ಕರ್ನಾಟಕದಲ್ಲಿ ಅಕಾರಣ ಸಾವುಗಳಿಗೆ ಕೊನೆ ಯಾವಾಗ: ರಾಜಾರಾಂ ತಲ್ಲೂರು ಬರಹ
ಕರ್ನಾಟಕದಲ್ಲಿ ಅಕಾಲಿಕವಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಈ ಅಕಾರಣ ಸಾವುಗಳ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಇನ್ನು ಕರ್ನಾಟಕದಲ್ಲಿ ಹಠತಾ ಆಗಿ ಕುಸಿದು ಬಿದ್ದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳ / ಹೃದಯಾಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಹ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಬೆಳಗ್ಗೆ ಉಡುಪಿಯಲ್ಲಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ಕುಂದಾಪುರ ಗ್ರಾಮಾಂತರ ಸಬ್ ಇನ್ಸ್‌ಪೆಕ್ಟರ್ ನಾಸಿರ್ ಹುಸೇನ್ (58) ಅವರು ಹಠಾತ್ ಆಗಿ ಕುಸಿದು ಬಿದ್ದು ತೀರಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿದೆ. ನಿಜಕ್ಕೂ ಬೇಸರವಾಯಿತು. ಛೇ. ಈ ವಾರದಲ್ಲೇ ಕರಾವಳಿಯಲ್ಲಿದು ಐದನೆಯದೋ-ಆರನೆಯದೋ ಹಠಾತ್ ಸಾವಿನ ಸುದ್ದಿ.

ಇಂತಹ ಅಕಾಲಿಕ ಸಾವಿನ ಸಂಗತಿಗಳು, ಅದೂ ಪೊಲೀಸ್ ಇಲಾಖೆಯಂತಹ ಫಿಟ್‌ನೆಸ್ ಇರುವ ವ್ಯಕ್ತಿಗಳಿಗೆ ಹೀಗಾದಾಗ ಜನಸಾಮಾನ್ಯರಲ್ಲಿ ಮತ್ತಷ್ಟು ಆತಂಕಕ್ಕೆ ಇದು ಕಾರಣ ಆಗುತ್ತದೆ. ಇಂತಹ ಘಟನೆ ಇದು ಮೊದಲೂ ಅಲ್ಲ, ಕಡೆಯದೂ ಅಲ್ಲ. ಆದರೆ, ಜನರ ಜೀವಗಳ ಕುರಿತು ಜವಾಬ್ದಾರಿ ಇರದ ಸರ್ಕಾರಗಳು, ಕೇವಲ ಬಾಯುಪಚಾರದ ಮಾತುಗಳನ್ನಾಡಿ ಹೀಗೆ ಕಣ್ಣು,ಕಿವಿ, ಬಾಯಿ ಮುಚ್ಚಿ ಕುಳಿತಿರುವುದು ತೀರಾ ಅನೈತಿಕ ಎನ್ನುತ್ತಾರೆ ರಾಜಾರಾಂ ತಲ್ಲೂರು ಅವರು.
ಜನರ ಜೀವ ರಕ್ಷಣೆಗೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳಿ ಐದಾರು ತಿಂಗಳಾಯಿತು. ಎಷ್ಟು ಜೀವ ರಕ್ಷಿಸಿದಿರಿ, ಏನೆಲ್ಲ ಮಾಡಿದಿರಿ, ಈಗ ನಡೆಯುತ್ತಿರುವ ಈ ಮಾರಣ ಹೋಮಕ್ಕೆ ಹೊಣೆ ಯಾರು, ಯಾರಲ್ಲಿ ಕೇಳೋಣ... ರಾಜಕೀಯಸ್ಥರು ಎಲ್ಲರೂ ಒಂದೇ ದೋಣಿ ಹತ್ತಿ ಹೊರಟಂತಿದೆ.
