Micro Finance: ಮೈಕ್ರೋ ಫೈನಾನ್ಸ್ ಎಂದರೇನು?, ಇವುಗಳ ಕಿರುಕುಳ ಸರ್ಕಾರ ತಡೆಯುವುದು ಹೇಗೆ?
ಬೆಂಗಳೂರು, ಫೆಬ್ರವರಿ 05: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್‌ಗಳ ವಿಚಾರ ಭಾರೀ ಚರ್ಚೆಯಲ್ಲಿದೆ. ಸಾಲ ನೀಡುವುದು, ಸಾಲ ವಸೂಲಿ ಮಾಡಲು ಕಿರುಕುಳ ನೀಡುವುದು, ಇವುಗಳನ್ನು ತಡೆಯಲು ಸರ್ಕಾರದ ಕ್ರಮ ಈ ಕುರಿತು ಚರ್ಚೆಗಳು ಸಾಗಿವೆ. ಮೈಕ್ರೋ ಫೈನಾನ್ಸ್‌ಗಳ ಸಾಲ ವಾಪಸ್ ಕಿರುಕುಳಕ್ಕೆ ಬೇಸತ್ತು ರಾಜ್ಯದಲ್ಲಿ 10ಕ್ಕೂ ಅಧಿಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಡೆಯುವ ಕುರಿತು ಸಭೆ ನಡೆದಿದೆ. ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕರ್ನಾಟಕ ವಲಯದ ಅಧ್ಯಕ್ಷರು, ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾಂತೀಯ ನಿರ್ದೇಶಕರು, ಪೊಲೀಸರು, ಕಂದಾಯ, ಸಹಕಾರ ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕರ್ನಾಟಕ ಸರ್ಕಾರ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು, ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು, ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ.
ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ ಕೈ ಸಾಲ ಪಡೆಯುವ ಪದ್ಧತಿ ರೂಢಿಯಲ್ಲಿದೆ. ಬಹುತೇಕರು ಪಡೆದ ಸಾಲವನ್ನು ವಾಪಸ್ಸು ನೀಡುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಸಾಮಾಜಿಕ, ವೈಯಕ್ತಿಕ ಅಥವಾ ಉತ್ಪಾದಕವಲ್ಲದ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವುದರಿಂದ, ಮರುಪಾವತಿ ಕ್ಷಮತೆ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಲ ನೀಡಿದವರು ಮರು ವಸೂಲಿಗಾಗಿ ಒತ್ತಾಯಿಸುತ್ತಾರೆ. ಕೆಲವೆಡೆ ಇದು ಕಿರುಕುಳವಾಗಿ ಬೆಳೆಯುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಎಂದರೇನು?: 3 ಲಕ್ಷ ರೂ. ವರೆಗೂ ಆದಾಯವಿರುವ ಸಾರ್ವಜನಿಕರಿಗೆ ಸಾಲವನ್ನು ಒದಗಿಸುವ ವ್ಯವಸ್ಥೆಯನ್ನು ಮೈಕ್ರೋ ಫೈನಾನ್ಸ್ ಎಂದು ಘೋಷಣೆ ಮಾಡಲಾಗಿದೆ. ಬ್ಯಾಂಕುಗಳಲ್ಲದ ಸಹಕಾರ ಸಂಘಗಳು, ಎನ್‌ಬಿಎಫ್‌ಸಿಗಳು, ಸರ್ಕಾರೇತರ ಸಂಸ್ಥೆಗಳು, ಟ್ರಸ್ಟ್‌ಗಳು, ಸಣ್ಣ ಅಂಗಡಿ ಮಾಲೀಕರು, ಇನ್ನಿತರರು ಸಾಲ ನೀಡುತ್ತಾರೆ.
ಸಹಕಾರಿ ಸಂಸ್ಥೆಗಳ ಮೇಲ್ವಿಚಾರಣೆಯನ್ನು ಸಹಕಾರ ಇಲಾಖೆ. ಬ್ಯಾಂಕ್ ಅಲ್ಲದ ಆರ್ಥಿಕ ಸಂಸ್ಥೆಗಳ (ಎನ್‌ಬಿಎಫ್‌ಸಿ) ಮೇಲ್ವಿಚಾರಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೂಲಕ ನೋಂದಣಿ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕೇವಲ 31 ಮೈಕ್ರೋ ಫೈನಾನ್ಸ್ ಕಂಪನಿಗಳು ಅಸ್ತಿತ್ವದಲ್ಲಿವೆ. ಈ 31 ಸಂಸ್ಥೆಗಳು ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್ ಸದಸ್ಯತ್ವ ಪಡೆದಿವೆ.
