ಹಿಜಾಬ್ ವಿವಾದವನ್ನೇ ಮರೆತ ಬಿಜೆಪಿ: ಕರ್ನಾಟಕದಲ್ಲಿ ಕೋಮು ರಾಜಕಾರಣ ಫಲ ನೀಡದ ಮುನ್ಸೂಚನೆಯೇ? ಇಲ್ಲಿದೆ ವಿಶ್ಲೇಷಣೆ
ಬೆಂಗಳೂರು, ಏಪ್ರಿಲ್ 28: ಕಳೆದ ವರ್ಷ ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದ ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಕಾಲೇಜು ತರಗತಿಗಳಲ್ಲಿ ಹಿಜಾಬ್ ನಿಷೇಧಿಸಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಇದಕ್ಕೆ ಹಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಬಾರಿಯ ಚುನಾವಣೆಯಲ್ಲಿ ಹಿಜಾಬ್ ವಿಚಾರವನ್ನು ಬಿಜೆಪಿ ಮುನ್ನೆಲೆಗೆ ತರಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಕುರಿತು ವಿಚಾರವನ್ನು ಬಿಜೆಪಿ ಮಾತನಾಡದಿರುವುದು ಹಲವು ಶಂಕೆಗಳನ್ನು ಹುಟ್ಟುಹಾಕಿದೆ.
ವಿವಾದ ಭುಗಿಲೆದ್ದ ನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಕಾಲೇಜು ಕ್ಯಾಂಪಸ್‌ಗಳಲ್ಲಿ ಹಿಜಾಬ್‌ಗಳನ್ನು ಧರಿಸುವುದನ್ನು ನಿಷೇಧಿಸಿದೆ. ಸಮಾನತೆ, ಸಮಗ್ರತೆ, ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಶಾಲಾ ಮತ್ತು ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಸಮವಸ್ತ್ರವನ್ನು ಮಾತ್ರ ಧರಿಸುವಂತೆ ಸೂಚಿಸಲಾಗಿದೆ. ಈ ನಡೆ ರಾಜ್ಯದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋದ ನಂತರ ಕರ್ನಾಟಕ ಹೈಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ನಂತರ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.
ಹಿನ್ನೆಲೆಗೆ ಸರಿದ ಹಿಜಾಬ್ ವಿಚಾರ
ಕುತೂಹಲಕರ ಸಂಗತಿಯೆಂದರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಿಜಾಬ್ ವಿಚಾರವು ಹಿನ್ನೆಲೆಗೆ ಸರಿದಿದೆ. ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರಗಳು ಹಿಜಾಬ್ ವಿವಾದವನ್ನು ರಾಜಕೀಯವಾಗಿ ಬಳಸಿಕೊಳ್ಳಬಹುದು ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ, ಬಿಜೆಪಿ ನಾಯಕರು ಈ ವಿಚಾರದ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಹಿಂದುತ್ವದ ಪ್ರಯೋಗಾಲಯವೆಂದೇ ಹೆಸರುವಾಸಿಯಾಗಿರುವ ಕರ್ನಾಟಕದ ಕರಾವಳಿಯಲ್ಲಿಯೂ ಕೋಮು ಕೇಂದ್ರಿತ ಪ್ರಚಾರಗಳು ಮುನ್ನೆಲೆಗೆ ಬರದಂತೆ ಬಿಜೆಪಿ ನೋಡಿಕೊಳ್ಳುತ್ತಿದೆ ಎಂಬ ಚರ್ಚೆ ಎದ್ದಿದೆ.
ಹಿಜಾಬ್ ವಿವಾದಕ್ಕೆ ಬಿಎಸ್‌ವೈ ವಿರೋಧ
ಕರ್ನಾಟಕ ಬಿಜೆಪಿಯ ಅಗ್ರಗಣ್ಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಹಿಜಾಬ್ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಚರ್ಚೆ ಮಾಡುವ ವಿಚಾರವೇ ಅಲ್ಲವೆಂದು ಹೇಳಿದ್ದಾರೆ. 'ಹಿಂದೂಗಳು ಮತ್ತು ಮುಸ್ಲಿಮರು ಸಹೋದರರು ಮತ್ತು ಸಹೋದರಿಯರಂತೆ ಬದುಕಬೇಕು. ಹಿಜಾಬ್ ಮತ್ತು ಹಲಾಲ್ ವಿವಾದಗಳು ಅನಗತ್ಯ' ಎಂದು ಯಡಿಯೂರಪ್ಪ ಸಾರ್ವಜನಿಕವಾಗಿಯೇ ಹೇಳಿದ್ದಾರೆ.
'ಹಿಂದೂಗಳು ಮತ್ತು ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಒಟ್ಟಿಗೆ ಇರುವುದನ್ನು ನೋಡುವುದು ನನ್ನ ಆಸೆ. ಕೆಲ ಕಿಡಿಗೇಡಿಗಳು ಈ ಬಾಂಧವ್ಯವನ್ನು ಅಡ್ಡಿಪಡಿಸಿದರೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಭರವಸೆ ನೀಡಿದ್ದಾರೆ' ಎಂದು ಯಡಿಯೂರಪ್ಪ ಈ ಹಿಂದೆ ತಿಳಿಸಿದ್ದರು.
