ಕೀಟೋ ಡಯೆಟ್ ಎಂದರೇನು? ದಿಢೀರ್ ತೂಕ ಇಳಿಸುವುದರಿಂದ ದೇಹದ ಮೇಲಾಗುವ ಪರಿಣಾಮವೇನು?
ಬೆಂಗಳೂರು, ಆಗಸ್ಟ್ 08: ಕನ್ನಡ ಚಿತ್ರರಂಗದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ನಿಧನದಿಂದ ಹಲವರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಆಗಿದೆ. ಸ್ಪಂದನಾ ಇತ್ತೀಚಿಗೆ 16 ಕೆ.ಜಿ ಕಡಿಮೆ ಆಗಿದ್ದರು ಎನ್ನುವ ಮಾಹಿತಿ ಹರಿದಾಡುತ್ತಿದ್ದು, ತೂಕ ಇಳಿಸಿದ್ದೇ ತಪ್ಪಾಯ್ತಾ ಎನ್ನುವ ಅನುಮಾನ ಹಲವರಲ್ಲಿದೆ.
ಈ ಮಧ್ಯೆ ಡಯಟ್ ಮಾಡುವ ವಿಧಾನ ಹಾಗೂ ಒಬ್ಬೊಬ್ಬರು ಅನುಸರಿಸುವ ಡಯಟ್ ಪದ್ಧತಿ ಅತೀ ಹೆಚ್ಚು ಚರ್ಚೆಯಲ್ಲಿದೆ. ಸದ್ಯ ಟ್ರೆಂಡಿಂಗ್ ಅಲ್ಲಿರುವ ಬೇಗನೇ ಸಣ್ಣ ಆಗಬೇಕು ಎಂದು ಬಯಸುವವರಿಗಾಗಿ ಕಿಟೋ ಡಯಟ್ ಜನಪ್ರಿಯತೆ ಪಡೆದಿದ್ದು, ಸದ್ಯ ಚರ್ಚೆಯಲ್ಲಿದೆ. ಹಾಗಾದರೆ ಏನಿದು ಕೀಟೋ ಡಯಟ್ ಇದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಇದರ ಅನಾನುಕೂಲ ಏನು? ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಸಿಲಿಕಾನ್ ಸಿಟಿಯಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಆಗುತ್ತಿರುವುದು ಈ ಕೀಟೋ ಡಯಟ್ ಫುಡ್. ಅದರಲ್ಲೂ ತೂಕವನ್ನು ಅತಿ ಬೇಗ ಕಡಿಮೆ ಮಾಡುವುದರಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಬಹುದು. ಕೀಟೋ ಡಯಟ್‌ನಲ್ಲಿರುವವರು ಎಚ್ಚರದಿಂದ ಇರುವುದು ಒಳ್ಳೆಯದು ಎಂದು ತಜ್ಞ ವೈದ್ಯರು ಹೇಳುತ್ತಾರೆ.
ಯಾಕೆಂದರೆ ಅತಿಯಾದ ಕೀಟೋ ಫುಡ್ ಡಯಟ್ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಡಯಟ್ ಅನುಸರಿಸುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಈ ಆಹಾರದಲ್ಲಿ ಅತಿಯಾದ ಪ್ರೋಟಿನ್ ಅಂಶಗಳು ಹೆಚ್ಚಾಗಿ ಇರುತ್ತದೆ. ಕಾರ್ಬೋಹೈಡ್ರೇಟ್ ಇರುವುದಿಲ್ಲ. ನಮ್ಮ ದೇಹಕ್ಕೆ ಪ್ರೋಟಿನ್ ಜೊತೆಗೆ ಕಾರ್ಬೋಹೈಡ್ರೇಟ್ ಕೂಡಾ ತುಂಬಾ ಮುಖ್ಯವಾಗುತ್ತದೆ. ಅತಿಯಾದ ಪ್ರೋಟಿನ್ ಫುಡ್‌ಗಳಿಂದ ರಕ್ತನಾಳಗಳಿಗೆ ಹಾನಿ ಆಗುತ್ತದೆ. ಇದರಿಂದ ಹೃದಯಾಘಾತದ ಸಾಧ್ಯತೆಗಳು ಹೆಚ್ಚಾಗುತ್ತದೆ. ಹೀಗಾಗಿ ಕೀಟೋ ಡಯಟ್ ಒಂದು ಹಂದಲ್ಲಿ ಇರಲಿ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದ್ದಾರೆ.
ಹಾಗಾದರೆ ಈ ಕೀಟೋ ಡಯಟ್ ಎಂದರೇನು? ಈ ಬಗ್ಗೆ ನೋಡೋದಾದರೆ, ದೇಹಕ್ಕೆ ಹೆಚ್ಚು ಪ್ರೋಟಿನ್ ಹಾಗೂ ಕೊಬ್ಬಿನ ಅಂಶ ಕೊಡುವ ಆಹಾರ ಪದ್ಧತಿಯೇ ಈ ಕಿಟೋ ಡಯಟ್. ಇದರಲ್ಲಿ ಅತೀ ಕಡಿಮೆ ಕಾರ್ಬೋಹೈಡ್ರೇಟ್ ಅಂಶ ಇರಲಿದೆ. ಶೇ.70% ಕೊಬ್ಬು, 25 ರಷ್ಟು ಪ್ರೋಟಿನ್ ಹಾಗೂ ಶೇ.5 ರಷ್ಟು ಮಾತ್ರ ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಮಾಂಸ, ಮೊಟ್ಟೆ, ಬಾದಾಮಿ, ಚೀಸ್, ಕ್ರೀಮ್, ಮೊಸರು, ಬೆಣ್ಣೆ, ಕೋಕೋ, ಹೆವಿ ಕ್ರೀಮ್, ಪನ್ನೀರ್, ಸೇರಿದಂತೆ ಅನೇಕ ಪ್ರೋಟೀನ್ ಸೇವನೆ ಮಾಡುತ್ತಾರೆ. ಅಕ್ಕಿ, ರಾಗಿ, ಮೈದಾ, ಬ್ರೆಡ್, ಕಾರ್ನ್, ಓಟ್ಸ್, ಸಕ್ಕರೆ, ಆಲೂಗಡ್ಡೆ, ಸಂಸ್ಕರಿಸಿದ ಎಣ್ಣೆ, ಸೇಬು, ಬಾಳೆಹಣ್ಣು ಇವುಗಳನ್ನು ಸೇವನೆ ಮಾಡುವುದಿಲ್ಲ.
ಈ ರೀತಿಯ ಆಹಾರ ಪದ್ಧತಿಯಿಂದ ದೇಹದ ಅಸಮತೋಲನ ಆಗುತ್ತದೆ. ಸಮತೋಲನತೆ ಇರುವುದಿಲ್ಲ. ಆಗ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ. ಹೀಗಾಗಿ ಆರೋಗ್ಯಕರವಾದ ಮಾರ್ಗದಲ್ಲಿ ತೂಕ ಇಳಿಸಬೇಕು. ವಾಕ್ ಮಾಡುವುದು, ನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದು, ಹಣ್ಣು ತರಕಾರಿ ಸೇವನೆ ಮಾಡುವುದು, ಆರೋಗ್ಯಕರವಾದ ಉತ್ತಮ ಆಹಾರ ಸೇವನೆ ಮಾಡಬೇಕು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾಕ್ಟರ್ ಸಿ.ಎನ್ ಮಂಜುನಾಥ್ ಹೇಳಿದ್ದಾರೆ.












Click it and Unblock the Notifications