ರಾಜ್ಯದಲ್ಲಿ ಈ ಸಂಸ್ಥೆಗಳ 3090 ಶಾಖೆಗಳಿದ್ದು 37,967 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. 1,09,88,332 ಖಾತೆಗಳಲ್ಲಿ 59,367.76 ಕೋಟಿ ರೂ. ಬಾಕಿ ಉಳಿದಿದೆ. ನಿಯಮಗಳನ್ನು ಪಾಲಿಸದ ಹಣಕಾಸು ಸಂಸ್ಥೆಗಳ ಬಗ್ಗೆ ಮೇಲ್ವಿಚಾರಣಾ ಸಂಸ್ಥೆಗಳ ಮೂಲಕ ಭಾರತೀಯ ರಿಸರ್ವ್ ಬ್ಯಾಂಕಿಗೆ ವರದಿ ನೀಡಲಾಗುತ್ತದೆ ಮತ್ತು ಆರ್‌ಬಿಐ ಒಪ್ಪಿಗೆಯೊಂದಿಗೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ.
ಅಧಿ ನಿಯಮಗಳು: ಕರ್ನಾಟಕ ಲೇವಾದೇವಿದಾರರ ಅಧಿನಿಯಮ-1961 ಅಡಿಯಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಈ ಅಧಿನಿಯಮದಡಿಯಲ್ಲಿ 2024ರ ಡಿಸೆಂಬರ್ 31 ರವರೆಗೆ 20,425 ಸಂಸ್ಥೆಗಳು ನೋಂದಣಿಯಾಗಿವೆ. ಅದರಲ್ಲಿ 6590 ಲೇವಾದೇವಿದಾರರು, 6772 ಪಾನ್ ಬ್ರೋಕರ್‌ಗಳು, 7063 ಹಣಕಾಸಿನ ಸಂಸ್ಥೆಗಳು.
ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯಿದೆ- 2004 ಪ್ರಕಾರ ಭದ್ರತಾ ಸಾಲಗಳಿಗೆ ವರ್ಷಕ್ಕೆ ಶೇ.14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ವರ್ಷಕ್ಕೆ ಗರಿಷ್ಠ ಶೇ.16 ಗರಿಷ್ಠ ಬಡ್ಡಿ ದರವನ್ನು ಲೇವಾದೇವಿದಾರರಿಗೆ ನಿಗದಿಪಡಿಸಲಾಗಿದೆ.
ಇಂತಹ ಮಾಹಿತಿಗಳನ್ನು ಸಾರ್ವಜನಿಕವಾಗಿ ಫಲಕಗಳ ಮೂಲಕ ಪ್ರದರ್ಶಿಸಲು ಸಂಸ್ಥೆಗಳು ಹಾಗೂ ಸಂಬಂಧಿಸಿದ ಕಛೇರಿಗಳಿಗೆ ತಿಳಿಸಲಾಗಿದೆ. ಸಾಲಗಾರರು ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಾಲ ಪಡೆಯುವ ಮುನ್ನ ಲೇವಾದೇವಿ ಸಂಸ್ಥೆಗಳ ಅಧಿಕೃತ ನೋಂದಣಿ ಪತ್ರ, ಬಡ್ಡಿದರ, ವಸೂಲಿ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕ್ರಮಗಳು
* ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್ (ಎಂಎಫ್‌ಐ), ಮನಿ ಲೆಂಡಿಂಗ್ ಏಜೆನ್ಸಿ ಅಥವಾ ಸಂಸ್ಥೆಯಿಂದ ನೀಡುವ ಎಲ್ಲಾ ಸಾಲಗಳ ಮಂಜೂರಾತಿ, ವಿತರಣೆಯ ಪ್ರಕ್ರಿಯೆಯಲ್ಲಿ ಈ ಅಂಶಗಳನ್ನು ಅನುಸರಿಸಬೇಕು.
* ಸಾಲಗಾರನಿಗೆ ಸಾಲದ ನಿಯಮಗಳ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಅಥವಾ ಆತನಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು. ಸಾಲದ ಅರ್ಜಿಯಲ್ಲಿ ಷರತ್ತುಗಳ ಬಗ್ಗೆ ಮಾಹಿತಿ ನೀಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಬೇಕು.
* ಯಾವ ದಾಖಲೆಗಳನ್ನು ನೀಡುವ ಅವಶ್ಯಕತೆ ಇದೆ ಎನ್ನುವ ಸೂಕ್ತ ಮಾಹಿತಿ ನೀಡಬೇಕು. ನಗದು ಪುಸ್ತಕ, ಲೆಡ್ಜರ್ ಮತ್ತು ಇತರ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.
