ಬಿಜೆಪಿಗೆ ಚುನಾವಣೆ ಸೋಲಿನ ಬಳಿಕ ಯಡಿಯೂರಪ್ಪ ಮತ್ತೊಮ್ಮೆ ಬಾಸ್!
ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಇಷ್ಟುದಿನ ಯಾರು ದೂರ ಇಟ್ಟಿದ್ದರೋ ಅವರೇ ಈಗ ಗೋಗರೆಯುತ್ತಿದ್ದಾರೆ. ಸಕ್ರಿಯ ರಾಜಕಾರಣದಿಂದ ಸಂಪೂರ್ಣವಾಗಿ ದೂರವಾಗುತ್ತಿದ್ದ ಅಭಿಮಾನಿಗಳ ಪಾಲಿನ 'ರಾಜಾಹುಲಿ'ಗೆ ಇನ್ನಷ್ಟು ಉನ್ನತ ಜವಾಬ್ದಾರಿ ಸಿಕ್ಕಿದೆ. ಇಂತಹ ಬೆಳವಣಿಗೆಗೆ ಪ್ರಮುಖ ಕಾರಣ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಎದುರಾದ ಭೀಕರ ಸೋಲು. ಹಾಗಾದ್ರೆ ಬಿಎಸ್‌ವೈ ಮತ್ತೆ ಅಖಾಡದಲ್ಲಿ ಅಬ್ಬರಿಸ್ತಾರಾ? ಬನ್ನಿ ತಿಳಿಯೋಣ.
ಬಿ.ಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂಬ ಕಾರಣ ಕೊಟ್ಟು, ಘಟಾನುಘಟಿ ಬಿಜೆಪಿ ನಾಯಕರು ಸೇರಿ ಬಿಎಸ್‌ವೈ ಅವರನ್ನು ಮೂಲೆಗುಂಪು ಮಾಡಿದ್ದ ಆರೋಪವು ಈ ಹಿಂದೆ ಕೇಳಿಬಂದಿತ್ತು. ಇದು ನಿಜ ಎಂಬಂತೆ ಯಡಿಯೂರಪ್ಪ ಅವರಿಗೆ ಸೂಕ್ತ ಬೆಂಬಲವು ಸಿಕ್ಕಿರಲಿಲ್ಲ. ಅದರಲ್ಲೂ ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಬಿಜೆಪಿ ಪುನರ್ ಸಂಘಟನೆಗೆ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುವುದಾಗಿ ಹೇಳಿದ್ದರು. ಹೀಗೆ ಪದೇ ಪದೆ ಹೇಳಿದರು ಅವರಿಗೆ ರಾಜ್ಯ ಪ್ರವಾಸ ಮಾಡಲು ಬಿಜೆಪಿ ಕೇಂದ್ರ ನಾಯಕರು ಅವಕಾಶವನ್ನೇ ಕೊಡಲಿಲ್ಲ. ಹೀಗೆ 2023ರ ವಿಧಾನಸಭೆಗೆ ಮುನ್ನ ಎಲ್ಲ ವಿಚಾರದಲ್ಲೂ ಮೂಲೆಗುಂಪಾಗಿದ್ದ ಬಿಎಸ್‌ವೈ ಅವರ ಮೇಲೆ, ಬಿಜೆಪಿ ನಾಯಕರಿಗೆ ಈಗ ದಿಢೀರ್ ಪ್ರೀತಿ ಏಕೆ? ಅದರ ಮಾಹಿತಿ ಇಲ್ಲಿದೆ.

'ಸಂತೋಷ'ದ ಸೋಲಿಗೆ 'ಬಿಎಸ್‌ವೈ' ಮದ್ದು?
