Lok Sabha Election 2024: ಲೋಕ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಏನಾಗಬಹುದು?
ಬೆಂಗಳೂರು, ಮೇ 15: ಕಳೆದ ಬಾರಿ ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಿತ್ತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಆಪರೇಷನ್ ಕಮಲಕ್ಕೆ ಕಳಚಿ ಬಿದ್ದಿತ್ತು. ಈ ಬಾರಿ ಅಂತಹದೊಂದು ರಾಜಕೀಯ ವಿಪ್ಲವ ನಡೆಯುತ್ತಾ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳಲಾರಂಭಿಸಿವೆ. ದೊಡ್ಡ ರೀತಿಯಲ್ಲಿ ಬದಲಾವಣೆಗಳು ಆಗದಿದ್ದರೂ ಪಕ್ಷಾಂತರಗಳು ನಡೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಲೋಕಸಭಾ ಚುನಾವಣೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳಿಗೂ ಬಹುಮುಖ್ಯವಾಗಿದೆ. ಅದರಲ್ಲೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಮುಂದಿನ ರಾಜಕೀಯದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಸಿದ್ದರಾಮಯ್ಯ ಗ್ಯಾರಂಟಿನಾ ಅಥವಾ ಮೋದಿ ಗ್ಯಾರಂಟಿನಾ ರಾಜ್ಯದಲ್ಲಿ ಗೆಲ್ಲೋದು ಎಂಬುದು ಗೊತ್ತಾಗಬೇಕಾದರೆ ಈ ಚುನಾವಣೆಯ ಫಲಿತಾಂಶವನ್ನು ನೋಡಬೇಕಾಗಿದೆ.

ಚುನಾವಣೆ ಸಂದರ್ಭ ರಾಜ್ಯಕ್ಕೆ ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ ಬಂದು ಹೋಗಿದ್ದಾರೆ. ಹಲವು ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಈ ವೇಳೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತಾ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಒಂದಷ್ಟು ಬದಲಾವಣೆ ಮಾಡಿದೆ. ಕಳೆದ ಬಾರಿ ಆಯ್ಕೆಯಾಗಿದ್ದ ಸಂಸದರನ್ನು ಬದಲಾಯಿಸಿ ಹೊಸ ಮುಖಗಳಿಗೆ ನೀಡಲಾಗಿದೆ.
ಆಪರೇಷನ್ ಕಮಲ ನಡೆಸೋದು ಸುಲಭನಾ?
ಕಳೆದ ವಿಧಾನಸಭಾ ಚುನಾವಣೆ ವೇಳೆ ಮಾಡಿದ ಕೆಲವೊಂದು ಎಡವಟ್ಟುಗಳು ಬಿಜೆಪಿಗೆ ಮುಳುವಾಗಿತ್ತು. ಅದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುಂದುವರೆಯುತ್ತಾ ಗೊತ್ತಿಲ್ಲ. ಆದರೆ ಬಿಜೆಪಿ ಮಾತ್ರ ಇಪ್ಪತ್ತಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಮಂತ್ರವನ್ನು ಜಪಿಸುತ್ತಿದೆ. ಇದರ ನಡುವೆ ಪಕ್ಷದೊಳಗೆ ಎಲ್ಲವೂ ಸರಿಯಿದೆ ಎಂದು ಹೇಳುವ ಪರಿಸ್ಥಿತಿಯಲ್ಲಿ ಪಕ್ಷದ ನಾಯಕರಿಲ್ಲ. ಕೆಲವು ಕ್ಷೇತ್ರಗಳಲ್ಲಿ ಮೊದಲಿನ ಜನಪ್ರಿಯತೆ ಕಳೆದು ಹೋಗಿದೆ.
ಇದೆಲ್ಲದರ ನಡುವೆ ಈಗಾಗಲೇ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತದೆ ಎಂಬ ಸುಳಿವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ತಳ್ಳಿಹಾಕುತ್ತಿದ್ದಾರೆ. ಇಷ್ಟಕ್ಕೂ 135ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಬೇಕಾದರೆ ಕನಿಷ್ಟ 30 ಶಾಸಕರಾದರೂ ಬೇಕಾಗುತ್ತದೆ. ಅಷ್ಟೊಂದು ಶಾಸಕರು ಪಕ್ಷವನ್ನು ಬಿಟ್ಟು ಬರುತ್ತಾರಾ? ಸದ್ಯಕ್ಕೆ ಇದೊಂದು ಪ್ರಶ್ನೆಯಾಗಿ ಉಳಿಯುತ್ತಿದೆ.