* ಸಾಲ ನೀಡಿದ ದಿನಾಂಕದಿಂದ 7 ದಿನಗಳ ಒಳಗೆ ಸಾಲಗಾರನಿಗೆ ನಿಗದಿತ ನಮೂನೆಯಲ್ಲಿ ಸಾಲದ ಮೊತ್ತ, ನೀಡಿದ ದಿನಾಂಕ ಮತ್ತು ಅವಧಿಯ ಮುಕ್ತಾಯ, ಸಂಸ್ಥೆಯ ಕಾರ್ಯನಿರ್ವಾಹಕರ ಹೆಸರು ಮತ್ತು ವಿಳಾಸ, ನಿಯಮಾನುಸಾರ ವಿಧಿಸಲಾಗುವ ಬಡ್ಡಿದರ ಸ್ಪಷ್ಟವಾಗಿರುವ ಲಿಖಿತ ದಾಖಲೆಯನ್ನು ತಲುಪಿಸಬೇಕು.
* ಸಾಲಗಾರನು ಮಾಡುವ ಪಾವತಿಗೆ ಪ್ರತಿಯಾಗಿ ಸಹಿ ಮಾಡಿದ ರಶೀದಿ ನೀಡಬೇಕು. ಸಾಲಗಾರನ ಲಿಖಿತ ಬೇಡಿಕೆಯ ಮೇರೆಗೆ ಸಾಲಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯ ನಕಲನ್ನು ನೀಡಬೇಕು.
* ಸಾಲಗಾರರಿಂದ ಪಡೆದ ಭದ್ರತೆಯನ್ನು ಸ್ಪಷ್ಟವಾಗಿ ತಿಳಿಸಬೇಕು. ಜನಸಾಮಾನ್ಯರು ಈ ವಿಧಾನಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು. ತಮ್ಮ ಅಧಿಕೃತ ಹಕ್ಕುಗಳು, ಬಾಧ್ಯತೆಗಳ ಬಗ್ಗೆ ಖಚಿತ ಪಡಿಸಿಕೊಂಡ ನಂತರ ಸಾಲ ತೆಗೆದುಕೊಳ್ಳಬೇಕು.
ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಹಲವು ಕಡೆ ಬಳಕೆ ಸಾಲವನ್ನು ಪಡೆಯುವ ವ್ಯವಸ್ಥೆ ಇದೆ. ಇವುಗಳಲ್ಲಿ ಶೇ. 99 ರಷ್ಟು ಯಶಸ್ವಿಯಾಗಿ ಮರುಪಾವತಿ ಕೂಡ ಆಗುತ್ತವೆ. ಬ್ಯಾಂಕುಗಳಲ್ಲಿ ಇರುವಂತೆ ದಾಖಲಾತಿ ಒದಗಿಸುವ, ಜಾಮೀನು ನೀಡುವ ಹಾಗೂ ತಮ್ಮ ಆಸ್ತಿಗಳ ಅಡಮಾನ ಮಾಡುವ ಕ್ಲಿಷ್ಟ ವಿಧಾನ ಇಲ್ಲಿರುವುದಿಲ್ಲ. ಸರಳ ವಿಧಾನ ಅನುಸರಿಸಿ ಸಾಲ ಸಿಗುವುದರಿಂದ ಜನರು ಇಂತಹ ವ್ಯವಸ್ಥೆಗಳಿಗೆ ಹೆಚ್ಚಾಗಿ ಮೊರೆ ಹೋಗುತ್ತಾರೆ.
ಬಡಜನರ ಅವಶ್ಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಕೆಲವು ವ್ಯಕ್ತಿಗಳು, ಅನಧಿಕೃತ ಲೇವಾದೇವಿದಾರರು ಜನರ ತುರ್ತು ಅವಶ್ಯಕತೆಗೆ ಹಣ ನೀಡಿ, ಹೆಚ್ಚು ಬಡ್ಡಿ ವಿಧಿಸಿ ಶೋಷಣೆ ಮಾಡುತ್ತಾರೆ. ಅಂತಹ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗಳಿಗೆ ದೂರು ನೀಡಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯವಾಣಿ ಸಂಖ್ಯೆ 14448, ರಾಜ್ಯ ಸರ್ಕಾರದ ಸಹಾಯವಾಣಿ ಸಂಖ್ಯೆ 112 ಅಥವಾ 1902.












Click it and Unblock the Notifications