ಹೌದು, ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ವಿಧಾನಸಭೆ ಚುನಾವಣೆ ಸೋತಿತ್ತು. ಇದಾದ ಬಳಿಕ ಹೊಂದಾಣಿಕೆ ರಾಜಕಾರಣವೆಂಬ ಕೂಗು ಕೇಳಿಬಂದಿತ್ತು. ಹೀಗೆ ಕಿರಿಕ್ ಮಾಡುತ್ತಿದ್ದ ಬಿಜೆಪಿ ನಾಯಕರು ಬಿಎಲ್ ಸಂತೋಷ್ & ಸಂಸದ ಜೋಶಿ ಬಣದವರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ತಮ್ಮ ಹೊಣೆಗಾರಿಕೆಯ ಸೋಲನ್ನು ಯಡಿಯೂರಪ್ಪ ಮೇಲೆಯೇ ಹಾಕುತ್ತಿದ್ದಾರೆ ಎನ್ನಲಾಗಿತ್ತು. ಇಷ್ಟೆಲ್ಲಾ ತಿಕ್ಕಾಟಗಳ ನಡುವೆಯೇ ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಯಡಿಯೂರಪ್ಪ ಮುನ್ನೆಲೆಗೆ ಬಂದಿದ್ದು, ವಿಪಕ್ಷದ ನಾಯಕನ ಆಯ್ಕೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಯ ಸಭೆಗೆ ಯಡಿಯೂರಪ್ಪ ಅವರನ್ನು ಮಾತ್ರ ಕರೆಯಲಾಗಿತ್ತು. ಅಷ್ಟಕ್ಕೂ ದಿಢೀರ್ ಇಂತಹ ಬೆಳವಣಿಗೆ ಏಕೆ? ಇಲ್ಲಿದೆ ತಿಳಿಯಿರಿ.
ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಅನಿವಾರ್ಯ?
1) 40 ವರ್ಷಕ್ಕೂ ಹೆಚ್ಚು ಕಾಲದಿಂದ ರಾಜಕೀಯದಲ್ಲೇ ಜೀವನ ಕಳೆದಿರುವ ಮಾಜಿ ಸಿಎಂ ಯಡಿಯೂರಪ್ಪ ಈಗ ಬಿಜೆಪಿಗೆ ಅನಿವಾರ್ಯ.
2) 2023ರ ವಿಧಾನಸಭೆ ಸೋಲಿನ ರುಚಿ ಬಳಿಕ ಯಡಿಯೂರಪ್ಪ ಅಗತ್ಯತೆ ಬಿಜೆಪಿ ವರಿಷ್ಠ ಪಡೆಗೆ ಅರ್ಥವಾದಂತೆ ಕಾಣುತ್ತಿದೆ.
3) ಲೋಕಸಭೆ ಚುನಾವಣೆಗೆ ಮುನ್ನ ಬಿಎಸ್‌ವೈ ಅನಿವಾರ್ಯ ಎಂಬ ಅಂಶವನ್ನು ಕೇಂದ್ರ ಬಿಜೆಪಿ ನಾಯಕರು ಅರ್ಥ ಮಾಡಿಕೊಂಡಂತಿದೆ.
4) ಹಿರಿಯ ನಾಯಕ ಇಲ್ಲದೆ ಬಿಜೆಪಿ ಶಾಸಕರ ಮೇಲೆ ಹಿಡಿತ ಸಾಧ್ಯವಾಗುತ್ತಿಲ್ಲ, ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಕಿತ್ತಾಟ ಶುರುವಾದ ಆರೋಪ.
5) ಬಿ.ಎಲ್.ಸಂತೋಷ್ ತಂತ್ರಗಳು ಮಕಾಡೆ ಮಲಗಿದ್ದವು, ಇದೇ ಕಾರಣಕ್ಕೆ ವಿಧಾನಸಭೆ ಸೋಲಿನ ನಂತರ ಹೆಚ್ಚಿರುವ ಆತಂಕ.
6) 2024ರ ಲೋಕಸಭೆ ಚುನಾವಣೆಗೆ ಮತದಾರರನ್ನ ಸೆಳೆಯುವ ನಾಯಕನ ಕೊರೆತೆಯೂ ಕರ್ನಾಟಕ ಬಿಜೆಪಿಗೆ ಸಾಕಷ್ಟು ಕಾಡುತ್ತಿದೆ.
7) ಬಿಜೆಪಿ ವೋಟ್ ಬ್ಯಾಂಕ್ ಎಂದೇ ಪರಿಗಣಿಸಲಾಗಿರುವ ಲಿಂಗಾಯತರ ಮತಗಳ ಮೇಲೆ ಮತ್ತೆ ಕಣ್ಣಿಟ್ಟಿರುವಂತಿದೆ ಕಮಲ ಪಾಳಯ.