ರಾಜ್ಯ ರಾಜಕೀಯದಲ್ಲಿ ಪರಿಣಾಮ ಬೀರುತ್ತಾ?
ಈ ವಿಚಾರಕ್ಕೆ ಸಂಬಂಧಿಸಿದಂತೆ ಇದು ಬಿಜೆಪಿಯ ಪಾಲಿಗೆ ಹಗಲು ಕನಸು ಎಂದು ಕಾಂಗ್ರೆಸ್ ನಾಯಕರು ತಳ್ಳಿಹಾಕಿದ್ದಾರೆ. ಮೇಲ್ನೋಟಕ್ಕೆ ಇದು ನಿಜವೂ ಹೌದು. ಆದರೆ ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದನ್ನು ಇದುವರೆಗಿನ ರಾಜಕೀಯ ಬೆಳವಣಿಗೆಗಳು ತೋರಿಸಿಕೊಟ್ಟಿವೆ. ಹೀಗಾಗಿ ಯಾವುದನ್ನೂ ತಳ್ಳಿಹಾಕಲಾಗದು. ಬಿಜೆಪಿ ಒಳಗಿನಿಂದ ಏನೆಲ್ಲ ತಂತ್ರಗಳನ್ನು ರೂಪಿಸುತ್ತಿದೆಯೋ ಗೊತ್ತಿಲ್ಲ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮಾತ್ರ ಕೈಕಟ್ಟಿ ಕುಳಿತಿಲ್ಲ.
ರಾಜ್ಯದಲ್ಲೀಗ ಕಾಂಗ್ರೆಸ್ ಉತ್ತಮ ಸ್ಥಿ ತಿಯಲ್ಲಿದೆ. ಅಧಿಕಾರವೂ ಕಾಂಗ್ರೆಸ್ ಬಳಿಯಿದೆ. ಜತೆಗೆ ಗ್ಯಾರಂಟಿ ಯೋಜನೆಗಳು ಕೈಹಿಡಿದಿದ್ದು, ಮತದಾರರು ತಮ್ಮ ಜತೆಗಿದ್ದಾರೆ ಎಂಬ ನಂಬಿಕೆಯೂ ಕೈನಾಯಕರಲ್ಲಿದೆ. ಗ್ಯಾರಂಟಿ ಯೋಜನೆ ಸರ್ಕಾರದ ಕೈಹಿಡಿದಿದೆಯೋ? ಇಲ್ಲವೋ ಎಂಬುದು ಗೊತ್ತಾಗಬೇಕಾದರೆ ಲೋಕಸಭಾ ಚುನಾವಣೆಯ ಫಲಿತಾಂಶ ಬರಬೇಕಿದೆ. ಕಳೆದ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನಷ್ಟೆ ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಕನಿಷ್ಟವೆಂದರೂ 15ರಿಂದ20 ಸ್ಥಾನಗಳನ್ನು ಗೆಲ್ಲುವ ಭರವಸೆಯಲ್ಲಿದೆ. ಹಾಗೇನಾದರೂ ಆದರೆ ಕಾಂಗ್ರೆಸ್ ಗೆ ರಾಜ್ಯದಲ್ಲಿ ಆನೆ ಬಲ ಬಂದಂತಾಗುತ್ತದೆ. ಇದು ರಾಜಕೀಯ ಬೆಳವಣಿಗೆಗೆ ಕಾರಣವಾದರೂ ಅಚ್ಚರಿಯಿಲ್ಲ.

ಆಪರೇಷನ್ ಹಸ್ತನಾ? ಕಮಲನಾ?
ಈಗಾಗಲೇ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ರಾಜ್ಯದಲ್ಲಿ ಶಕ್ತಿ ಹೆಚ್ಚಾಗಿದೆ ಎಂದು ಮೈತ್ರಿ ನಾಯಕರು ಹೇಳಿಕೊಳ್ಳುತ್ತಿದ್ದರೂ ಶಾಸಕರು ಸೇರಿದಂತೆ ಹಲವು ನಾಯಕರು ಇದನ್ನು ಮೇಲ್ನೋಟಕ್ಕೆ ಒಪ್ಪಿಕೊಂಡಂತೆ ಕಂಡರೂ ಅದರಾಚೆಗೆ ಅವರಲ್ಲಿ ತಳಮಳವಂತು ಇದ್ದೇ ಇದೆ. ಹೀಗಾಗಿ ಅವರು ಸದ್ಯ ತಟಸ್ಥವಾಗಿದ್ದುಕೊಂಡೇ ಕಾಂಗ್ರೆಸ್ ನತ್ತ ಒಲವು ತೋರಿಸಿದರೆ ಅಚ್ಚರಿಯಿಲ್ಲ.
