BY Vijayendra: 'ವರುಣಾ ಅಥವಾ ಶಿಕಾರಿಪುರ ನಿಮ್ಮ ಆಯ್ಕೆ ಯಾವುದಿತ್ತು' ಎನ್ನುವ ಪ್ರಶ್ನೆಗೆ ವಿಜಯೇಂದ್ರ ಉತ್ತರ ಹೀಗಿತ್ತು
ಕರ್ನಾಟಕ ಬಿಜೆಪಿಯ ವರ್ಚಸ್ವೀ ನಾಯಕರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಕೂಡಾ. ಯಾವುದೇ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸದಿದ್ದರೂ, ಪಕ್ಷಕ್ಕೆ ಕ್ಷೇತ್ರ ಗೆಲ್ಲಿಸಿಕೊಟ್ಟ ಕೀರ್ತಿ ವಿಜಯೇಂದ್ರ ಅವರದ್ದು. ನೆಲೆಯಿಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬಾವುಟ (ಕೆ.ಆರ್.ಪೇಟೆ, ಶಿರಾ) ಹಾರುವಂತೆ ವಿಜಯೇಂದ್ರ ಮಾಡಿದ್ದರು.
ಈಗ ಅಧಿಕೃತವಾಗಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸುತ್ತಿದ್ದಾರೆ. ವಿಜಯೇಂದ್ರ ಉಮೇದುವಾರಿಕೆಯ ವಿಚಾರದಲ್ಲಿ ಹಿಂದೆಯೇ ಯಡಿಯೂರಪ್ಪ ಘೋಷಿಸಿದ್ದರು. ಇದು ಪಕ್ಷದ ಕೆಲವು ಹಿರಿಯ ಮುಖಂಡರಿಗೆ ಪಥ್ಯವಾಗಿರಲಿಲ್ಲ ಎನ್ನುವುದು ಗೊತ್ತಿರುವ ವಿಚಾರ. 47ವರ್ಷದ ವಿಜಯೇಂದ್ರ ಎಂಟು ಬಾರಿ ತನ್ನ ತಂದೆ ಗೆದ್ದಿದ್ದ ಶಿಕಾರಿಪುರದಿಂದ ಕಣಕ್ಕಿಳಿದಿದ್ದಾರೆ.

ವಿಜಯೇಂದ್ರ ಪ್ರಚಾರಕ್ಕೆ ಹೋದಾಗಲೆಲ್ಲಾ ವಿಜಯೇಂದ್ರ ಭವಿಷ್ಯದ ಮುಖ್ಯಮಂತ್ರಿ ಘೋಷಣೆ ಕೇಳಿ ಬರುತ್ತದೆ. ಹಿಂದೂ ಪತ್ರಿಕೆಗೆ ವಿಜಯೇಂದ್ರ ನೀಡಿದ್ದ ಸಂದರ್ಶನದ ಆಯ್ದ ಪ್ರಶ್ನೋತ್ತರ ಹೀಗಿದೆ.
ಪ್ರ: ನಿಮ್ಮ ತಂದೆ ಪ್ರತಿನಿಧಿಸುತ್ತಿದ್ದ ಶಿಕಾರಿಪುರದಲ್ಲೇ ಯಾಕೆ ಸ್ಪರ್ಧಿಸುತ್ತಿದ್ದೀರಿ, ಸೇಫ್ ಎನ್ನವ ಕಾರಣಕ್ಕಾಗಿಯಾ?
ವಿಜಯೇಂದ್ರ: ಶಿಕಾರಿಪುರದಿಂದ ಸ್ಪರ್ಧಿಸುವುದು ನನ್ನ ತೀರ್ಮಾನವಾಗಿರಲಿಲ್ಲ. ನನ್ನ ತಂದೆ ಇದನ್ನು ಘೋಷಿಸಿದ್ದರು ಮತ್ತು ಹೈಕಮಾಂಡ್ ನಿರ್ಧಾರವೂ ಇದೇ ಆಗಿತ್ತು. ನಲವತ್ತು ವರ್ಷದಿಂದ ನನ್ನ ತಂದೆಗೆ ಶಿಕಾರಿಪುರದ ಜನತೆ ಆಶೀರ್ವದಿಸುತ್ತಾ ಬರುತ್ತಿದ್ದಾರೆ. ಅವರ ಸೇವೆ ಮಾಡುವುದು ನನ್ನ ಕರ್ತವ್ಯ ಕೂಡಾ..