ಮುಸ್ಲಿಮರ ಮನಗೆಲ್ಲಲು ಸೂಚಿಸಿದ ಮೋದಿ
ಈ ವರ್ಷದ ಜನವರಿಯಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೋದಿ ಅವರು 'ಮುಸ್ಲಿಮರ ಮನಗೆಲ್ಲಲು' ರಾಜ್ಯ ನಾಯಕರಿಗೆ ಹೇಳಿದ್ದಾರೆ. ಇದನ್ನು ಬಹಿರಂಗ ಪಡಿಸಿರುವ ಯಡಿಯೂರಪ್ಪ, 'ಈ ಸಭೆಯಲ್ಲಿ ನಾನು ಪ್ರಧಾನಿ ಮೋದಿಯವರ ಜೊತೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲುವ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದ್ದೇನೆ' ಎಂದಿದ್ದರು.

'ರಾಜ್ಯದಲ್ಲಿ 140 ಸ್ಥಾನಗಳನ್ನು ಗೆಲ್ಲಬೇಕೆಂಬ ಆಕಾಂಕ್ಷೆಯನ್ನು ನಾವು ಹೊಂದಿದ್ದೇವೆ. ಪಕ್ಷವನ್ನು ಬಲಪಡಿಸಬೇಕಿದೆ. ಬಿಜೆಪಿಯಿಂದ ದೂರವೇ ಉಳಿದಿರುವ ಮುಸ್ಲಿಮರ ಮನಗೆಲ್ಲುವಂತೆ ಮೋದಿ ಹೇಳಿದ್ದಾರೆ' ಎಂದು ಯಡಿಯೂರಪ್ಪ ಬಹಿರಂಗ ಪಡಿಸಿದ್ದರು.
'ಈ ಸಭೆಯಲ್ಲಿ ಮುಸ್ಲಿಮರ ವಿಶ್ವಾಸ ಗಳಿಸಬೇಕೆಂದು ಮೋದಿ ಒತ್ತಿಹೇಳಿದ್ದಾರೆ. ನಾವು ಈಗಾಗಲೇ ಮುಸ್ಲಿಮರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಪರಸ್ಪರ ಗೌರವವನ್ನೂ ಪಡೆದುಕೊಳ್ಳುತ್ತಿದ್ದೇವೆ. ಹೀಗಾಗಿ, ಮುಸ್ಲಿಮರ ಮನಸ್ಸನ್ನು ಗೆಲ್ಲಬೇಕಿದೆ ಎಂಬುದಾಗಿ ಮೋದಿ ಹೇಳಿದರು' ಎಂದು ಮಾಜಿ ಸಿಎಂ ತಿಳಿಸಿದ್ದರು.
ಹಿಜಾಬ್ ವಿವಾದ: ಬಿಜೆಪಿಗೆ ಹಿನ್ನೆಡೆಯಾಗುವ ಸೂಚನೆ
ಈ ಎಲ್ಲ ಬೆಳವಣಿಗಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಹಿಜಾಬ್ ವಿವಾರದಿಂದ ಬಿಜೆಪಿಗೆ ರಾಜಕೀಯವಾಗಿ ಲಾಭ ತಂದುಕೊಡುವುದಿಲ್ಲ ಎಂಬುದನ್ನು ಪಕ್ಷದ ನಾಯಕರು ಅರಿತು ಕೊಂಡಂತಿದೆ. ಈ ವಿಚಾರವು ರಾಷ್ಟ್ರವಷ್ಟೇ ಅಲ್ಲದೇ ಜಗತ್ತಿನ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರತಿಧ್ವನಿಸಿತ್ತು. ಮೇಲಾಗಿ, ಕೋಮು ಧ್ರುವೀಕರಣವು ಕರ್ನಾಟಕದ ರಾಜಕಾರಣದಲ್ಲಿ ಅಷ್ಟಾಗಿ ಕೆಲಸ ಮಾಡಿಲ್ಲ. ಕರಾವಳಿ ಭಾಗದ ಜಿಲ್ಲೆಗಳನ್ನು ಬಿಟ್ಟರೆ, ಕರ್ನಾಟಕದ ಉಳಿದ ಪ್ರದೇಶಗಳಲ್ಲಿ ಕೋಮಸೌಹಾರ್ದತೆ ಇರುವುದು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಿಜಾಬ್ ವಿಚಾರವನ್ನು ಚುನಾವಣಾ ಪ್ರಚಾರದ ಅಜೆಂಡಾವನ್ನಾಗಿ ಮಾಡಿಕೊಂಡಿಲ್ಲವೆಂದೂ ಹೇಳಲಾಗುತ್ತಿದೆ.
ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡರೆ ಬಿಜೆಪಿಗೆ ಹಿನ್ನೆಡೆ ಉಂಟಾಗಬಹುದು ಎಂಬ ಲೆಕ್ಕಾಚಾರಗಳೂ ಇವೆ. ಹಿಜಾಬ್ ವಿವಾದದಿಂದ ಕೇವಲ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತೊಂದರೆ ಆಗಿರಲಿಲ್ಲ. ಹಲವು ದಿನಗಳ ಕಾಲ ಶಾಲೆ-ಕಾಲೇಜುಗಳು ಈ ವಿವಾದದ ಹಿನ್ನೆಲೆಯಲ್ಲಿ ಮುಚ್ಚಿದ್ದರಿಂದ ಎಲ್ಲ ವಿದ್ಯಾರ್ಥಿಗಳಿಗೂ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ, ಹಿಜಾಬ್ ವಿಚಾರವನ್ನು ಮತ್ತೆ ಕೈಗೆತ್ತಿಕೊಂಡರೆ, ಪಕ್ಷಕ್ಕೆ ನಷ್ಟವಾಗಬಹುದು ಎಂದು ಪಕ್ಷದ ನಾಯಕರಿಗೆ ತಿಳಿದುಬಂತಂತಿದೆ.












Click it and Unblock the Notifications