬ ವಾಸ್ತವ ಸಂಗತಿ ಅರಿವಾಗುತ್ತಲೇ BSYರನ್ನು ಉತ್ಸವ ಮೂರ್ತಿ ಮಾಡಲು ಹೊರಟಿರುವ ಇದೇ ಬಿಜೆಪಿ ಹಿಂದೆ BSYರನ್ನು ಹೇಗೆಲ್ಲಾ ನಡೆಸಿಕೊಂಡಿತ್ತು ಎಂಬುದನ್ನು ಜನತೆ ನೋಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ BSY ಎಂಬ ಉತ್ಸವ ಮೂರ್ತಿಯನ್ನ ವಿಸರ್ಜನಾ ಮೂರ್ತಿ ಮಾಡಲಿದೆ ಬಿಜೆಪಿ' ಎಂದು ಭವಿಷ್ಯ ನುಡಿದಿದೆ.

ಮಂಗಳವಾರ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, 'ಚುನಾವಣೆ ಹಿನ್ನೆಲೆ ಪ್ರಧಾನಿಗಳು, ಗೃಹ ಸಚಿವರು ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಬಿಜೆಪಿ ಸಮಾವೇಶಗಳಲ್ಲಿ ಸಿಎಂ ಬೊಮ್ಮಾಯಿ ಅವರ ಹೆಸರನ್ನೇ ಪ್ರಸ್ತಾಪ ಮಾಡುತ್ತಿಲ್ಲ. ಮೋದಿ - ಅಮಿತ್ ಶಾ ಅವರು, ಈ 40% ಸರ್ಕಾರ ನಡೆಸುವವರ ಹೆಸರೆತ್ತಿದರೆ ಜನ ಮತ ಹಾಕುವುದಿಲ್ಲ ಎಂದು ರಾಜ್ಯ ನಾಯಕರ ಹೆಸರೇ ಹೇಳುತ್ತಿಲ್ಲ' ಎಂದು ವ್ಯಂಗ್ಯವಾಡಿದ್ದರು.
ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದಾಗ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಪಕ್ಷ, 'ರಾಜ್ಯದಲ್ಲಿ ನೆರೆ ಬಂದು ಜನ ತತ್ತರಿಸಿ ಸಹಾಯಕ್ಕಾಗಿ ಕೇಂದ್ರಕ್ಕೆ ಮೊರೆ ಇಟ್ಟು ಆಗಿನ ಸಿಎಂ ಆಗಿದ್ದ ಯಡಿಯೂರಪ್ಪನವರು ಪ್ರಧಾನಿ ಭೇಟಿಗೆ ಅವಕಾಶ ಕೇಳಿದಾಗ ಪದೇ ಪದೇ ನಿರಾಕರಿಸಲಾಗಿತ್ತು. ಈಗ ಚುನಾವಣೆ ಸಂಧರ್ಭದಲ್ಲಿ @narendramodi ಅವರಿಗೆ ಕರ್ನಾಟಕ ನೆನಪಾಗಿದೆ. ವಿಧಾನಸಭೆಯ ವಿದಾಯ ಭಾಷಣದ ನಂತರ @BSYBJP ಮೇಲೆ ಅತಿಯಾದ ಪ್ರೀತಿ ಹುಟ್ಟಿದೆ!' ಎಂದು ಹೇಳಿತ್ತು.
ಮತ್ತೊಂದು ಟ್ವೀಟ್‌ನಲ್ಲಿ, 'ಹಿಂದೆ - ಯಡಿಯೂರಪ್ಪ, ಇಂದು - ಬೊಮ್ಮಾಯಿ, ಬಿಜೆಪಿ ಬಳಸಿ ಬಿಸಾಡುವ ಟಿಷ್ಯೂ ಪೇಪರ್‌ಗಳ ಹೆಸರುಗಳಿವು!. ರಾಜ್ಯದ ಸಿಎಂ ಪಕ್ಕದಲ್ಲೇ ಇದ್ದರೂ ಒಂದು ಬಾರಿಯೂ ಪ್ರಧಾನಿ ಬಾಯಲ್ಲಿ ಬೊಮ್ಮಾಯಿ ಹೆಸರು ಬರಲಿಲ್ಲ. ಕರ್ನಾಟಕದ ಜನತೆ ಬೊಮ್ಮಾಯಿ ಆಡಳಿತದಿಂದ ಬೇಸತ್ತಿರುವ ಸಂಗತಿ ಮೋದಿಗೂ ತಿಳಿಯಿತೇ ಅಥವಾ ಉದ್ದೇಶಪೂರ್ವಕ ನಿರ್ಲಕ್ಷ್ಯವೇ @BJP4Karnataka?' ಎಂದು ಕಾಂಗ್ರೆಸ್ ಕೇಳಿತ್ತು.
'ಇದೇ BSY ಸಿಎಂ ಆಗಿದ್ದಾಗ ಕರ್ನಾಟಕದ ನೆರೆ ಸಂಕಷ್ಟದ ಬಗ್ಗೆ ಹೇಳಿಕೊಳ್ಳಲು ಹಲವು ಬಾರಿ ಅಲೆದಾಡಿದರೂ ಪ್ರಧಾನಿ ಕಚೇರಿ ಒಳಗೂ ಬಿಟ್ಟುಕೊಳ್ಳಲಿಲ್ಲ. ಮೋದಿ ಬೆಂಗಳೂರಿಗೇ ಬಂದಿದ್ದರೂ BSY ಮುಖವನ್ನೂ ನೋಡದೆ ವಾಪಸ್ ತೆರಳಿದ್ದರು. ಈಗ ಚುನಾವಣೆಗಾಗಿ BSY ಸ್ತುತಿ ಮಾಡುತ್ತಿರುವ @narendramodi ಅವರ ನಾಟಕ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ!' ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.












Click it and Unblock the Notifications