ಪ್ರ: ಶಿಕಾರಿಪುರ ಮತ್ತು ವರುಣಾ ಕ್ಷೇತ್ರದ ಆಯ್ಕೆ ನಿಮಗೆ ಬಿಟ್ಟಿದ್ದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ?
ವಿಜಯೇಂದ್ರ: ನಾನೀಗ ಶಿಕಾರಿಪುರದ ಅಭ್ಯರ್ಥಿ, ಹಾಗಾಗಿ ಈ ಪ್ರಶ್ನೆ ಉದ್ಭವವಾಗುವುದಿಲ್ಲ. ಆದರೂ, ನಾನು ಹಳೇ ಮೈಸೂರು ಭಾಗದಿಂದ ಸ್ಪರ್ಧಿಸಲು ಬಯಸಿದ್ದೆ. ನಾನು ಕ್ಷೇತ್ರ ಗೆಲ್ಲಬೇಕು ಎನ್ನುವುದಕ್ಕಿಂತ, ನನ್ನ ಸ್ಪರ್ಧೆಯಿಂದ ಪಕ್ಷಕ್ಕೆ ಹೆಚ್ಚು ಲಾಭವಾಗಲಿ ಎನ್ನುವುದು ನನ್ನ ಉದ್ದೇಶ. ಇದು ನನ್ನ ಹಾಗೇ, ನನ್ನ ಪಕ್ಷದ ಕೆಲವರ ಅಭಿಪ್ರಾಯ ಕೂಡಾ ಆಗಿತ್ತು.
ಪ್ರ: ನಿಮ್ಮ ಮೆರವಣಿಗೆಯಲ್ಲಿ ಬಹಳಷ್ಟು ಮುಸ್ಲಿಂ ಮಹಿಳೆಯರು ಇದ್ದರು. ಆದರೆ, ನಿಮ್ಮ ಪಕ್ಷದ ಕೆಲವರು ಮುಸ್ಲಿಮರ ಬೆಂಬಲ ಬೇಕಾಗಿಲ್ಲ ಅಂತ ಹೇಳುತ್ತಾರಲ್ವಾ?
ವಿಜಯೇಂದ್ರ : ಪಕ್ಷದ ನಿಲುವು ಏನಿದೆಯೋ, ಅದು ನನ್ನ ನಿಲುವು ಕೂಡಾ. ಸಭ್ ಕೆ ಸಾಥ್, ಸಭ್ ಕಾ ವಿಶ್ವಾಸ್, ಸಭ್ ಕಾ ಪ್ರಯಾಸ್. ನನ್ನ ತಂದೆಯವರೂ ಅದನ್ನು ನಂಬುವವರು ಕೂಡಾ.. 2008ರಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಮ್ತಾಜ್ ಆಲಿ ಖಾನ್ ಅವರನ್ನು ಯಡಿಯೂರಪ್ಪನವರು ಸಚಿವರನ್ನಾಗಿ ಮಾಡಿದ್ದರು.
ನನ್ನ ತಂದೆ ಮುಸ್ಲಿಮರನ್ನು ಸಹೋದರರಂತೆ ಕಾಣುತ್ತಾರೆ, ಮಸೀದಿ ದರ್ಗಾಗಳಿಗೆ ಹಣ ಮಂಜೂರು ಮಾಡಿದ್ದರು. ಅಲ್ಪಸಂಖ್ಯಾತರ ಜೊತೆ ಯಡಿಯೂರಪ್ಪ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ನಾನು ಕೂಡಾ ಅದೇ ಹಾದಿಯಲ್ಲಿ ಸಾಗುತ್ತಿದ್ದೇನೆ. ಅದು ಅಭಿವೃದ್ದಿಯ ವಿಚಾರವಾಗಲಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಾಗಿರಬಹುದು.
ನಾನು ಮತ್ತು ನನ್ನ ತಂದೆ ಇಂತಹ ರಾಜಕೀಯದಲ್ಲಿ ನಂಬಿಕೆ ಇಟ್ಟೂಕೊಂಡವರು. ಕೆಲವು ನಮ್ಮ ನಾಯಕರು ಅಲ್ಪಸಂಖ್ಯಾತರ ಬಗ್ಗೆ ಹೇಳಿಕೆ ನೀಡಿದ್ದು ಹೌದು. ಆದರೆ, ಮೋದಿಯವರ ಕನಸಿನಂತೆ ನಾವು ನಡೆದುಕೊಳ್ಳುತ್ತೇವೆ.
ಪ್ರ: ನಿಮ್ಮ ತಂದೆಯವರು ಸಿಎಂ ಆಗಿದ್ದಾಗ, ಆಡಳಿತದಲ್ಲಿ ಮೂಗು ತೂರಿಸುತ್ತೀರಿ ಎನ್ನುವ ಆಪಾದನೆ ಇತ್ತಲ್ಲವೇ?
ವಿಜಯೇಂದ್ರ : ಆಪಾದನೆ ರಾಜಕಾರಣದಲ್ಲಿ ಮಾಮೂಲಿ, ಜೊತೆಗೆ, ಸಿಎಂ ಮಗನ ಮೇಲೆ ಆಪಾದನೆ ಮಾಡುವುದು ಇನ್ನಷ್ಟು ಸುಲಭ. ಬೇರೆ ಬೇರೆ ಕಾರಣಗಳಿಗೆ ಆಪಾದನೆಗಳು ಎದುರಾಗುತ್ತವೆ. ನನ್ನ ತಂದೆ ಸಿಎಂ ಆಗಿದ್ದ ವೇಳೆ ಸರಕಾರ ಮತ್ತು ಪಕ್ಷದ ಮಧ್ಯೆ ನಾನು ಸೇತುವೆ ರೀತಿಯಲ್ಲಿ ಕೆಲಸವನ್ನು ನಿರ್ವಹಿಸಿದ್ದೆ.
ಪ್ರ: ಶಿಕಾರಿಪುರದಲ್ಲಿ ಜನರು ನಿಮ್ಮನ್ನು ಭವಿಷ್ಯದ ಸಿಎಂ ಎಂದು ಘೋಷಿಸುತ್ತಾರಲ್ವಾ?
ವಿಜಯೇಂದ್ರ: ಬರೀ ಶಿಕಾರಿಪುರದಲ್ಲಿ ಮಾತ್ರವಲ್ಲ, ರಾಜ್ಯದ ಬೇರೆ ಕಡೆ ಕೂಡಾ ಈ ರೀತಿ ಜನ ಘೋಷಣೆ ಕೂಗುತ್ತಾರೆ. ಆದರೆ, ನಾನು ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೇ ಮುಂದಕ್ಕೆ ಸಾಗುತ್ತೇನೆ.












Click it and Unblock the Notifications