ಕೊನೆಗೂ ಹಾಸನದಿಂದ ಜೆಡಿಎಸ್ ಟಿಕೆಟ್ ಪಡೆದ ಸ್ವರೂಪ್ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 14: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ನ 49 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಸ್ವರೂಪ್ ಅವರು ಕೊನೆಗೂ ಟಿಕೆಟ್ ಪಡೆದಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಿಂದ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಾಕಷ್ಟು ಪ್ರಯತ್ನವನ್ನು ಸಹ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಕೂಡ ಸಾಕಷ್ಟು ಪಣ ತೊಟ್ಟಿದ್ದರು. ಆದರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರ ನಿರ್ಧಾರದಂತೆ ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್ ದೊರಕಿದೆ.

ಬೆಂಗಳೂರಿನಲ್ಲಿ ಜೆಡಿಎಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಸ್ವರೂಪ್ ಅವರು ಹರ್ಷ ವ್ಯಕ್ತಪಡಿಸಿದರು. ಬಳಿಕ ಮಾತನಾಡಿ, ಎಚ್‌ಡಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿ, ಎಚ್‌ಡಿ ರೇವಣ್ಣ, ಭವಾನಿ ರೇವಣ್ಣ ಅವರ ಆಶೀರ್ವಾದದಿಂದ ನನಗೆ ಟಿಕೆಟ್ ಸಿಕ್ಕಿದೆ. ಪಕ್ಷ ನನಗೆ ಅಭ್ಯರ್ಥಿಯಾಗಿ ಘೋಷಿಸಿದ್ದಕ್ಕೆ ನನಗೆ ಸಂತಸವಾಗಿದೆ.
ರೇವಣ್ಣ ಅವರು ನನಗೆ ಬೆಂಬಲ ನೀಡಿದ್ದಾರೆ. ಹಾಸನದಲ್ಲಿ ಈ ವಿಧಾನಸಭಾ ಚುನಾವಣೆ ದುರಂಕಾರದಿಂದ ನಡೆದವರಿಗೆ ಉತ್ತರ ನೀಡಲಾಗುತ್ತದೆ. ನಮ್ಮ ತಂದೆ ಅವರು ಕೂಡ ಇಲ್ಲಿ 6 ಬಾರಿ ಶಾಸಕರಾಗಿ ಆಯ್ಕೆಯಾದವರು. ನಮ್ಮಲ್ಲೂ ಕೂಡ ಮತಗಳ ವ್ಯತ್ಯಾಸವಾಗಿರಬಹುದು. ಆದರೆ ಈ ಬಾರಿ ಎಲ್ಲೂ ಕೂಡ ತಪ್ಪುಗಳು ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ನಿಯತ್ತಿನಿಂದ ನಾವು ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದರು.
ಹಾಸನ ಟಿಕೆಟ್ ವಿಚಾರವಾಗಿ ಮಾತನಾಡಿದ ಎಚ್‌ಡಿ ರೇವಣ್ಣ ಅವರು ಹಾಸನದಿಂದ ಸ್ವರೂಪ್ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಭವಾನಿ ರೇವಣ್ಣ ಅವರು ನನಗೆ ಮಾವನವರ ಆರೋಗ್ಯ ಮುಖ್ಯ ಎಂದು ಹೇಳಿದ್ದಾರೆ ಎಂದರು.












Click it and Unblock the Notifications