Gali Janardhana Reddy: ಜನಾರ್ದನ ರೆಡ್ಡಿ ಮೇಲಿದ್ದ ನೂರಕ್ಕೂ ಹೆಚ್ಚು ಪ್ರಕರಣಗಳು ಈಗ ಏನಾಗಿದೆ..?
ಬೆಂಗಳೂರು, ಏಪ್ರಿಲ್ 03: ಒಬ್ಬ ಸಾಮಾನ್ಯ ಮನುಷ್ಯನನ್ನು ನಿಲ್ಲಿಸಿ ನೂರು ಜನ ಗುಂಡಿನ ದಾಳಿ ನಡೆಸಿದರೆ ಹೇಗಾಗುತ್ತದೆಯೋ ಅಂತಹ ಪರಿಸ್ಥಿತಿ ನನ್ನದಾಗಿತ್ತು. ಇದೇ ರೀತಿ ನನ್ನ ಮೇಲೆ ಸುಮಾರು ನೂರ ಇಪ್ಪತ್ತಕ್ಕೂ ಹೆಚ್ಚು ಎಲ್ಲಾ ಇಲಾಖೆಯಲ್ಲೂ ಪ್ರಕರಣ ದಾಖಲಾಗಿತ್ತು. ಒಬ್ಬ ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸಲು ಎಷ್ಟೆಲ್ಲಾ ಪ್ರಕರಣ ದಾಖಲು ಮಾಡಬೇಕೋ ಅಷ್ಟೆಲ್ಲಾ ಪ್ರಕರಣವನ್ನು ದಾಖಲು ಮಾಡಿದ್ದರು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ತಮ್ಮ ಮೇಲಿನ ಪ್ರಕರಣಗಳು ಏನಾಯ್ತು ಎನ್ನುವುದರ ಬಗ್ಗೆ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಇಂದು ನನಗೆ ನ್ಯಾಯಾಲಯದ ಮೇಲಿರುವ ನಂಬಿಕೆಯಿಂದ, ಕಳೆದ ಹನ್ನೆರಡು ವರ್ಷಗಳಲ್ಲಿ ಎಲ್ಲಾ ಪ್ರಕರಣಗಳಿಂದ ಹೊರಗಡೆ ಬಂದಿದ್ದೇನೆ. ಸದ್ಯ ಕರ್ನಾಟಕದಲ್ಲಿ ನಾಲ್ಕು ಪ್ರಕರಣಗಳನ್ನು ಒಂದುಗೂಡಿಸಿ ಒಂದೇ ಪ್ರಕರಣವಾಗಿಸಿ ತನಿಖೆ ನಡೆಯುತ್ತಿದೆ. ಇನ್ನೊಂದು ಪ್ರಕರಣ ಸೇರಿ ಒಟ್ಟು ಕರ್ನಾಟಕದಲ್ಲಿ ಎರಡು ಪ್ರಕರಣವಿದೆ. ಜೊತೆಗೆ ಆಂಧ್ರದಲ್ಲಿ ಒಂದು ಪ್ರಕರಣ ಇದೆ. ಸದ್ಯ ಮೂರು ಪ್ರಕರಣಗಳು ನನ್ನ ಮೇಲೆ ನಡೆಯುತ್ತಿದೆ ಎಂದು ಹೇಳಿದರು.

ಈ ಮೂರು ಪ್ರಕರಣದಲ್ಲಿ ಸಿಬಿಐ ಅವರು ಚಾರ್ಜ್‌ಶೀಟ್ ಏನು ಸಲ್ಲಿಕೆ ಮಾಡಿದ್ದಾರೆ. ಅವರು ನನ್ನ ಮೇಲೆ ಆರೋಪ ಮಾಡಿರುವ ಮೊತ್ತ ಎರಡು ರಾಜ್ಯಗಳಲ್ಲಿ ಸೇರಿ 887 ಕೋಟಿ ರೂಪಾಯಿಯನ್ನು ನಾನು ಅಕ್ರಮವಾಗಿ ಸಂಪಾದನೆ ಮಾಡಿದ್ದೇನೆ ಎಂದು ಚಾರ್ಜ್‌ಶೀಟ್ ಹಾಕಿದ್ದಾರೆ. ಅವರ ಯುಪಿಐ ಸರ್ಕಾರ ಇರುವ ಸಮಯದಲ್ಲಿ ಅವರ ಕೈಯಲ್ಲಿದ್ದ ಸಿಬಿಐ ಅವರೇ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು. ಪ್ರಧಾನಿ ಮೋದಿ ಸರ್ಕಾರ ಬಂದ ಮೇಲೆ ಯಾವುದೇ ಚಾರ್ಜ್‌ಶೀಟ್ ಸಲ್ಲಿಕೆ ಆಗಿಲ್ಲ ಎಂದರು.
ಇನ್ನು ಪ್ರಕರಣ ಸಂಬಂಧ ನನ್ನನ್ನು ನಾಲ್ಕು ವರ್ಷ ಜೈಲಿನಲ್ಲಿಟ್ಟು, ದೇಶ-ವಿದೇಶಿಗಳಿಗೆ ತೆರಳಿ ನನ್ನ ಬಗ್ಗೆ ಅಪಪ್ರಚಾರ ಮಾಡಿ, ಮಾಧ್ಯಮಗಳಿಗೆ ಸುಳ್ಳು ಮಾಹಿತಿಯನ್ನು ನೀಡಿದರು. ಯಾಕೆಂದರೆ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಬಂಧನ ಮಾಡಿದರೆ, ಆ ವ್ಯಕ್ತಿಯನ್ನು ತಪ್ಪಿತಸ್ಥನಾಗಿ ಮಾಡಲು ಎಷ್ಟೆಲ್ಲಾ ಅಪಪ್ರಚಾರ ಮಾಡಬೇಕು ಅಷ್ಟೆಲ್ಲಾ ಮಾಡಿದರು, ಅದಕ್ಕೆ ಈಗ ಅನುಭವಿಸಬೇಕಾದವರು ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಸಾರ್ವಜನಿಕವಾಗಿ ಯಾವಾಗಲೂ ಹೇಳುತ್ತೇನೆ. ನಾನು ಯಾವ ತಪ್ಪೂ ಮಾಡದ ಕಾರಣ, ನನ್ನ ಬಗ್ಗೆ ನನಗೆ ವಿಶ್ವಾಸ ಇರುವ ಕಾರಣ ದೇವರು ನನಗೆ ಬಿಪಿ, ಶುಗರ್ ಇತರ ಆರೋಗ್ಯ ಸಮಸ್ಯೆ ಯಾವುದನ್ನೂ ಕೊಟ್ಟಿಲ್ಲ. ನಾನು ಯಾವ ತಪ್ಪನ್ನೂ ಮಾಡಿಲ್ಲ. ಆ ಧೈರ್ಯವೇ ನನ್ನನ್ನು ಆರೋಗ್ಯಕರವಾಗಿ ಇಟ್ಟಿದೆ ಎಂದು ಹೇಳಿದರು.












Click it and Unblock the Notifications