ಲೋಕಫಲಿತಾಂಶ ಕಾಂಗ್ರೆಸ್ ಗೆ ಪೂರಕವಾದರೆ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಉಳಿಯೋದು ಕಷ್ಟವಾಗಬಹುದು. ಒಂದು ವೇಳೆ ಮೈತ್ರಿ ಆಶಾದಾಯಕ ಸ್ಥಾ ನಗಳನ್ನು ಗೆದ್ದರೆ ಮುಂದಿನ ದಿನಗಳಲ್ಲಿ ಮೈತ್ರಿಯಾಗಿದ್ದುಕೊಂಡೇ ಚುನಾವಣೆಗಳನ್ನು ಎದುರಿಸಬಹುದು. ಇದೆರಡು ಬೆಳವಣಿಗೆಯೂ ಫಲಿತಾಂಶದ ಮೇಲೆಯೇ ನಿಂತಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣದಿಂದ ಬಿಜೆಪಿ ಮತ್ತು ಜೆಡಿಎಸ್ ನಿಂದ ಒಂದಷ್ಟು ನಾಯಕರು ಅತ್ತ ಮುಖ ಮಾಡಿದರೂ ಮಾಡಬಹುದು.
ಪೆನ್ ಡ್ರೈವ್ ಮೈತ್ರಿಗೆ ಅಡ್ಡಗಾಲು ಆಗುತ್ತಾ?
ಲೋಕಸಭಾ ಚುನಾವಣೆ ಫಲಿತಾಂಶ(ಜೂ.4) ಬಂದ ಬಳಿಕ ರಾಜ್ಯ ರಾಜಕೀಯದಲ್ಲಿ ಕೆಲವೊಂದು ಬದಲಾವಣೆಗಳು ಆಗುವ ಕುರಿತಂತೆ ರಾಜಕೀಯ ಪಡಸಾಲೆಗಳಲ್ಲಿ ಚರ್ಚೆಗಳು ಆರಂಭವಾಗಿವೆ. ಆದರೆ ಅದ್ಯಾವ ಬೆಳವಣಿಗೆ ಎಂಬುದನ್ನು ಈಗಲೇ ಹೇಳುವುದು ಕಷ್ಟವಾಗಬಹುದು. ಈಗಾಗಲೇ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಸದ್ದು ಮಾಡುತ್ತಿದ್ದು, ಇದು ಜೆಡಿಎಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಪರಿಣಾಮಗಳು ಮೈತ್ರಿ ಮಾಡಿಕೊಂಡ ತಪ್ಪಿಗೆ ಬಿಜೆಪಿ ಮೇಲೂ ಬೀರಿದೆ.
ರಾಜಕೀಯದಲ್ಲಿ ಎಲ್ಲ ವಿಚಾರಗಳು ಎಣಿಕೆಯಾಗುವುದರಿಂದ ಅದನ್ನು ರಾಜಕೀಯಕ್ಕೆ ಬಳಸಿಕೊಂಡು ಲಾಭಪಡೆಯುವವರು ಇಲ್ಲದಿಲ್ಲ. ಎರಡನೇ ಹಂತದ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದ ಕಾಲದಲ್ಲಿಯೇ ಪೆನ್ ಡ್ರೈವ್ ಸದ್ದು ಮಾಡಿತ್ತು. ಹೀಗಾಗಿ ಅದರಿಂದ ಮೈತ್ರಿಗೆ ತೊಂದರೆಯಾಗಿದೆಯಾ ಎಂಬುದು ಗೊತ್ತಾಗಬೇಕಿದೆ. ಇನ್ನು ಎಲ್ಲವೂ ರಾಜಕೀಯ ಲಾಭಕ್ಕಾಗಿ ನಡೆಯುವುದರಿಂದ ಮತ್ತು ನಾಯಕರಲ್ಲಿಯೂ ರಾಜಕೀಯ ಸ್ವಾರ್ಥ ಇರುವ ಕಾರಣದಿಂದ ರಾಜಕೀಯ ಬದಲಾವಣೆಗೆ ಲೋಕ ಫಲಿತಾಂಶ ಮುನ್ನುಡಿ ಬರೆದರೆ ಅಚ್ಚರಿ ಪಡಬೇಕಾಗಿಲ್ಲ












Click it and Unblock the Notifications