ರೆಬಲ್ ಶಾಸಕರಿಗೆ ವಿಪ್ ಜಾರಿ ವಿಚಾರ : ಸುಪ್ರೀಂಗೆ ಮೆಟ್ಟಿಲೇರಿದ ಕಾಂಗ್ರೆಸ್
Recommended Video
ಬೆಂಗಳೂರು, ಜುಲೈ 19 : ಶಾಸಕರಿಗೆ ವಿಪ್ ಜಾರಿ ವಿಚಾರದಲ್ಲಿ ಗೊಂದಲವಿದ್ದು ಅದನ್ನು ಬಗೆಹರಿಸಿ ಎಂದು ಕರ್ನಾಟಕ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ವಿಪ್ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು.
ಶುಕ್ರವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ರೆಬಲ್ ಶಾಸಕರಿಗೆ ವಿಪ್ ಜಾರಿ ವಿಚಾರದಲ್ಲಿ ಇರುವ ಗೊಂದಲ ಬಗೆಹರಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಗುರುವಾರ ವಿಶ್ವಾಸಮತಯಾಚನೆ ಚರ್ಚೆಯ ಮೇಲೆ ಮಾತನಾಡಿದ್ದ ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ, "ಶಾಸಕಾಂಗ ಪಕ್ಷದ ನಾಯಕನಾಗಿ ನಮ್ಮ ಸದಸ್ಯರಿಗೆ ವಿಪ್ ನೀಡುವ ನನ್ನ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಗೊಂದಲ ಇದೆ. ಇದು ಸ್ಪಷ್ಟವಾಗುವ ವರೆಗೆ ಮುಖ್ಯಮಂತ್ರಿಗಳು ವಿಶ್ವಾಸಮತ ಮಂಡನೆಯನ್ನು ಮುಂದೂಡಬೇಕು" ಎಂದು ಮವಿ ಮಾಡಿದ್ದರು.
ಸದನದಲ್ಲಿ ಸಿದ್ದರಾಮಯ್ಯ ಎತ್ತಿದ ಪ್ರಶ್ನೆಗೆ ಉತ್ತರ ನೀಡಿದ್ದ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಈ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದರು. ಗುರುವಾರ ಮಧ್ಯಾಹ್ನ ಅವರು ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರ ಜೊತೆ ವಿವರವಾದ ಚರ್ಚೆಯನ್ನು ನಡೆಸಿದ್ದರು....

ಸಿದ್ದರಾಮಯ್ಯ ಎತ್ತಿದ ಪ್ರಶ್ನೆ ಏನು?
ಗುರುವಾರದ ಕಲಾಪದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, "ಸನದಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಪಕ್ಷದಿಂದ ವಿಪ್ ನೀಡಲಾಗಿದೆ. ಆದರೆ, 15 ಶಾಸಕರು ಸದನಕ್ಕೆ ಹಾಜರಾಗಬೇಕು ಎಂದು ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹಾಗಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗಿದೆಯೇ?' ಎಂದು ಪ್ರಶ್ನಸಿದ್ದರು.

ಪ್ರತಿವಾದಿಯನ್ನಾಗಿ ಮಾಡಿಲ್ಲ
"15 ರೆಬಲ್ ಶಾಸಕರು ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ, ವಿಧಾನಸಭೆಯ ಅಧ್ಯಕ್ಷರು ಹಾಗೂ ಕೇಂದ್ರ ಸರ್ಕಾರವನ್ನು ಪ್ರತಿವಾದಿಯಾಗಿ ಮಾಡಲಾಗಿದೆ. ಆದರೆ, 12 ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷದ ಸೂಚನೆಯಂತೆ ಅವರು ನಡೆದುಕೊಳ್ಳಬೇಕು. ಆದರೆ, ನಮ್ಮನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ" ಎಂದು ಸಿದ್ದರಾಮಯ್ಯ ಕಲಾಪದಲ್ಲಿ ಹೇಳಿದ್ದರು.

ಯಡಿಯೂರಪ್ಪಗೆ ತಿರುಗೇಟು
ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ, "ಈ ವಿಚಾರವನ್ನು ಸದನದಲ್ಲಿ ಏಕೆ ಪ್ರಶ್ನೆ ಮಾಡುತ್ತೀರಿ. ಸುಪ್ರೀಂನಲ್ಲಿ ಪ್ರಶ್ನಿಸಿ" ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದರು.
"ಇದು ನಮ್ಮ ಹಾಗೂ ಜೆಡಿಎಸ್ ಪಕ್ಷಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ. ನಾಳೆ ನಿಮ್ಮ ಪಕ್ಷಕ್ಕೂ ಅನ್ವಯವಾಗುತ್ತದೆ" ಎಂದು ಸಿದ್ದರಾಮಯ್ಯ ಹೇಳಿದ್ದರು.

ಸ್ಪೀಕರ್ ಏನು ಹೇಳಿದ್ದರು?
ಈ ಚರ್ಚೆಯ ಕುರಿತು ಪ್ರತಿಕ್ರಿಯೆ ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್, "ಕಲಾಪಕ್ಕೆ ಹಾಜರಾಗುವಂತೆ ತಮ್ಮ ಸದಸ್ಯರಿಗೆ ಶಾಸಕಾಂಗ ಪಕ್ಷದ ನಾಯಕರು ವಿಪ್ ಕೊಡುತ್ತಾರೆ. ಅದನ್ನು ಉಲ್ಲಂಘನೆ ಮಾಡಿದರೆ ನನಗೆ ದೂರು ಕೊಡುತ್ತಾರೆ. ಆಗ ಈ ವಿಷಯ ನನ್ನ ವ್ಯಾಪ್ತಿಗೆ ಬರುತ್ತದೆ. ನೀವು ಎತ್ತಿದ ವಿಚಾರದ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ" ಎಂದು ಹೇಳಿದ್ದರು.












Click it and Unblock the Notifications