Sunil Kanugolu : ರಾಜ್ಯದಲ್ಲಿ ಬಿಜೆಪಿಯನ್ನು ಸದೆಬಡಿದ ಕಾಂಗ್ರೆಸ್‌ನ ಹಿಂದಿರುವ ಮಾಸ್ಟರ್ ಮೈಂಡ್ ಇವರೇ ನೋಡಿ!
ಕರ್ನಾಟಕ ವಿಧಾನಸಭಾ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಆಡಳಿತಾರೂಢ ಬಿಜೆಪಿ ಪಕ್ಷವನ್ನು ಸದೆಬಡಿದಿರುವ ಕಾಂಗ್ರೆಸ್ ಬಹುಮತ ಪಡೆದುಕೊಂಡಿದ್ದು, ಸರ್ಕಾರ ರಚನೆ ಮಾಡುವ ಕಸರತ್ತು ಆರಂಭಿಸಿದೆ. ಕಾಂಗ್ರೆಸ್‌ನ ಈ ಗೆಲುವಿಗೆ ಅನೇಕ ಮುಖಂಡರು ಕಾರಣವಾಗಿದ್ದಾರೆ, ಆದರೆ ಕಾಣದ ಕೈಗಳು ಈ ಜಯದ ಹಿಂದೆ ಸಾಕಷ್ಟು ಕೆಲಸ ಮಾಡಿವೆ.
ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ರಣತಂತ್ರ ರೂಪಿಸಿದ್ದು ಚುನಾವಣಾ ಚಾಣಾಕ್ಷ ಸುನಿಲ್ ಕಾನುಗೋಲು ಮತ್ತು ಅವರ ತಂಡ. ಬಿಜೆಪಿ ವಿರುದ್ಧದ ಪೇಸಿಎಂ ಅಭಿಯಾನದ ಹಿಂದೆ ಇದ್ದದ್ದು ಕೂಡ ಇದೇ ಸುನಿಲ್ ಕಾನುಗೋಲು ಎನ್ನಲಾಗಿದೆ. 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇವರು ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎನ್ನುವ ನಿಟ್ಟಿನಲ್ಲಿ ಕಳೆದ ಎಂಟು ತಿಂಗಳಿನಿಂದಲೇ ತಯಾರಿ ಆರಂಭಿಸಲಾಗಿತ್ತು. ಸರಿಯಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿ, ರಾಜ್ಯದಲ್ಲಿ ಎಂಟು ತಿಂಗಳಿನಲ್ಲಿ ಐದು ಸಮೀಕ್ಷೆಯನ್ನು ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
"ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಸುನೀಲ್ ಕಾನುಗೋಲು ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಅಂತಹ ಸಮೀಕ್ಷೆಗಳ ಆಧಾರದ ಮೇಲೆ 70 ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತವಾಗಿತ್ತು, ಅದರಂತೆ ಎಐಸಿಸಿ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ವೀಕ್ಷಕರನ್ನು ನಿಯೋಜಿಸಲಾಗಿದೆ" ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
2022ರ ಮೇ ತಿಂಗಳಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸುನಿಲ್ ಕಾನುಗೋಲು ಅವರನ್ನು 2024 ರ ಲೋಕಸಭಾ ಚುನಾವಣಾ ಕಾರ್ಯಪಡೆಯ ಸದಸ್ಯರನ್ನಾಗಿ ಹೆಸರಿಸಿದ್ದರು, ಈ ತಂಡದಲ್ಲಿ ಹಿರಿಯ ನಾಯಕರಾದ ಪಿ ಚಿದಂಬರಂ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ ಸಿ ವೇಣುಗೋಪಾಲ್, ಅಜಯ್ ಮಾಕನ್, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಣದೀಪ್ ಸಿಂಗ್ ಇದ್ದಾರೆ. ಕರ್ನಾಟಕ ಉಸ್ತುವಾರಿ ಎಐಸಿಸಿ ನಾಯಕರಾಗಿದ್ದ ಸುರ್ಜೇವಾಲಾ ಇದ್ದಾರೆ.

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲು ನಿರಾಕರಿಸಿದ ನಂತರ ಕಾನುಗೋಲು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡರು. ಸುನಿಲ್ ಕಾನುಗೋಲು ಕಾರ್ಯವೈಖರಿ ಕೂಡ ವಿಭಿನ್ನವಾಗಿರುತ್ತದೆ, ಅವರು ಪ್ರಚಾರವನ್ನು ಬಯಸದ, ಏಕಾಂತವಾಗಿರುವ ವ್ಯಕ್ತಿ, ಅಚ್ಚರಿ ಎಂದರೆ ಅವರು ಯಾವ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿಲ್ಲ, ಮುನ್ನಲೆಗೆ ಬರದೆ ಬರೀ ಹಿನ್ನಲೆಯಲ್ಲಿ ಕೆಲಸ ಮಾಡುವ ತಂತ್ರಜ್ಞ.
ತಮಿಳುನಾಡು ರಾಜಕಾರಣದಲ್ಲಿ ಕೆಲಸ
ಸುನಿಲ್ ಕಾನುಗೋಲು 2016ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿದೆ ಗಿ ಡಿಎಂಕೆ ಮುಖ್ಯಸ್ಥ ಮತ್ತು ಪ್ರಸ್ತುತ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ "ನಮಕ್ಕು ನಾಮೆ" ಅಭಿಯಾನವನ್ನು ವಿನ್ಯಾಸಗೊಳಿಸುವಲ್ಲಿ ಕೆಲಸ ಮಾಡಿದ್ದರು. ಇದು ಸಾಕಷ್ಟು ಯಶಸ್ವಿಯಾಗಿದ್ದರೂ, ಡಿಎಂಕೆ ಗೆಲುವು ಸಾಧಿಸುವಲ್ಲಿ ವಿಫಲಾಯಿತು, ಮತಗಳು ವಿಭಜನೆಯಾದ ಕಾರಣ ಎಐಎಡಿಎಂಕೆ ಅಧಿಕಾರವನ್ನು ಉಳಿಸಿಕೊಂಡರೂ, ಸ್ಟಾಲಿನ್ ನಾಯಕನಾಗಿ ಹೊರಹೊಮ್ಮಿದರು.
ತಮಿಳುನಾಡಿನಲ್ಲಿ ಕೆಲಸ ಮಾಡಿದ ನಂತರ, ಸುನಿಲ್ ಕಾನುಗೋಲು ಫೆಬ್ರವರಿ 2018ರವರೆಗೆ ದೆಹಲಿಯಲ್ಲಿ ಅಮಿತ್ ಶಾ ಜೊತೆ ಕೆಲಸ ಮಾಡಿದ್ದರು. 2018ರಲ್ಲಿ 300 ಜನರ ತಂಡವನ್ನು ಕಟ್ಟಿಕೊಂಡು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಕರ್ನಾಟಕ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಯಶಸ್ವಿ ಕ್ಯಾಂಪೈನ್ ರೂಪಿಸಿದ್ದರು.
2019 ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಪಾಳಯಕ್ಕೆ ಮರಳಿದ ಅವರು ಲೋಕಸಭಾ ಚುನಾವಣೆಯಲ್ಲಿ 39 ಸಂಸದೀಯ ಕ್ಷೇತ್ರಗಳಲ್ಲಿ 38 ಅನ್ನು ಗೆಲ್ಲಲು ಸಹಾಯ ಮಾಡಿದರು. ಆದರೆ ಸ್ಟಾಲಿನ್ ಕಿಶೋರ್ ಅವರ ಸಹಾಯ ಕೇಳಿದ ನಂತರ, 2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮೊದಲು ಅಲ್ಲಿಂದ ಹೊರಬಂದರು. ನಂತರ ಎಐಎಡಿಎಂಕೆಗೆ ಕೆಲಸ ಮಾಡಿದರು.
ಕರ್ನಾಟಕದಲ್ಲಿ ಪರಿಣಾಮಕಾರಿ ಕೆಲಸ
ನಂತರ ಕಾಂಗ್ರೆಸ್ ಕರ್ನಾಟಕ ಚುನಾವಣೆಗಾಗಿ ಸುನಿಲ್ ಕಾನುಗೋಲು ಕಂಪನಿ ಮೈಂಡ್‌ಶೇರ್ ಅನಾಲಿಟಿಕ್ಸ್ ಅನ್ನು ನೇಮಿಸಿಕೊಂಡಿತು. ಕಾಂಗ್ರೆಸ್ ಇವರನ್ನು ನೇಮಿಸಿಕೊಳ್ಳಲು ಮುಖ್ಯಕಾರಣ, ಅವರು ಹೊರಜಗತ್ತಿಗೆ ಅಷ್ಟಾಗಿ ಪರಿಚಯ ಇಲ್ಲದೇ ಇರುವುದು.
ರಾಜ್ಯದಲ್ಲಿ ಬಿಜೆಪಿಯ ಎಲ್ಲಾ ತಂತ್ರಗಳಿಗೆ ಪ್ರತಿ ತಂತ್ರ ರೂಪಿಸುವ ಹಿಂದಿನ ಮಾಸ್ಟರ್ ಮೈಂಡ್ ಸುನಿಲ್ ಕಾನುಗೋಲು ಅವರದ್ದು ಎನ್ನಲಾಗಿದೆ. ಮುಖ್ಯವಾಗಿ, ಯಾವ ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸಿತ್ತೋ, ಅದೇ ಸಾಮಾಜಿಕ ಮಾಧ್ಯವನ್ನು ಬಳಸಿಕೊಂಡು ಈ ಬಾರಿ ಬಿಜೆಪಿಯನ್ನು ಹಣಿಯಲಾಗಿದೆ. ಕಾಂಗ್ರೆಸ್ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಲು ನಿರ್ಧರಿಸಿ, ತುಂಬಾ ಅಗ್ರೆಸಿವ್ ಆಗಿಯೇ ಸಾಮಾಜಿಕ ಮಾಧ್ಯಮ ಮತ್ತು ಗ್ರೌಂಡ್‌ನಲ್ಲೂ ಪ್ರಚಾರ ಮಾಡಿತ್ತು.












Click it and Unblock the Notifications