8) ಪ್ರಲ್ಹಾದ್ ಜೋಶಿ & ಬಿ.ಎಲ್.ಸಂತೋಷ್ ವಿರುದ್ಧ 2023ರ ಚುನಾವಣೆ ಸೋಲಿನ ಬಳಿಕ ಪಕ್ಷದಲ್ಲಿ ಮೂಡಿರುವ ಅಸಮಾಧಾನ.
9) ರಾಷ್ಟ್ರ ರಾಜಕಾರಣದಲ್ಲಿ ವಿಪಕ್ಷಗಳ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿರುವಾಗಲೇ ಕರ್ನಾಟಕದಲ್ಲೂ ಬಿಜೆಪಿಗೆ ಸೋಲಿನ ಭೀತಿ?
10) ಈಗಿನ ಸ್ಥಿತಿಯಲ್ಲಿ ಯಡಿಯೂರಪ್ಪ ಬಿಟ್ಟು, ಕರ್ನಾಟಕದಲ್ಲಿ ರಾಜಕೀಯ ಮಾಡಲು ಆಗದೆಂಬ ಸತ್ಯ ಬಿಜೆಪಿ ವರಿಷ್ಠರಿಗೆ ಅರ್ಥವಾದಂತಿದೆ.

ಸಿದ್ದು ಸರ್ಕಾರದ ವಿರುದ್ಧ ಬಿಎಸ್‌ವೈ ಅಸ್ತ್ರ!
ಅಂದಹಾಗೆ 2023ರ ವಿಧಾನಸಭೆ ಚುನಾವಣೆ ಮುಗಿದು, ರಿಸಲ್ಟ್ ಹೊರಬಿದ್ದು ಬರೋಬ್ಬರಿ 1 ತಿಂಗಳಿಗೂ ಹೆಚ್ಚು ಕಾಲ ಕಳೆದು ಹೋಗಿದೆ. ಇಷ್ಟಾದರೂ ಬಿಜೆಪಿ ನಾಯಕರು ಈವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ. ನಿನ್ನೆಯಿಂದಲೇ ಕರ್ನಾಟಕ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿ ವಿಪಕ್ಷ ನಾಯಕನೇ ಇಲ್ಲದೆ ಕಲಾಪ ಶುರುವಾಗಿದೆ. ಪರಿಸ್ಥಿತಿ ಹೀಗಿದ್ದಾಗಲೇ ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಅತ್ಯಗತ್ಯ ಎಂಬ ಸತ್ಯ ಮನವರಿಕೆ ಆದಂತಿದೆ. ಅದರಲ್ಲೂ ದೆಹಲಿಯಿಂದ ಬಂದು ತಂತ್ರ ಮಾಡಲು ಹೋಗಿದ್ದ ನಾಯಕರು ಚುನಾವಣೆ ಮುಗಿದ ನಂತರ ವಾಪಸ್ ಕಾಣಿಸಿಕೊಂಡಿಲ್ಲ. ಹೀಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಲು ಯಡಿಯೂರಪ್ಪ ಬೇಕೆ ಬೇಕಾಗಿದೆ.
ಲಿಂಗಾಯತ ಸಮುದಾಯದ ಸಿಟ್ಟು ಕಡಿಮೆ ಆಗುತ್ತಾ?
ಇದು ಈಗ ರಾಜ್ಯ ಬಿಜೆಪಿ ಪಾಲಿಗೆ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಹೇಗೆಂದರೆ ರಾಜ್ಯ ಬಿಜೆಪಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪೆಟ್ಟು ಕೊಟ್ಟಿದ್ದೇ ಲಿಂಗಾಯತ ಸಮುದಾಯದ ಮತಗಳು. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ಲಿಂಗಾಯತ ಸಮುದಾಯ ಮುನಿಸಿಕೊಂಡಿದೆ ಎಂಬ ಮಾತಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಮತ್ತೆ ಮುನ್ನೆಲೆಗೆ ತಂದು, ಲಿಂಗಾಯತ ಸಮುದಾಯದ ಕೋಪ ತಣ್ಣಗಾಗಿಸುವ ಪ್ರಯತ್ನ ಕೂಡ ಸಾಗಿದೆ ಎನ್ನಲಾಗುತ್ತಿದೆ. ಇಷ್ಟಾದರೂ ಯಡಿಯೂರಪ್ಪ ಅವರ ಕೈಯಲ್ಲಿ ಈಗ ಅಧಿಕಾರ ಇಲ್ಲದ ಕಾರಣ ಪರಿಣಾಮ ಏನಾಗುತ್ತೋ ಗೊತ್ತಿಲ್ಲ.

ಬಿಎಲ್ ಸಂತೋಷ್ ವಿರುದ್ಧ ಸಿಟ್ಟು ಏಕೆ?
ಒಂದ್ಕಡೆ ರಾಜ್ಯ ಬಿಜೆಪಿ ನಾಯಕರ ಸರ್ಕಾರ ರಚಿಸುವ ಆಸೆ ಈಡೇರಿಲ್ಲ, ಜೊತೆಯಲ್ಲಿ ಬಿಜೆಪಿ ನಾಯಕರಿಗೆ ಬಿಎಲ್ ಸಂತೋಷ್ ಕೈಗೊಂಡ ಏಕಪಕ್ಷೀಯ ನಿರ್ಧಾರಗಳು ಸಿಟ್ಟು ತರಿಸಿವೆ ಎಂಬ ಆರೋಪ ಕೇಳಿಬರುತ್ತಿದೆ. ರಾಜ್ಯದಲ್ಲಿ ಬಿಜೆಪಿ ಭೀಕರ ಸೋಲು ಕಂಡಿದ್ದ ಹಿನ್ನೆಲೆ ಕೇಸರಿ ಪಡೆ ನಾಯಕರಿಗೆ ಸಿಟ್ಟು ಬಂದಿದೆ. ಅದರಲ್ಲೂ ಬಿಎಲ್ ಸಂತೋಷ್ ಕೈಗೊಂಡ ನಿರ್ಧಾರಗಳಿಂದ ಸೋಲು ಎದುರಾಗಿದೆ ಎಂಬ ಆರೋಪ ಬಿಜೆಪಿ ಪಡಸಾಲೆಯಲ್ಲಿ ಚರ್ಚೆ ಆಗ್ತಿದೆ. ಈ ಹೊತ್ತಲ್ಲಿ ಅಸಮಾಧಾನ ತಣ್ಣಗಾಗಿಸಲು ಹಿರಿಯ ನಾಯಕ ಯಡಿಯೂರಪ್ಪ ಎಂಟ್ರಿ ಅತ್ಯಗತ್ಯವಾಗಿದೆ ಎನ್ನಲಾಗಿದೆ. ಅಲ್ಲದೆ ಹೊಂದಾಣಿಕೆ ರಾಜಕೀಯ ಎಂಬ ಬಿಜೆಪಿ ನಾಯಕರ ಆರೋಪಕ್ಕೂ ಮಾತಿಗೂ ಉತ್ತರ ಸಿಗುವ ಸಾಧ್ಯತೆ ಇದೆ.
ಒಟ್ನಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜವಾಬ್ದಾರಿ ನಿರ್ವಹಿಸುವ ನೆಪದಲ್ಲಿ ಹಲವು ವಿಚಾರದಲ್ಲಿ ಮೂಗು ತೂರಿಸಿದ್ದರೆಂಬ ಆರೋಪ ಓಡಾಡುತ್ತಿದೆ. ಚುನಾವಣೆಗೆ ಮುನ್ನ ಪ್ರತಿಯೊಂದರಲ್ಲೂ ಶಕ್ತಿ ಪ್ರದರ್ಶನಕ್ಕೆ ಮುಂದಾದದ್ದು ಬಿಜೆಪಿ ಸೋಲಿನ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗುತ್ತಿದೆ. ಜೊತೆಗೇ ಯಡಿಯೂರಪ್ಪ ವಿಚಾರ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರ ಹಿಂದೆ ಯಾರ ಕೈವಾಡವಿತ್ತು? ಎಂಬ ಚರ್ಚೆಗೆ ವೇದಿಕೆ ಒದಗಿಸಿತ್ತು ಸೋಲು. ಹೀಗಾಗಿ ಎಲ್ಲಾ ಸಮಸ್ಯೆಗಳಿಗೆ ಒಂದೇ ಬಾಣ ಬಿಟ್ಟಿದ್ದಾರೆ ಬಿಜೆಪಿ ವರಿಷ್ಠರು. ಅದೇನೆಂದರೆ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುನ್ನೆಲೆಗೆ ತರಲಾಗುತ್ತಿದೆ.












Click it and Unblock the Notifications