ನಮಗೆ ನಮ್ಮ ಅಸಹಾಯಕತೆಯ ಬಗ್ಗೆಯೇ ನಾಚಿಕೆ ಆಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು
ಇತ್ತೀಚಿನ ದಿನಗಳಲ್ಲಿ ಯುವಕರು ಹಾಗೂ ಮಧ್ಯವಯಸ್ಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಇದನ್ನು ಎದುರಿಸಲು ನಮ್ಮ ಸರ್ಕಾರ ಅಪ್ಪು ಅವರ ಸ್ಮರಣಾರ್ಥ ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಹೃದಯಾಘಾತದ ಮೊದಲ ಒಂದು ಗಂಟೆ 'ಗೋಲ್ಡನ್ ಅವರ್' ಅತ್ಯಂತ ಮಹತ್ವದದ್ದು. ಇದಕ್ಕಾಗಿ ರಾಜ್ಯದಾದ್ಯಂತ 10 ಹಬ್ ಮತ್ತು 86 ಸ್ಪೋಕ್ ಸರ್ಕಾರಿ ಆಸ್ಪತ್ರೆಗಳ ಜಾಲ ನಿರ್ಮಿಸಲಾಗಿದೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಉಚಿತ ಇಸಿಜಿ ಪರೀಕ್ಷೆಗಳನ್ನು ನಡೆಸಲಾಗಿದ್ದು, 13,000ಕ್ಕೂ ಹೆಚ್ಚು ಜೀವಗಳನ್ನು ಉಳಿಸಿರುವ ನೆಮ್ಮದಿಯನ್ನು ಈ ಯೋಜನೆ ನೀಡಿದೆ.
ಸುಮಾರು 25,000 ರೂಪಾಯಿ ಮೌಲ್ಯದ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ಲಭ್ಯವಿದೆ. ಯಾರೇ ಆಗಿದ್ದರೂ ಸಹ ಹೃದಯ ಸಂಬಂಧಿ ರೋಗ ಲಕ್ಷಣಗಳು ಕಂಡುಬಂದರೆ ವಿಳಂಬ ಮಾಡದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಆರೋಗ್ಯಕರ ಜೀವನಶೈಲಿ ಮತ್ತು ಒತ್ತಡರಹಿತ ಬದುಕು ರೂಢಿಸಿಕೊಳ್ಳಿ ಎಂದು ಹೇಳಿದ್ದಾರೆ.
ನೆಟ್ಟಿಗರು ಹೇಳಿದ್ದೇನು ?
ಇನ್ನು ಈ ವಿಚಾರಕ್ಕೆ ಹಲವು ನೆಟ್ಟಿಗರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿರಿಧರ್ ಕಾರ್ಕಳ ಎನ್ನುವವರು ಜವಾಬ್ದಾರಿ ಮರೆತ ಸರ್ಕಾರಗಳು ಏನೇನೋ ತಿಪ್ಪೆ ಸಾರಿಸುವ ಹೇಳಿಕೆ ನೀಡಿ ಕೈತೊಳೆದುಕೊಳ್ಳುತ್ತವೆ ಅಷ್ಟೇ ಎಂದಿದ್ದಾರೆ. ಪ್ರಸನ್ನ ಎನ್ನುವವರು, ಸುಮಾರು ನಾಲ್ಕು ಮುಕ್ಕಾಲು ಕಿಲೋ ಮೀಟರ್ ಓಡಿದರಂತೆ. ಕೊನೆಯ ಹಂತದಲ್ಲಿ ಹಠಾತ್ತಾಗಿ ಕುಸಿದು ಬಿದ್ದರಂತೆ. ಅತಿಯಾದ ಹೃದಯ ಬಡಿತ ಕಾರಣ ಆಗಿರಬಹುದು ಎಂದು ಹೇಳಿದ್ದಾರೆ. ಕೋವಿಡ್ ವ್ಯಾಕ್ಸಿನ್ ಪರಿಣಾಮ ಇನ್ನೂ ಹೆಚ್ಚಿನ ಸಾವುಗಳ ತರಬಹುದು ಹಾಗೂ ಮುಂದುವರಿಯಬಹುದು. ಸರ್ಕಾರಗಳ ಬೇಜವಾಬ್ದಾರಿತನಗಳು ಇವಕ್ಕೆ ಕಾರಣ ಕನಿಷ್ಟ ಇಂತಹ ಅನ್ಯಾಯದ ಸಾವುಗಳ ತಡೆಯಲು ಇರುವ ಕ್ರಮಗಳನ್ನು ಅರೋಗ್ಯ ಇಲಾಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications